– ವಿಧ್ವಂಸಕ ಕೃತ್ಯ ಎಸಗಲು ಸಂಗ್ರಹಿಸಿ ಇಡಲಾಗಿತ್ತಾ?
ಬೆಂಗಳೂರು: ನಗರ ಗಡಿಯಲ್ಲಿ ರಾಶಿ ರಾಶಿ ಜಿಲೆಟಿನ್ ಸ್ಪೋಟಕಗಳು ಪತ್ತೆಯಾಗಿದೆ. ಸ್ವಾತಂತ್ರ್ಯ ದಿನಾಚರಣೆಗೆ ಕೇವಲ ಎರಡು ತಿಂಗಳು ಬಾಕಿ ಇರುವಾಗ ರಾಶಿ ರಾಶಿ ಜಿಲೆಟಿನ್ ಕಡ್ಡಿಗಳು ಹಾಗೂ ವೈಯರ್‌ಗಳು ಪತ್ತೆಯಾಗಿರುವುದು ಹಲವು ಅನುಮಾನ ಹುಟ್ಟುಹಾಕಿದೆ.
ಪ್ರಧಾನಿ ನರೇಂದ್ರ ಮೋದಿ ಆಗಮಿಸಿದ್ದ ವೇಳೆ ಕಗ್ಗಲೀಪುರದ ಬಳಿ ಜಿಲೆಟಿನ್ ಕಡ್ಡಿಗಳು ಪತ್ತೆಯಾಗಿದ್ದವು. ಇದು ಸಾಕಷ್ಟು ಅನುಮಾನ, ಆತಂಕಕ್ಕೆ ಕಾರಣವಾಗಿತ್ತು. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿರುವಾಗಲೇ ಅಂತಹದೇ ಒಂದು ಘಟನೆ ಬೆಳಕಿಗೆ ಬಂದಿದೆ. ಬೆಂಗಳೂರಿನ ಅವಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರಾಶಿ ರಾಶಿ ಜಿಲೆಟಿನ್ ಕಡ್ಡಿಗಳು ಹಾಗೂ ವೈಯರ್‌ಗಳು ಪತ್ತೆಯಾಗಿದೆ.
ಸ್ವಾತಂತ್ರ್ಯ ದಿನಾಚರಣೆಗೆ ಕೇವಲ ಎರಡು ತಿಂಗಳು ಬಾಕಿ ಇದೆ. ಈ ನಡುವೆ ಇಷ್ಟೊಂದು ಪ್ರಮಾಣದ ಸ್ಫೋಟಕಗಳು ಪತ್ತೆಯಾಗಿರೋದು ಸಾಕಷ್ಟು ಅನುಮಾನಕ್ಕೆ ಕಾರಣ ಆಗಿದೆ. ಸದ್ಯ ಜಿಲೆಟಿನ್ ಕಡ್ಡಿಗಳು, ವೈಯರ್‌ಗಳನ್ನ ಪೋಲಿಸರು ವಶಪಡಿಸಿಕೊಂಡಿದ್ದು, ಜಿಲೆಟಿನ್ ಪತ್ತೆಯಾದ ಸ್ಥಳಕ್ಕೆ ಬಾಂಬ್ ಸ್ಕ್ವಾಡ್ ಭೇಟಿ ನೀಡಿ ಪರಿಶೀಲಿನೆ ನಡೆಸಿದ್ದಾರೆ.
ಮೇಲ್ನೋಟಕ್ಕೆ ಕ್ರಶರ್ ಮಾಲೀಕನಿಂದ ಈ ಯಡವಟ್ಟು ಆಗಿರೋದು ಕಂಡುಬಂದಿದೆ. ರೂಲ್ಸ್ ಬ್ರೇಕ್ ಮಾಡಿದ್ದಕ್ಕೆ ಕ್ರಶರ್ ಮಾಲೀಕನ ಲೈಸೆನ್ಸ್ ರದ್ದು ಮಾಡಲಾಗಿತ್ತು. ಹೀಗಾಗಿ ಒಂದು ವರ್ಷದಿಂದ ಕ್ವಾರಿ ಕೊರೆಯೋದನ್ನ ನಿಲ್ಲಿಸಿದ್ದ ಮಾಲೀಕ, ಆದ್ರೆ ಕೆಲ ದಿನಗಳಿಂದ ಮತ್ತೆ ಕ್ವಾರಿ ಕಾರ್ಯ ಶುರು ಮಾಡಲಾಗಿತ್ತು. ರಾತ್ರಿ ವೇಳೆ ಅಕ್ರಮವಾಗಿ ಕೆಲಸಗಳನ್ನ ಮಾಡ್ತಿದ್ರು. ಆ ಬಗ್ಗೆ ಆವಲಹಳ್ಳಿ ಪೊಲೀಸರಿಗೆ ಸ್ಥಳೀಯರು ದೂರು ನೀಡಿದ್ದರು. ದೂರಿನ ಅನ್ವಯ ದಾಳಿ ಮಾಡಿದಾಗ ಜಿಲೆಟಿನ್ ಕಡ್ಡಿಗಳು, ಡಿಟೋನೇಟರ್ ಗಳು ಪತ್ತೆಯಾಗಿದೆ. ಆರೋಪಿಗಳನ್ನ ವಿಚಾರಣೆ ನಡೆಸಿ ಸಂಬಂಧಪಟ್ಟ ದಾಖಲೆಗಳನ್ನ ನೀಡಲು ಸೂಚಿಸಲಾಗಿದೆ. ಆದರೆ, ಈವರೆಗೂ ದಾಖಲೆಗಳನ್ನ ಮಾಲೀಕರು ನೀಡಿಲ್ಲ. ಮತ್ತೆ ವಿಚಾರಣೆಗೆ ಬರುವಂತೆ ಪೊಲೀಸರು ಸೂಚನೆ ನೀಡಿದ್ದಾರೆ. 50ಕ್ಕೂ ಹೆಚ್ಚು ಡಿಟೋನೇಟರ್, 220ಕ್ಕೂ ಹೆಚ್ಚು ಜಿಲೆಟಿನ್ ಕಡ್ಡಿಗಳು ಪತ್ತೆ ಹಿನ್ನೆಲೆಯಲ್ಲಿ ಇಷ್ಟು ಪ್ರಮಾಣದಲ್ಲಿ ಶೇಖರಣೆ ಮಾಡಬಹುದಾ ಅನ್ನೋ ಅನುಮಾನ ಮೇಲೆ ಗಣಿಗಾರಿಕೆ ಇಲಾಖೆಯ ಅಧಿಕಾರಿಗಳಿಗೆ ಪೊಲೀಸರು ಪತ್ರ ಬರೆದಿದ್ದಾರೆ. ಕ್ವಾರಿಯ ನಿಯಮಗಳ ಬಗ್ಗೆ, ಎಷ್ಟು ಪ್ರಮಾಣ ಸಂಗ್ರಹಿಸಬಹುದು, ಹೀಗೆ ಪ್ರಕರಣ ಸಂಬಂಧ ಮಾಹಿತಿ ಕೋರಿ ಪತ್ರ ಬರೆದಿದ್ದಾರೆ.
ತಡರಾತ್ರಿ ಕ್ವಾರಿ ಬ್ಲಾಸ್ಟ್ ಮಾಡುವುದಕ್ಕೆ ಅನುಮತಿ ಇಲ್ಲ. ಬ್ಲಾಸ್ಟ್ ಮಾಡುವುದಕ್ಕೆ ಅನುಮತಿ ಪಡೆದಿರುವ ಬಗ್ಗೆ ಮಾಲೀಕರು ದಾಖಲೆಗಳು ಕೊಟ್ಟಿದ್ದಾರೆ. ಕ್ವಾರಿ ಮಾಲೀಕರಿಗೆ ನೋಟಿಸ್ ಕೊಡಲಾಗಿದೆ ಎಂದು ವೈಟ್‌ಫೀಲ್ಡ್ ಡಿಸಿಪಿ ‘ಪಬ್ಲಿಕ್ ಟಿವಿ’ಗೆ ಸ್ಪಷ್ಟನೆ ಕೊಟ್ಟಿದ್ದಾರೆ.
ಐವರ ಮೇಲೆ ಅವಲಹಳ್ಳಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಅಮೃತ್ ಶೆಲ್ಟರ್ ಮಾಲೀಕ ಮದುಸೂದನ್ ಯಾದವ್ ಸೇರಿ ಐವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಸದ್ಯ ಅವಲಹಳ್ಳಿ ತನಿಖೆ ಕೈಗೊಂಡಿದ್ದು, ಜಿಲೆಟಿನ್‌ನ್ನ ಕಲ್ಲು ಕ್ವಾರಿ ಉದ್ಯಮಕ್ಕಾಗಿ ತರಲಾಗಿದ್ಯಾ ಅಥವಾ ಬೇರೆ ಯಾವುದಕ್ಕೆ ತರಲಾಗಿತ್ತು ಎಂದು ಅವಲಹಳ್ಳಿ ಪೊಲೀಸರು ತನಿಖೆಯನ್ನ ಮುಂದುವರೆಸಿದ್ದಾರೆ.
