Districts

ಬಿಜೆಪಿ ಎಲೆಕ್ಷನ್‍ಗೆ ಜನಾರ್ದನ ರೆಡ್ಡಿಯಿಂದ 500 ಕೋಟಿ ಹಣ:ಎಚ್‍ಡಿಕೆ ಬಾಂಬ್

Published

on

Share this

– ಹಣ ಬರೋದ್ರಿಂದ ಕೋಟ್ಯಂತರ ರೂ. ಆಸ್ತಿ ಕೇಸ್ ವಾಪಸ್
– ಮೋದಿ, ಅಮಿತ್ ಶಾ ಅಶ್ವಮೇಧ ಯಾಗದ ಕುದುರೆಯನ್ನು ಜೆಡಿಎಸ್ ಕಟ್ಟಿ ಹಾಕುತ್ತೆ

ಬೆಂಗಳೂರು: ಬಿಜೆಪಿಯ ಚುನಾವಣೆಗೆ 500 ಕೋಟಿ ರೂ. ನೀಡುವ ಷರತ್ತು ಆಗಿರುವ ಹಿನ್ನೆಲೆಯಲ್ಲಿ ಜನಾರ್ದನ ರೆಡ್ಡಿಯವರ ಕೋಟ್ಯಂತರ ರೂ. ಆಸ್ತಿ ಈಗ ವಾಪಸ್ ಆಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್‍ಡಿ ಕುಮಾರಸ್ವಾಮಿ ಹೊಸ ಬಾಂಬ್ ಸಿಡಿಸಿದ್ದಾರೆ.

ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಸ್ವಾಭಿಮಾನಿ ಸಮಾನತೆ ಸಮಾವೇಶದಲ್ಲಿ ಮಾತನಾಡಿದ ಅವರು, ಅಕ್ರಮ ಗಣಿ ವಿಚಾರದಲ್ಲಿ ಲೋಕಾಯುಕ್ತ ನಿವೃತ್ತ ನ್ಯಾ. ಸಂತೋಷ್ ಹೆಗಡೆ ಕೊಟ್ಟ ವರದಿಗೆ ರಾಜ್ಯ ಸರ್ಕಾರ ಎಳ್ಳು ನೀರು ಬಿಟ್ಟಿದೆ. ಮುಂದಿನ ವಿಧಾನ ಸಭಾ ಚುನಾವಣೆ ಕಾರಣಕ್ಕಾಗಿಯೇ ಜನಾರ್ದನ ರೆಡ್ಡಿ ಕೇಸ್ ಖುಲಾಸೆ ಆಗುತ್ತಿದೆ. ಬಿಜೆಪಿಗೆ ರೆಡ್ಡಿ 500 ಕೋಟಿ ನೀಡುವ ಕಂಡೀಷನ್ ಆದ ಹಿನ್ನೆಲೆಯಲ್ಲಿ ಅವರ ಕೋಟ್ಯಂತರ ರೂ. ಆಸ್ತಿ ವಾಪಸ್ ಆಗುತ್ತಿದೆ ಎಂದು ಗಂಭೀರ ಆರೋಪ ಮಾಡಿದರು.

ಮೋದಿ ಹಿಂದೆ ಹೋಗ್ಬೇಡಿ: ಪ್ರಧಾನಿ ಮೋದಿಯನ್ನು ಕಿಂದರಿ ಜೋಗಿಗೆ ಹೋಲಿಸಿದ ಕುಮಾರಸ್ವಾಮಿ, ಜನರು ಎಚ್ಚರಿಕೆಯಿಂದ ಇರಬೇಕು. ಎಲ್ಲೋ ಜೋಗಪ್ಪ ನಿನ್ನ ಅರಮನೆ ಎಂಬ ಹಾಡಿನಂತೆ ಮೋದಿ ಕಥೆಯಿದ್ದು ಪ್ರಧಾನಿಯನ್ನು ನಂಬಿ ಹಿಂದೆ ಹೋದರೆ ಎಲ್ಲ ಬಿಟ್ಟು ಹೋಗಬೇಕಾಗುತ್ತದೆ. ಯಾರು ಮೋದಿಯನ್ನ ನಂಬಬೇಡಿ. ‘ಫಸಲ್ ಭೀಮಾ’ ರೈತರಿಗೆ ಟೋಪಿ ಹಾಕುವ ಯೋಜನೆಯಾಗಿದ್ದು ಹಣ ಕಟ್ಟಿದ ರೈತರು ಬೆಳೆ ವಿಮೆ ಕೇಳಿದ್ರೆ ಉತ್ತರವಿಲ್ಲ. ವಿಮಾ ಕಂಪೆನಿಯನ್ನು ಕೇಳಿ ಎನ್ನುತ್ತಿದ್ದಾರೆ. ಕೇಂದ್ರ ನಯಾ ಪೈಸೆ ಕಟ್ಟಿಲ್ಲ. ಮೋದಿ ಕನಸನ್ನ ಕಟ್ಟಿ, ಮಾರಾಟ ಮಾಡಿ ವಿರೋಧಿ ಪಕ್ಷ ಹತ್ತಿಕ್ಕುತ್ತಿದ್ದಾರೆ ಎಂದು ಟೀಕಿಸಿದರು.

ಒಂದು ಬಾರಿ ಅವಕಾಶ ನೀಡಿ: ತಮಿಳುನಾಡು, ಆಂದ್ರಕ್ಕೆ ಸಿಕ್ಕ ಮನ್ನಣೆ ಕೇಂದ್ರದಿಂದ ನಮ್ಮ ರಾಜ್ಯಕ್ಕೆ ಸಿಗುತ್ತಿಲ್ಲ. ಪ್ರಾದೇಶಿಕ ಪಕ್ಷ ನಮಗೆ ಅಧಿಕಾರ ಕೊಡಿ. ನಾವು ಜನರಿಗೆ ಮಾಡಿದ ದ್ರೋಹ ಏನು, ಯಾಕೆ ನಮಗೆ ಶಿಕ್ಷೆ ನೀಡುತ್ತಿದ್ದೀರಿ. ಊರಿಗೊಂದು ಪ್ರಾಧಿಕಾರ ಮಾಡಿ ಯಾರಪ್ಪನ ಮನೆ ದುಡ್ಡೋ ಎಂಬಂತೆ ದುಂದುವೆಚ್ಚ ಮಾಡಲಾಗುತ್ತಿದೆ. ಜಾತಿ ಹೆಸರಿನ ರಾಜಕಾರಣದ ಮೋಹಕ್ಕೆ ಒಳಗಾಗಬೇಡಿ ಒಮ್ಮೆ ಅವಕಾಶ ನೀಡಿ. ಇದು ಅಳಿವು ಉಳುವಿನ ಪ್ರಶ್ನೆಯಾಗಿದ್ದು ಕಾಂಗ್ರೆಸ್ ಬಿಜೆಪಿ ಅವರು ನಾವೇ ಅಧಿಕಾರಕ್ಕೆ ಬರುತ್ತಿದ್ದೇವೆ ಅಂತಿದ್ದಾರೆ. ನೀವು ನಿರ್ಧಾರ ಮಾಡಿ ಕುಮಾರಣ್ಣ ಮುಖ್ಯಮಂತ್ರಿ ಮಾಡಲು ನೀವು ಶ್ರಮ ಹಾಕಿ. ಇನ್ನು 10 ತಿಂಗಳು ಜನರ ಬಳಿ ಹೋಗಿ ನಮ್ಮ ಕಾರ್ಯಕ್ರಮ ಬಗ್ಗೆ ಹೇಳಿ. ಒಂದು ಬಾರಿ ಜೆಡಿಎಸ್ ಗೆ ಅವಕಾಶ ನೀಡಿ ಎಚ್‍ಡಿಕೆ ಮನವಿ ಮಾಡಿದರು.

ಲೂಟಿ ಹಣ ಬಳಕೆ: ರಾಜ್ಯದಲ್ಲಿ ಜೆಡಿಎಸ್ ಅತಿಹೆಚ್ಚು ಉಪಚುನಾವಣೆ ಗೆದ್ದಿದೆ. ಉಪಚುನಾವಣೆಯಲ್ಲಿ ನಮಗೆ ಯಾವುದೇ ಹೆದರಿಕೆಯಿಂದ ಅಲ್ಲ. ಆದರೆ ರಾಷ್ಟ್ರೀಯ ಪಕ್ಷಗಳು ಲೂಟಿ ಮಾಡಿದ ಪಾಪದ ಹಣವನ್ನು ಉಪಚುನಾವಣೆಯಲ್ಲಿ ಬಳಕೆ ಮಾಡುತ್ತಿದ್ದಾರೆ. ಲೂಟಿ ಮಾಡಿದ ಹಣ ಬಳಕೆಯಾಗುತ್ತಿದೆ ಎಂದು ಅಲ್ಲಿನ ಕಾರ್ಯಕರ್ತರೇ ತಿಳಿಸಿದ್ದಾರೆ. ಈ ಕಾರಣಕ್ಕಾಗಿ ನಾವು ನಂಜನಗೂಡು ಮತ್ತು ಗುಂಡ್ಲುಪೇಟೆ ಉಪಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿಲ್ಲ ಎಂದು ಎಚ್‍ಡಿಕೆ ಹೇಳಿದರು.

ಉತ್ತರ ಪ್ರದೇಶದ ಬಳಿಕ ಬಿಜೆಪಿ ರಾಷ್ಟ್ರೀಯ ಮುಖಂಡರು ರಾಜ್ಯಕ್ಕೆ ಬರುತ್ತಾರಂತೆ. ಬಿಜೆಪಿಯವರು ಅಧಿಕಾರಕ್ಕೆ ಬಂದೇ ಬಿಟ್ಟಿದ್ದೇವೆ ಎಂದು ಕನಸು ಕಾಣುತ್ತಿದ್ದಾರೆ. ಜನ ಇದಕ್ಕೆ ಉತ್ತರ ನೀಡ್ತಾರೆ. ಎರಡೂ ರಾಷ್ಟ್ರೀಯ ಪಕ್ಷಗಳು ರಾಜ್ಯಕ್ಕೆ ದ್ರೋಹ ಮಾಡಿದ್ದು ಕೆಲ ಮಾಧ್ಯಮಗಳು ಕಾಂಗ್ರೆಸ್, ಜೆಡಿಎಸ್ ಘಟಬಂಧನ್ ಆಗುತ್ತದೆ ಎಂದು ಹೇಳುತ್ತಿದ್ದಾರೆ. ಆದರೆ ಆದ್ರೆ ಅಂತಹ ಯಾವುದೇ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ. ಅದರ ಅವಶ್ಯಕತೆಯೂ ಇಲ್ಲ. ಏಕಾಂಗಿ ಯಾಗಿ ಸ್ಪರ್ಧೆ ಮಾಡಿ ಮೋದಿ, ಅಮಿತ್ ಶಾ ಅವರ ಅಶ್ವಮೇಧ ಯಾಗದ ಕುದುರೆಯನ್ನು ಕಟ್ಟಿ ಹಾಕುತ್ತೇವೆ ಎಂದು ಮತ್ತೊಮ್ಮೆ ಹೇಳಿದರು.

ಇಬ್ರಿಗೆ ಕೆಲ್ಸ ಇಲ್ಲ: ರಾಜ್ಯದಲ್ಲಿ ಒಬ್ಬರು ಡೈರಿ ಹೇಳುತ್ತಾರೆ. ಇನ್ನೊಬ್ಬರು ಸಿಡಿ ಬಿಡುಗಡೆ ಮಾಡ್ತಾರೆ. ಇಬ್ಬರಿಗೂ ಬೇರೆ ಕೆಲಸ ಇಲ್ಲ. 10 ಸಾವಿರ ಅಂಗನವಾಡಿ ಕಾರ್ಯಕರ್ತೆಯರು ರಸ್ತೆಯಲ್ಲಿ ಮಲಗುವ ಸ್ಥಿತಿ ಬಂದಿದೆ. ಕಾಂಗ್ರೆಸ್ ಮತ್ತು ಬಿಜೆಪಿ ಕೇಂದ್ರ, ರಾಜ್ಯ ಸರ್ಕಾರದ ಬಗ್ಗೆ ರಾಜಕಾರಣದ ಮಾತುಗಳನ್ನು ಆಡುತ್ತಿವೆ. ಇಂತಹ ಆಡಳಿತ ರಾಜ್ಯಕ್ಕೆ ಬೇಕಾ ಎಂದು ಅವರು ಪ್ರಶ್ನಿಸಿದರು.

ಸಮಯ ಇಲ್ಲ: 2008ರ ಚುನಾವಣೆಯಲ್ಲಿ, ದೇವರ ಪೂಜೆ ವೇಳೆ ನನ್ನ ಹೆಸರಲ್ಲಿ ದೇವರಿಗೆ ಒಂದು ಹೂ ಹಾಕಿ ಎಂದು ಮಹಿಳೆಯರಲ್ಲಿ ಬಿಎಸ್ ಯಡಿಯೂರಪ್ಪ ಹೇಳಿದ್ದರು. ಈಗ ಯಡಿಯೂರಪ್ಪ ಅವರಿಗೆ ಸಮಯ ಇಲ್ಲ. ಪ್ರತಿಭಟನಾ ನಿರತ ಮಹಿಳೆಯರನ್ನ ಭೇಟಿ ಮಾಡದೇ ಉಪಚುನಾವಣೆಯಲ್ಲಿ ಬ್ಯುಸಿ ಆಗಿದ್ದಾರೆ ಎಂದು ಎಚ್‍ಡಿಕೆ ವಾಗ್ದಾಳಿ ನಡೆಸಿದರು.

ಬಿಜೆಪಿ ಅಧಿಕಾರಕ್ಕೆ ಬಂದರೆ ಸಾಲ ಮನ್ನಾ ಮಾಡುತ್ತೇವೆ ಎಂದು ಬಿಎಸ್‍ವೈ ಹೇಳುತ್ತಿದ್ದಾರೆ. ನಾನು ಸಿಎಂ ಆಗಿದ್ದಾಗ ಬೀದರ್ ರೈತನ ಮನೆಯಲ್ಲಿ ಊಟ ಮಾಡಿದಾಗ ರೈತರ ಸಾಲ ಮನ್ನಾ ಮಾಡುವ ತೀರ್ಮಾನ ಮಾಡಿದ್ದೆ. ಆದರೆ ಬಿಎಸ್‍ವೈ ದುಡ್ಡಿಲ್ಲ, ಸಾಲ ಮನ್ನ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದರು. ರೈತರ ಸಾಲ ಮನ್ನಾ ಬಗ್ಗೆ ಕ್ಯಾಬಿನೆಟ್ ನಲ್ಲಿ ವಿರೋಧಿಸಿದ್ದರು. ಈಗ ಬಿಎಸ್ ವೈ ಯಾವ ನೈತಿಕತೆ ಇಟ್ಟುಕೊಂಡು ಎರಡು ಬಾರಿ ಸಾಲ ಮನ್ನಾ ಮಾಡಿದ್ದೇವೆ ಎಂದು ಹೇಳುತ್ತಿದ್ದಾರೆ ಎಂದು ಪ್ರಶ್ನಿಸಿದರು.

ಜೂನ್‍ನಲ್ಲಿ ಪಾದಯಾತ್ರೆ: ಜೂನ್ ನಲ್ಲಿ ರಾಜ್ಯ ಸರ್ಕಾರದ ವಿರುದ್ಧ ಉತ್ತರ ಕರ್ನಾಟಕದಲ್ಲಿ ಪಾದಯಾತ್ರೆ ಮಾಡುತ್ತೇನೆ. ರಾಜ್ಯದ ಅನ್ಯಾಯದ ಕೆಲಸದ ಬಗ್ಗೆ ಪಾದಯಾತ್ರೆ ಮೂಲಕ ಜನರಿಗೆ ತಿಳಿಸುತ್ತೇನೆ ಎಂದು ಈ ವೇಳೆ ಹೇಳಿದರು.

Click to comment

Leave a Reply

Your email address will not be published. Required fields are marked *

Advertisement
Advertisement
Public TV We would like to show you notifications for the latest news and updates.
Dismiss
Allow Notifications