ಕೋಲ್ಕತ್ತಾ: ಪಶ್ಚಿಮ ಬಂಗಾಳದ (West Bengal) ಕೋಲ್ಕತ್ತಾದಲ್ಲಿ ನಡೆದ ಭೀಕರ ಅಗ್ನಿ (Fire) ಅವಘಡದಲ್ಲಿ ಇತ್ತೀಚಿನ ವಿಧಾನಸಭಾ ಚುನಾವಣೆಯಲ್ಲಿ ಬಳಸಲಾಗಿದ್ದ ಸುಮಾರು 4,000 ಇವಿಎಂ (EVM) ಮತಯಂತ್ರಗಳು ಸುಟ್ಟು ಭಸ್ಮವಾಗಿವೆ.
ಕೋಲ್ಕತ್ತಾದ ಅಲಿಪೋರ್‌ನಲ್ಲಿರುವ ದಕ್ಷಿಣ 24 ಪರಗಣ ಜಿಲ್ಲಾ ಪರಿಷತ್‌ನ 10 ಮಹಡಿಗಳ ಆಡಳಿತಾತ್ಮಕ ಸರ್ಕಾರಿ ಕಟ್ಟಡದಲ್ಲಿ ಜೂನ್ 10ರ ಬುಧವಾರ ಬೆಳಗ್ಗೆ ಸುಮಾರು 9:50ಕ್ಕೆ ಈ ಬೆಂಕಿ ಕಾಣಿಸಿಕೊಂಡಿತ್ತು.
ಈ ದುರ್ಘಟನೆಯಲ್ಲಿ ಕಟ್ಟಡದ 8 ಮತ್ತು 9ನೇ ಮಹಡಿಗಳಲ್ಲಿ ಇರಿಸಲಾಗಿದ್ದ ಸುಮಾರು 4,000 ಇವಿಎಂಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿವೆ. ಈ ಇವಿಎಂ ಯಂತ್ರಗಳನ್ನು ಇತ್ತೀಚೆಗೆ ನಡೆದ ರಾಜ್ಯದ 10 ವಿಧಾನಸಭಾ ಕ್ಷೇತ್ರಗಳ ಚುನಾವಣೆಯಲ್ಲಿ ಬಳಸಲಾಗಿತ್ತು. ಇವಿಎಂಗಳ ಜೊತೆಗೆ ಶಾಲಾ ಮಧ್ಯಾಹ್ನದ ಬಿಸಿಊಟದ ಯೋಜನೆಗೆ ಸಂಬಂಧಿಸಿದ ಕಡತಗಳು ಸೇರಿದಂತೆ ಹಲವು ಪ್ರಮುಖ ಸರ್ಕಾರಿ ದಾಖಲೆಗಳು ಸಹ ಬೆಂಕಿಗೆ ಆಹುತಿಯಾಗಿವೆ.
ರಾಜ್ಯದ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಚಿವ ಕೌಶಿಕ್ ಚೌಧರಿ ಅವರು ಸ್ಥಳಕ್ಕೆ ಭೇಟಿ ನೀಡಿ, ಇದು ಸಾಮಾನ್ಯ ಅಗ್ನಿ ಅವಘಡದಂತೆ ಕಾಣಿಸುತ್ತಿಲ್ಲ ಎಂದು ಶಂಕಿಸಿದ್ದಾರೆ. ಘಟನೆಯ ನಿಖರ ಕಾರಣ ತಿಳಿಯಲು ನಾವು ವಿಧಿವಿಜ್ಞಾನ ವರದಿಗಾಗಿ ಕಾಯುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಕಟ್ಟಡದ 2 ಮತ್ತು 3ನೇ ಮಹಡಿಗಳಲ್ಲಿ ಮೊದಲು ಬೆಂಕಿ ಕಾಣಿಸಿಕೊಂಡಿತ್ತು.ಆದರೆ ಮಧ್ಯದಲ್ಲಿದ್ದ 4, 5 ಮತ್ತು 6ನೇ ಮಹಡಿಗಳಿಗೆ ಯಾವುದೇ ಹಾನಿ ಮಾಡದೆ, ಬೆಂಕಿಯು ನೇರವಾಗಿ ಮೇಲಿರುವ 7, 8 ಮತ್ತು 9ನೇ ಮಹಡಿಗಳಿಗೆ ಹೇಗೆ ವ್ಯಾಪಿಸಿತು ಎಂಬುದು ದೊಡ್ಡ ಪ್ರಶ್ನೆಯಾಗಿದೆ. ಇದು ನಮಗೆ ದೊಡ್ಡ ಆಶ್ಚರ್ಯ ತಂದಿದೆ ಕೌಶಿಕ್ ಚೌಧರಿ ಅನುಮಾನ ವ್ಯಕ್ತಪಡಿಸಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಅಲಿಪೋರ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ (FIR) ದಾಖಲಾಗಿದ್ದು, ಪೊಲೀಸರು ಮತ್ತು ವಿಧಿವಿಜ್ಞಾನ (Forensic) ತಜ್ಞರ ತಂಡವು ವಿಧ್ವಂಸಕ ಕೃತ್ಯ ಅಥವಾ ಪಿತೂರಿ ನಡೆದಿದೆಯೇ ಎಂಬ ಕೋನದಲ್ಲಿ ತನಿಖೆ ಆರಂಭಿಸಿದೆ. ಶಾರ್ಟ್ ಸರ್ಕ್ಯೂಟ್ ಅಥವಾ ಬೇರೆ ಯಾವುದೇ ಕಾರಣವಿದೆಯೇ ಎಂದು ತಿಳಿಯಲು ಮಾದರಿಗಳನ್ನು ಸಂಗ್ರಹಿಸಲಾಗಿದೆ. ಇದನ್ನೂ ಓದಿ: ಟಿಎಂಸಿ ‘ಪುಷ್ಪಾ’ ಜಹಾಂಗೀರ್ ಖಾನ್‌ಗೆ ಪೊಲೀಸರ ಶಾಕ್ – ಚಡ್ಡಿಯಲ್ಲಿ ಮೆರವಣಿಗೆ
🎥 | Around 4,000 Electronic Voting Machines (EVMs) were destroyed in a fire that broke out at a government building in Kolkata.#Kolkata #EVM #WestBengal #TheStatesman pic.twitter.com/07SWAm0VBh
— The Statesman (@TheStatesmanLtd) June 12, 2026
ಕಟ್ಟಡದ ಒಳಗಿದ್ದ ಮರದ ಪೀಠೋಪಕರಣಗಳು, ಭಾರಿ ಪ್ರಮಾಣದ ಕಾಗದದ ಕಡತಗಳು ಮತ್ತು ಎಸಿ (AC) ಯಂತ್ರಗಳು ಸುಲಭವಾಗಿ ಬೆಂಕಿ ಹರಡಲು ಕಾರಣವಾದವು. ಕಟ್ಟಡವು ತುಂಬಾ ಬಿಸಿಯಾಗಿದ್ದರಿಂದ ವಿಧಿವಿಜ್ಞಾನ ತಜ್ಞರಿಗೆ ಒಳಗೆ ಹೋಗಲು ಆರಂಭದಲ್ಲಿ ಕಷ್ಟವಾಗಿತ್ತು
ಈ ಕಟ್ಟಡವು ದಕ್ಷಿಣ 24 ಪರಗಣ ಜಿಲ್ಲಾ ಪರಿಷತ್ ಕಚೇರಿಯನ್ನು ಒಳಗೊಂಡಿದೆ. ಈ ಜಿಲ್ಲೆಯನ್ನು ತೃಣಮೂಲ ಕಾಂಗ್ರೆಸ್ (TMC) ಪಕ್ಷದ ಪ್ರಮುಖ ನಾಯಕ ಅಭಿಷೇಕ್ ಬ್ಯಾನರ್ಜಿ(Abhishek Banerjee) ಅವರ ಭದ್ರಕೋಟೆ ಎಂದು ಪರಿಗಣಿಸಲಾಗುತ್ತದೆ. ಇತ್ತೀಚೆಗೆ ಬಂಧನಕ್ಕೊಳಗಾಗಿದ್ದ ಟಿಎಂಸಿ ನಾಯಕ ಜಹಾಂಗೀರ್ ಖಾನ್(Jahangir Khan) ಅವರ ಕಚೇರಿಯೂ ಇದೇ ಕಟ್ಟಡದಲ್ಲಿತ್ತು.
ಮಮತಾ ಬ್ಯಾನರ್ಜಿ ಸರ್ಕಾರದಲ್ಲಿ ಜಹಂಗೀರ್ ಖಾನ್ ಜಿಲ್ಲಾ ಪರಿಷತ್‌ನ ರಸ್ತೆ ಮತ್ತು ಸಾರಿಗೆ ಸ್ಥಾಯಿ ಸಮಿತಿಯ ಅಧ್ಯಕ್ಷನಾಗಿ ಕಾರ್ಯನಿರ್ವಹಿಸುತ್ತಿದ್ದ. ಈ ಒಂಬತ್ತು ಮಹಡಿಗಳ ಸರ್ಕಾರಿ ಕಟ್ಟಡದ 3ನೇ ಮಹಡಿಯಲ್ಲಿ ಈತನ ಅಧಿಕೃತ ಕಚೇರಿ ಇತ್ತು. ಕೆಲವು ವರದಿಗಳ ಪ್ರಕಾರ ಬೆಂಕಿಯ ತೀವ್ರತೆ ಈತನ ಕಚೇರಿ ಇದ್ದ ಭಾಗದಲ್ಲೂ ಹೆಚ್ಚಾಗಿತ್ತು.
ಪ್ರಾಥಮಿಕವಾಗಿ ಎಸಿ (AC) ಯಂತ್ರದಲ್ಲಿ ಉಂಟಾದ ಶಾರ್ಟ್ ಸರ್ಕ್ಯೂಟ್ ಕಾರಣ ಇರಬಹುದು ಎಂದು ಶಂಕಿಸಲಾಗಿದ್ದರೂ, ಸಚಿವರಾದ ಕೌಶಿಕ್ ಚೌಧರಿ ಅವರು ವಿಧ್ವಂಸಕ ಕೃತ್ಯದ (Sabotage) ಶಂಕೆ ವ್ಯಕ್ತಪಡಿಸಿದ್ದಾರೆ. ಮಧ್ಯದ ಮಹಡಿಗಳನ್ನು ಬಿಟ್ಟು ಕೇವಲ ಇವಿಎಂ ಇದ್ದ ಮಹಡಿಗಳಿಗೇ ಬೆಂಕಿ ತಗುಲಿರುವುದು ಈ ಅನುಮಾನಕ್ಕೆ ಕಾರಣವಾಗಿದೆ. ಬಿಜೆಪಿ ನಾಯಕ ರಾಕೇಶ್ ಸಿಂಗ್ ಅವರು ಬೆಂಕಿಯನ್ನು ಯೋಜಿತ ಕೃತ್ಯ ಎಂದು ಆರೋಪಿಸಿದ್ದಾರೆ.
