ಬೆಂಗಳೂರು: ಕಾಂಗ್ರೆಸ್‌ನ ಹಿರಿಯ ನಾಯಕ ಮತ್ತು ವಿಧಾನ ಪರಿಷತ್ ಸದಸ್ಯ (MLC) ನಸೀರ್ ಅಹ್ಮದ್(Naseer Ahmed) ಅವರನ್ನು ರಾಷ್ಟ್ರೀಯ ಕಂಪೆನಿ ಕಾನೂನು ನ್ಯಾಯಮಂಡಳಿಯ (NCLT) ಬೆಂಗಳೂರು ಪೀಠವು ‘ಆರ್ಥಿಕ ದಿವಾಳಿ’ (Bankrupt) ಎಂದು ಘೋಷಿಸಿದೆ.
ಈ ಆದೇಶದಿಂದಾಗಿ ನಸೀರ್ ಅಹ್ಮದ್ ಅವರು ತಮ್ಮ ವಿಧಾನ ಪರಿಷತ್ ಸದಸ್ಯತ್ವವನ್ನು ಕಳೆದುಕೊಳ್ಳುವ (ಅನರ್ಹತೆ) ಭೀತಿ ಎದುರಾಗಿದೆ. ನಸೀರ್ ಅಹ್ಮದ್ ಮಾತ್ರವಲ್ಲದೆ, ಅವರ ಪತ್ನಿ ನುಝತ್ ಆಯಿಷಾ ನಸೀರ್ ಹಾಗೂ ಪುತ್ರ ಅವೈಝ್ ಅಹ್ಮದ್ ಅವರನ್ನೂ ನ್ಯಾಯಮಂಡಳಿಯು ಆರ್ಥಿಕ ದಿವಾಳಿಗಳೆಂದು ಘೋಷಿಸಿದೆ.
ನಸೀರ್ ಅಹ್ಮದ್ ಅವರು ಈ ಹಿಂದೆ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ‘ಎಂ ಎಸ್ ಸ್ಕಾಟ್ಸ್ ಗಾರ್ಮೆಂಟ್ಸ್ ಲಿಮಿಟೆಡ್’ ಕಂಪೆನಿಯು ವಿವಿಧ ಬ್ಯಾಂಕ್‌ಗಳ ಒಕ್ಕೂಟದಿಂದ ಪಡೆದಿದ್ದ ಸಾಲವನ್ನು ಮರುಪಾವತಿ ಮಾಡಲು ವಿಫಲವಾಗಿತ್ತು. ಇದನ್ನೂ ಓದಿ: ಶಿಕ್ಷಕನ ಋಣ ತೀರಿಸಿದ ಶಿಷ್ಯ: ಶುಲ್ಕ ಕಟ್ಟಿದ ಗುರುವಿಗೆ ನಿವೃತ್ತಿ ದಿನವೇ ಕಾರು ಉಡುಗೊರೆ

ಈ ಬೃಹತ್ ಮೊತ್ತದ ಸಾಲಕ್ಕೆ ನಸೀರ್ ಅಹ್ಮದ್, ಅವರ ಪತ್ನಿ ಮತ್ತು ಪುತ್ರ ವೈಯಕ್ತಿಕ ಗ್ಯಾರಂಟಿದಾರರಾಗಿದ್ದರು. ಕಂಪೆನಿಯು ಸಾಲ ತೀರಿಸದಿದ್ದಾಗ ಕೆನರಾ ಬ್ಯಾಂಕ್, ಎಸ್‌ಬಿಐ ಮತ್ತು ಐಡಿಬಿಐ ಬ್ಯಾಂಕ್‌ಗಳ ಒಕ್ಕೂಟವು ಬಾಕಿ ಇರುವ ಒಟ್ಟು 1,454.71 ಕೋಟಿ ರೂ. ವಸೂಲಾತಿಗಾಗಿ ಎನ್‌ಸಿಎಲ್‌ಟಿ ಮೆಟ್ಟಿಲೇರಿತ್ತು.
ಸಾಲ ಮರುಪಾವತಿಗೆ ಸಂಬಂಧಿಸಿದಂತೆ ನ್ಯಾಯಮಂಡಳಿಯು ಸಾಕಷ್ಟು ಅವಕಾಶ ನೀಡಿದ್ದರೂ ನಸೀರ್ ಅಹ್ಮದ್ ಯಾವುದೇ ಸ್ಪಷ್ಟ ಮರುಪಾವತಿ ಯೋಜನೆ (Repayment Plan) ಸಲ್ಲಿಸದ ಕಾರಣ, ಬ್ಯಾಂಕ್‌ಗಳ ಮನವಿಯ ಮೇರೆಗೆ ಇವರನ್ನು ದಿವಾಳಿ ಎಂದು ಘೋಷಿಸಲಾಗಿದೆ.
ಭಾರತೀಯ ಸಂವಿಧಾನದ ಆರ್ಟಿಕಲ್ 191(1)(c) ಪ್ರಕಾರ, ಯಾವುದೇ ಶಾಸಕ ಅಥವಾ ಸಂಸದರನ್ನು ನ್ಯಾಯಾಲಯ ಅಥವಾ ಅಧಿಕೃತ ಸಂಸ್ಥೆಯು ‘ಅನ್‌ಡಿಸ್ಚಾರ್ಜ್ಡ್ ಇನ್‌ಸಾಲ್ವೆಂಟ್’ (ಋಣಮುಕ್ತನಾಗದ ದಿವಾಳಿ) ಎಂದು ಘೋಷಿಸಿದರೆ ಅವರು ಶಾಸಕ ಸ್ಥಾನದಲ್ಲಿ ಮುಂದುವರಿಯಲು ಅರ್ಹರಾಗಿರುವುದಿಲ್ಲ. ಹೀಗಾಗಿ ತಾಂತ್ರಿಕವಾಗಿ ನಸೀರ್ ಅಹ್ಮದ್ ಅವರ ಎಂಎಲ್‌ಸಿ ಸ್ಥಾನಕ್ಕೆ ಕುತ್ತು ಬಂದಿದೆ.
