ವಾಷಿಂಗ್ಟನ್: ಡೊನಾಲ್ಡ್ ಟ್ರಂಪ್ (Donald Trump) ಅವರ ಹೆಸರಿನಲ್ಲಿರುವ ಮೆಮ್‌ಕಾಯಿನ್‌ಗಳಲ್ಲಿ (Memecoin) ಹೂಡಿಕೆ ಮಾಡಿದ ಲಕ್ಷಾಂತರ ಸಾಮಾನ್ಯ ಹೂಡಿಕೆದಾರರು ಬರೋಬ್ಬರಿ 3.8 ಬಿಲಿಯನ್ ಡಾಲರ್ (ಸುಮಾರು 31,000 ಕೋಟಿ ರೂ.ಗೂ ಅಧಿಕ) ಹಣವನ್ನು ಕಳೆದುಕೊಂಡಿದ್ದಾರೆ. ಆದರೆ ಇದೇ ಅವಧಿಯಲ್ಲಿ ಟ್ರಂಪ್ ಮಾತ್ರ ಬರೋಬ್ಬರಿ 636 ಮಿಲಿಯನ್ ಡಾಲರ್ (ಸುಮಾರು 5,300 ಕೋಟಿ ರೂ.) ಗಳಿಕೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಕ್ರಿಪ್ಟೋಕರೆನ್ಸಿ(Cryptocurrency) ಮಾರುಕಟ್ಟೆಯಲ್ಲಿ ತೀವ್ರ ಏರಿಳಿತಗಳು ಸಾಮಾನ್ಯ. ಆದರೆ ವರದಿಯೊಂದರ ಪ್ರಕಾರ ಟ್ರಂಪ್ ಅವರ ರಾಜಕೀಯ ಪ್ರಚಾರ ಮತ್ತು ಕ್ರಿಪ್ಟೋ ಮಾರುಕಟ್ಟೆಯ ಕ್ರೇಜ್ ಅನ್ನು ನಂಬಿ ಟ್ರಂಪ್ ಆಧಾರಿತ ರಾಜಕೀಯ ಮೆಮ್‌ಕಾಯಿನ್‌ಗಳಲ್ಲಿ (PolitiFi tokens) ಹಣ ಹೂಡಿದ ಹೂಡಿಕೆದಾರರು ಭಾರಿ ಬೆಲೆ ಕುಸಿತದಿಂದಾಗಿ ಬಿಲಿಯನ್‌ಗಟ್ಟಲೆ ಡಾಲರ್ ನಷ್ಟ ಅನುಭವಿಸಿದ್ದಾರೆ.
ನ್ಯೂಯಾರ್ಕ್ ಟೈಮ್ಸ್ ಪ್ರಕಾರ, ಜೂನ್ ಅಂತ್ಯದ ವೇಳೆಗೆ $TRUMP ಮೆಮೆಕಾಯಿನ್‌ನ ಪ್ರತಿ ಮೂರು ಖರೀದಿದಾರರಲ್ಲಿ ಇಬ್ಬರನ್ನು ಪ್ರತಿನಿಧಿಸುವ 988,905 ಕ್ರಿಪ್ಟೋ ವ್ಯಾಲೆಟ್‌ಗಳು ನಷ್ಟದಲ್ಲಿವೆ ಎಂದು ವರದಿ ತಿಳಿಸಿದೆ.$TRUMP ಟೋಕನ್ ಶುಕ್ರವಾರ 1.76 ಡಾಲರ್(167 ರೂ.) ವಹಿವಾಟು ನಡೆಸುತ್ತಿತ್ತು, ಜನವರಿ 2025 ರಲ್ಲಿ ಬಿಡುಗಡೆಯಾದ ಸ್ವಲ್ಪ ಸಮಯದ ನಂತರ ಅದರ ಸಾರ್ವಕಾಲಿಕ ಗರಿಷ್ಠ 75.35 ಡಾಲರ್(6,500 ರೂ.) ಹೋಲಿಸಿದರೆ 97% ರಷ್ಟು ಕುಸಿತ ಕಂಡಿದೆ.
ಮಾರುಕಟ್ಟೆಯಲ್ಲಿ ಹೂಡಿಕೆದಾರರು ನಷ್ಟ ಅನುಭವಿಸುತ್ತಿದ್ದರೂ, ಟ್ರಂಪ್ ಅವರ ಅಧಿಕೃತ ಕ್ರಿಪ್ಟೋ ವಾಲೆಟ್‌ಗಳಿಗೆ ಲಾಯಲ್ಟಿ, ರಾಯಲ್ಟಿ ಮತ್ತು ಟೋಕನ್ ಉಡುಗೊರೆಗಳ ರೂಪದಲ್ಲಿ ಭಾರೀ ಪ್ರಮಾಣದ ಹಣ ಹರಿದುಬಂದಿದೆ. ವಿವಿಧ ಕ್ರಿಪ್ಟೋ ಯೋಜನೆಗಳ ಪ್ರಚಾರ ಮತ್ತು ಹಕ್ಕುಗಳ ಮೂಲಕ ಅವರು ಈ 636 ಮಿಲಿಯನ್ ಡಾಲರ್ ಲಾಭ ಗಳಿಸಿದ್ದಾರೆ ಎಂದು ವರದಿ ಸಂಸ್ಥೆಗಳು ಬಹಿರಂಗಪಡಿಸಿವೆ. ಇದನ್ನೂ ಓದಿ: ಇರಾನ್ ಜನರು ಖಮೇನಿಯನ್ನು ದ್ವೇಷಿಸುತ್ತಿದ್ದರು, ಅಳೋದೆಲ್ಲ ಮೊಸಳೆ ಕಣ್ಣೀರು: ಟ್ರಂಪ್ ವ್ಯಂಗ್ಯ

ಟ್ರಂಪ್ ಗೆಲುವಿನ ಭರವಸೆಯ ಮೇಲೆ ಆರಂಭದಲ್ಲಿ ಗಗನಕ್ಕೇರಿದ್ದ ಈ ಕಾಯಿನ್‌ಗಳ ಮೌಲ್ಯ, ನಂತರದ ದಿನಗಳಲ್ಲಿ ದಿಢೀರ್ ಕುಸಿತ ಕಂಡಿದ್ದೇ ಹೂಡಿಕೆದಾರರ ಈ ದುಸ್ಥಿತಿಗೆ ಪ್ರಮುಖ ಕಾರಣ ಎನ್ನಲಾಗಿದೆ.
2024 ರ ಚುನಾವಣೆಯಲ್ಲಿ ಟ್ರಂಪ್‌ಗೆ ಮತ ಹಾಕಿದ ಕ್ರಿಪ್ಟೋ ವ್ಯಾಪಾರಿ ನಿಕೋಲಸ್ ಪಿಂಟೊ ಅವರು ಭಾರೀ ಹಣವನ್ನು ಕಳೆದುಕೊಂಡಿದ್ದಾರೆ. ಮೀಮ್‌ಕಾಯಿನ್‌ನಲ್ಲಿ ನಾನು ಸುಮಾರು 500,000 ಡಾಲರ್ ಹೂಡಿಕೆ ಮಾಡಿದ್ದಾರೆ ಮತ್ತು ಆ ಮೊತ್ತದ ಅರ್ಧದಷ್ಟು ಕಳೆದುಕೊಂಡಿದ್ದೇನೆ ಎಂದು ಹೇಳಿದರು.
ಟ್ರಂಪ್ ಮತ್ತು ಅವರೊಂದಿಗೆ ಸಂಪರ್ಕ ಹೊಂದಿದ ಕಂಪನಿಗಳು ಜನರು ಟೋಕನ್ ಅನ್ನು ಖರೀದಿಸಿದಾಗ ಅಥವಾ ಮಾರಾಟ ಮಾಡಿದಾಗಲೆಲ್ಲಾ ವಹಿವಾಟು ಶುಲ್ಕವನ್ನು ಗಳಿಸುವಂತೆ ಮೀಮ್‌ಕಾಯಿನ್ ಅನ್ನು ವಿನ್ಯಾಸಗೊಳಿಸಲಾಗಿದೆ. ಟ್ರಂಪ್ ಅವರು ಅಧ್ಯಕ್ಷರ ಮೇಲೆ ಜನರು ಇಟ್ಟಿರುವ ನಂಬಿಕೆಯನ್ನು ಟೋಕನ್ ಅನ್ನು ಪ್ರಚಾರ ಮಾಡಲು ಬಳಸುತ್ತಿದ್ದಾರೆ ಎಂದು ಪಿಂಟೊ ಆರೋಪಿಸಿದ್ದಾರೆ. ಅಷ್ಟೇ ಅಲ್ಲದೇ ಇದನ್ನು ಕಾನೂನು ಹಗರಣ ಎಂದು ಕರೆದಿದ್ದಾರೆ. ಇದನ್ನೂ ಓದಿ: ಟ್ರಂಪ್ ಕದನ ವಿರಾಮ ಘೋಷಣೆಯ 10 ನಿಮಿಷಕ್ಕೂ ಮೊದಲು 14 ಸಾವಿರ ಕೋಟಿ ರೂ. ಬೆಟ್ – ಇನ್‌ಸೈಡರ್ ಟ್ರೇಡಿಂಗ್ ಮಾಡಿದ್ಯಾರು?
ಮೆಮ್‌ಕಾಯಿನ್ ಎಂದರೇನು?
ಯಾವುದೇ ಗಟ್ಟಿಯಾದ ಆರ್ಥಿಕ ಹಿನ್ನೆಲೆ ಅಥವಾ ತಂತ್ರಜ್ಞಾನದ ಬೆಂಬಲವಿಲ್ಲದೆ, ಕೇವಲ ಇಂಟರ್ನೆಟ್ ಮೀಮ್‌ಗಳು (Memes), ಜೋಕ್‌ಗಳು ಅಥವಾ ಸಾಮಾಜಿಕ ಜಾಲತಾಣಗಳ ಟ್ರೆಂಡ್‌ಗಳ ಆಧಾರದ ಮೇಲೆ ಸೃಷ್ಟಿಯಾಗುವ ಒಂದು ಬಗೆಯ ಕ್ರಿಪ್ಟೋಕರೆನ್ಸಿಯನ್ನು (Cryptocurrency) ಮೆಮ್‌ಕಾಯಿನ್ ಎನ್ನಲಾಗುತ್ತದೆ. ಇವುಗಳಲ್ಲಿ ಹೂಡಿಕೆ ಮಾಡುವುದು ಅತ್ಯಂತ ಅಪಾಯಕಾರಿ ಎಂದು ಮಾರುಕಟ್ಟೆ ತಜ್ಞರು ಸದಾ ಎಚ್ಚರಿಸುತ್ತಿರುತ್ತಾರೆ.
ಮೆಮ್‌ಕಾಯಿನ್ (Memecoin) ವುಗಳಿಗೆ ಯಾವುದೇ ನೈಜ ಆರ್ಥಿಕ ಮೌಲ್ಯ ಅಥವಾ ತಾಂತ್ರಿಕ ಹಿನ್ನೆಲೆ ಇರುವುದಿಲ್ಲ. ಕೇವಲ ಜನರ ಹೈಪ್ (Hype) ಮತ್ತು ಆನ್‌ಲೈನ್ ಕ್ರೇಜ್‌ನಿಂದಾಗಿ ಇವುಗಳ ಬೆಲೆ ಏರಿಳಿತವಾಗುತ್ತದೆ. ಕೇವಲ ಕೆಲವೇ ಗಂಟೆಗಳಲ್ಲಿ ಇವುಗಳ ಬೆಲೆ ಸಾವಿರಾರು ಪಟ್ಟು ಹೆಚ್ಚಾಗಬಹುದು ಅಥವಾ ಅಷ್ಟೇ ವೇಗವಾಗಿ ಶೂನ್ಯಕ್ಕೆ ಕುಸಿಯಬಹುದು.
