ಹುಬ್ಬಳ್ಳಿ: ಬಾಲ್ಯದಲ್ಲಿ ಶಾಲಾ ಶುಲ್ಕ ಪಾವತಿಸಿ ಶಿಕ್ಷಣ ಮುಂದುವರಿಸಲು ನೆರವಾಗಿದ್ದ ಶಿಕ್ಷಕರಿಗೆ ಹಳೆಯ ವಿದ್ಯಾರ್ಥಿಯೊಬ್ಬ ಹೊಸ ಕಾರನ್ನು ಉಡುಗೊರೆಯಾಗಿ ನೀಡಿರುವ ಭಾವನಾತ್ಮಕ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ಗುರು-ಶಿಷ್ಯರ ಬಾಂಧವ್ಯಕ್ಕೆ ಹೊಸ ಅರ್ಥ ನೀಡುವ ಈ ಘಟನೆ ಹಾವೇರಿ ಜಿಲ್ಲೆಯ ಹಾನಗಲ್‌ನ ಕುಮಾರೇಶ್ವರ ಪ್ರೌಢಶಾಲೆಯಲ್ಲಿ ನಡೆದಿದೆ. ನಿವೃತ್ತ ಶಿಕ್ಷಕ ಸಿ.ಎಸ್. ವಸ್ತ್ರದ್ ಅವರಿಗೆ ಅವರ ಹಳೆಯ ವಿದ್ಯಾರ್ಥಿ ನವೀನ್ ಹುಲಿಹಳ್ಳಿ ಹೊಸ ಮಾರುತಿ ಸುಜುಕಿ ಸ್ವಿಫ್ಟ್ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ.

2007ರ ಎಸ್‌ಎಸ್‌ಎಲ್‌ಸಿ ಬ್ಯಾಚ್‌ನ ವಿದ್ಯಾರ್ಥಿಯಾಗಿದ್ದ ನವೀನ್, ಬಾಲ್ಯದಲ್ಲಿಯೇ ತಂದೆಯನ್ನು ಕಳೆದುಕೊಂಡು ಆರ್ಥಿಕ ಸಂಕಷ್ಟದಲ್ಲಿ ಶಿಕ್ಷಣ ಮುಂದುವರಿಸುತ್ತಿದ್ದರು. ಈ ವೇಳೆ ಶಿಕ್ಷಕ ವಸ್ತ್ರದ್ ಅವರು ಶಾಲಾ ಶುಲ್ಕ ಪಾವತಿಸಿ ನೆರವಾಗಿದ್ದರು. ಅಲ್ಲದೇ ರಜಾ ದಿನಗಳಲ್ಲೂ ವಿಶೇಷ ತರಗತಿಗಳನ್ನು ನಡೆಸಿ, ಸ್ನಾತಕೋತ್ತರ ಪದವಿವರೆಗೆ ಶಿಕ್ಷಣ ಪಡೆಯಲು ತಂದೆಯಂತೆ ಬೆನ್ನೆಲುಬಾಗಿ ನಿಂತಿದ್ದರು.
ಸದ್ಯ ಬೆಂಗಳೂರಿನ ಪ್ರತಿಷ್ಠಿತ ಎಂಎನ್‌ಸಿ ಕಂಪನಿಯಲ್ಲಿ ಉದ್ಯೋಗಿಯಾಗಿರುವ ನವೀನ್, ತಮ್ಮ ಬದುಕು ರೂಪಿಸಿದ ಗುರುವಿನ ಋಣ ತೀರಿಸುವ ಉದ್ದೇಶದಿಂದ ಈ ವಿಶೇಷ ಉಡುಗೊರೆಯನ್ನು ನೀಡಿದ್ದಾರೆ. ಹುಬ್ಬಳ್ಳಿಯ ಮೂರುಸಾವಿರ ಮಠದಲ್ಲಿ ಶ್ರೀ ಮುರುಗುರಾಜೇಂದ್ರ ಸ್ವಾಮೀಜಿಗಳ ಸಮ್ಮುಖದಲ್ಲಿ ನಡೆದ ವಸ್ತ್ರದ್ ಅವರ ಬೀಳ್ಕೊಡುಗೆ ಸಮಾರಂಭದಲ್ಲಿ ಕಾರಿನ ಕೀ ಹಸ್ತಾಂತರಿಸಲಾಯಿತು.ಇದನ್ನೂ ಓದಿ: ಮೂಕಾಂಬಿಕಾ ಸನ್ನಿಧಿಯಲ್ಲಿ ವಿಜಯ್ ಶತ್ರು ಸಂಹಾರ ಸಂಕಲ್ಪ!

ಅನಿರೀಕ್ಷಿತ ಉಡುಗೊರೆಯಿಂದ ಭಾವುಕರಾದ ವಸ್ತ್ರದ್ ಅವರು, ತಮ್ಮ ಶಿಷ್ಯನ ಪ್ರೀತಿ ಮತ್ತು ಗೌರವ ಕಂಡು ಮೂಕವಿಸ್ಮಿತರಾದರು. ಗುರು ನೀಡಿದ ಶಿಕ್ಷಣ, ಮಾರ್ಗದರ್ಶನ ಮತ್ತು ಪ್ರೀತಿಯನ್ನು ಎಂದಿಗೂ ಮರೆಯಬಾರದು ಎಂಬ ಸಂದೇಶ ಸಾರಿರುವ ಈ ಘಟನೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ..ಇದನ್ನೂ ಓದಿ: ಧರ್ಮಸ್ಥಳ ಕೇಸ್ | ತನಿಖೆಗೂ ಮುನ್ನ ಸರ್ಟಿಫಿಕೇಟ್ ಕೊಡೋ ಕೆಲಸ ಮಾಡ್ಬೇಡಿ – ಪ್ರಿಯಾಂಕ್ ಖರ್ಗೆ ವಿರುದ್ಧ ಸಿ.ಟಿ ರವಿ ಕಿಡಿ

