– ಕಲ್ಯಾಣ ಕರ್ನಾಟಕ ಸಾರಿಗೆ ಇಲಾಖೆಯ `ಕಲ್ಯಾಣ’ ಇದೇನಾ?
– ಸಾರಿಗೆ ಇಲಾಖೆಯ ನಿರ್ಲಕ್ಷ್ಯಕ್ಕೆ ಪ್ರಯಾಣಿಕರ ಆಕ್ರೋಶ
ಕಲಬುರಗಿ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ(KKRTC) ಸೇರಿದ ಬಸ್‌ವೊಂದು ಹೆಡ್‌ಲೈಟ್ ಇಲ್ಲದೇ ರಾತ್ರಿ ವೇಳೆ ಸಂಚರಿಸಿದ್ದು, ಕಂಡಕ್ಟರ್ ಮೊಬೈಲ್ ಟಾರ್ಚ್(Mobil Torch) ಬೆಳಕಿನ ಸಹಾಯದಿಂದ ಚಾಲಕ ಬಸ್(Bus Driver) ಚಲಾಯಿಸಿರುವ ಘಟನೆ ಕಲಬುರಗಿಯಲ್ಲಿ(Kalaburagi) ನಡೆದಿದೆ.
ಕಲಬುರಗಿಯಿಂದ ಚಿಂಚೋಳಿ ತಾಲ್ಲೂಕಿಗೆ ತೆರಳುತ್ತಿದ್ದ ಕೊನೆಯ ಬಸ್‌ನಲ್ಲಿ ಈ ಘಟನೆ ನಡೆದಿದೆ. ಸುಮಾರು 90 ಕಿಲೋಮೀಟರ್ ದೂರದ ಮಾರ್ಗದಲ್ಲಿ ರಾತ್ರಿ ವೇಳೆ ಬಸ್‌ನ ಹೆಡ್‌ಲೈಟ್ ಕಾರ್ಯನಿರ್ವಹಿಸದಿದ್ದರೂ ಅದನ್ನು ದುರಸ್ತಿ ಮಾಡದೆ ಸಂಚಾರಕ್ಕೆ ಬಿಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ಕಳೆದ 15 ದಿನಗಳಿಂದ ಬಸ್‌ನ ಹೆಡ್‌ಲೈಟ್ ಕೆಟ್ಟು ಹೋಗಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ದುರಸ್ತಿ ಮಾಡಿಲ್ಲ ಎನ್ನಲಾಗಿದೆ. ಇದರಿಂದ ಚಾಲಕ ಮತ್ತು ಕಂಡಕ್ಟರ್ ಮೊಬೈಲ್ ಟಾರ್ಚ್ ಬೆಳಕಿನ ನೆರವಿನಿಂದ ಬಸ್ ಚಲಾಯಿಸುವ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದ್ದು, ಪ್ರಯಾಣಿಕರು ಜೀವವನ್ನು ಕೈಯಲ್ಲಿ ಹಿಡಿದು ಪ್ರಯಾಣಿಸಿದ್ದಾರೆ.
ಸಾರ್ವಜನಿಕರ ಸುರಕ್ಷತೆಗೆ ಮೊದಲ ಆದ್ಯತೆ ನೀಡಬೇಕಾದ ಸಾರಿಗೆ ಸಂಸ್ಥೆಯೇ ಈ ರೀತಿಯ ನಿರ್ಲಕ್ಷ್ಯ ತೋರಿರುವುದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಕೋಟ್ಯಂತರ ರೂಪಾಯಿ ಬಜೆಟ್ ಹೊಂದಿರುವ ಸರ್ಕಾರ ಮತ್ತು ಸಾರಿಗೆ ಇಲಾಖೆ, ಬಸ್‌ಗಳ ಮೂಲಭೂತ ನಿರ್ವಹಣೆಯಲ್ಲಿಯೇ ವಿಫಲವಾಗಿದೆಯೇ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.ಇದನ್ನೂ ಓದಿ: ಶಾಶ್ವತ ವಿದ್ಯುತ್ ಸಂಪರ್ಕ; ಅರ್ಜಿ ಸಲ್ಲಿಕೆಗೆ ಆ.15 ರವರೆಗೆ ಅವಧಿ ವಿಸ್ತರಣೆ
ರಾತ್ರಿ ವೇಳೆ ಹೆಡ್‌ಲೈಟ್ ಇಲ್ಲದ ಬಸ್ ಸಂಚಾರದಿಂದ ಯಾವುದೇ ಅನಾಹುತ ಸಂಭವಿಸಿದ್ದರೆ ಅದರ ಹೊಣೆ ಯಾರು ಹೊರುತ್ತಾರೆ ಎಂದು ಪ್ರಯಾಣಿಕರು ಪ್ರಶ್ನಿಸಿದ್ದಾರೆ. ಕೂಡಲೇ ಈ ಘಟನೆಯ ಕುರಿತು ತನಿಖೆ ನಡೆಸಿ, ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ಬಸ್‌ಗಳ ಸುರಕ್ಷತಾ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.ಇದನ್ನೂ ಓದಿ: ಚಿನ್ನ, ನಗದು ದೋಚಿ ಮಹಿಳೆಯನ್ನು ಬಾವಿಗೆ ತಳ್ಳಿದ ದುಷ್ಕರ್ಮಿ – 21 ಗಂಟೆ ಬಳಿಕ ರಕ್ಷಣೆ
