Bengaluru CityDistrictsKarnatakaLatestMain Post

ನಾವೇನು ಎಲೆ, ಅಡಿಕೆ ಕೊಟ್ಟು ಆಹ್ವಾನಿಸಿದ್ವಾ? ಬಂದು ಬೆಂಬಲದ ಭಿಕ್ಷೆ ಬೇಡಿದವರ್‍ಯಾರು? – ಸಿದ್ದು ವಿರುದ್ಧ ಹೆಚ್‍ಡಿಕೆ ಕಿಡಿ

Advertisements

ಬೆಂಗಳೂರು: ನಿಮ್ಮನ್ನು ಕರೆದವರು ಯಾರು, ನಾವೇನು ಎಲೆ-ಅಡಿಕೆ ಕೊಟ್ಟು ಆಹ್ವಾನ ಕೊಟ್ಟೆವಾ, ಬಂದು ಬೆಂಬಲದ ಭಿಕ್ಷೆ ಬೇಡಿದವರು ಯಾರು ಎಂದು ಪ್ರಶ್ನಿಸುವ ಮೂಲಕ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ಧ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ಕುಮಾರಸ್ವಾಮಿ ಅವರು ತಮ್ಮ ಟ್ವಿಟ್ಟರ್‌ನಲ್ಲಿ ಸಿದ್ದರಾಮಯ್ಯ ವಿರುದ್ಧ ಸರಣಿ ಟ್ವೀಟ್ ಮಾಡುವ ಮೂಲಕ ದಾಳಿ ನಡೆಸಿದ್ದು, ಕಟ್ಟುವುದು ಮನುಷ್ಯತ್ವ, ಕೆಡವೋದು ರಾಕ್ಷಸತ್ವ. ನಿಮಗೆ ಕೆಡವಿ ಗೊತ್ತೇ ವಿನಾ ಕಟ್ಟಿ ಗೊತ್ತಿಲ್ಲ. ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಬೇಕೆಂದು ಹೇಳಿ ನಮ್ಮ ಮನೆ ಬಾಗಿಲಿಗೆ ಬಂದ ಕಾಂಗ್ರೆಸ್ ನಾಯಕರು ಸರ್ಕಾರದ ನೇತೃತ್ವ ವಹಿಸಿ ಎಂದರು. ಹಾಗಾದರೆ, ಪಕ್ಷದ ನಿರ್ಧಾರಕ್ಕೂ ನಿಮಗೂ ಸಂಬಂಧ ಇಲ್ಲವಾ ಮಿಸ್ಟರ್ ಸಿದ್ದಸೂತ್ರಧಾರ? ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಜೀವಾವಧಿ ಶಿಕ್ಷೆಗೆ ಒಳಗಾದ ಕೈದಿ ಜೈಲಿನಲ್ಲಿಯೇ ಆತ್ಮಹತ್ಯೆ

ನಾನು ಜೆಡಿಎಸ್‍ನವರ ಮನೆ ಬಾಗಿಲಿಗೆ ಹೋಗಿಲ್ಲ ಎನ್ನುತ್ತೀರಿ. ನಿಮ್ಮನ್ನು ಕರೆದವರು ಯಾರು, ನಾವೇನು ಎಲೆ-ಅಡಿಕೆ ಕೊಟ್ಟು ಆಹ್ವಾನ ಕೊಟ್ಟೆವಾ, ಬಂದು ಬೆಂಬಲದ ಭಿಕ್ಷೆ ಬೇಡಿದವರು ಯಾರು, ದೆಹಲಿ ನಾಯಕರು ನಮ್ಮ ಮನೆ ಬಾಗಿಲಲ್ಲಿ ನಿಂತಿದ್ದಾಗಲೇ ಮೈತ್ರಿಗೆ ಕುಣಿಕೆ ಬಿಗಿಯಲು ಯತ್ನಿಸಿದವರು ಯಾರು ಮಿಸ್ಟರ್ ಟರ್ಮಿನೇಟರ್ ಎಂದು ಹರಿಹಾಯ್ದಿದ್ದಾರೆ.

ಹೈಕಮಾಂಡ್ ಮಟ್ಟದಲ್ಲಿ ಮಾತುಕತೆ ನಡೆದಿದೆ. ನನ್ನ ಹಂತದಲ್ಲಿ ಅಲ್ಲ ಅನ್ನುತ್ತೀರಾ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರ ಮಾತಿಗೇ ನಿಮ್ಮಲ್ಲಿ ಕಿಮ್ಮತ್ತಿಲ್ಲಾ. ಹಾಗಾದರೆ, ಸಿಎಲ್‍ಪಿಯನ್ನೇ ಅಡ್ಡಡ್ಡ ಸೀಳಿ ಬೆಂಬಲಿಗ ಶಾಸಕರು ಬಿಜೆಪಿಗೆ ಹೋಗಲು ದುಷ್ಪ್ರೇರಣೆ ಕೊಟ್ಟವರು ಯಾರು ಕೆಂಡಕಾರಿದ್ದಾರೆ. ಇದನ್ನೂ ಓದಿ: ಆಫ್ರಿಕಾ ಪ್ರಜೆಯಿಂದಲೇ ಮತ್ತೊಬ್ಬ ಆಫ್ರಿಕಾ ಪ್ರಜೆಯ ಬರ್ಬರ ಹತ್ಯೆ

ವರಿಷ್ಠರು ತಂದ ಸರ್ಕಾರವನ್ನೇ ತೆಗೆದಿರಿ, ಬಿಜೆಪಿ ಸರ್ಕಾರ ಬರಲು ಕಾರಣರಾದಿರಿ. ಈಗ ಸುಳ್ಳಿಗೆ ಸುಳ್ಳು ಪೋಣಿಸುತ್ತಿದ್ದೀರಿ. ಬಿಜೆಪಿ ಸರ್ಕಾರ ಬರಲು ಶಾಸಕರ ಟೀಂ ರೆಡಿ ಮಾಡಿದವರು ಯಾರು? ಇಷ್ಟೆಲ್ಲಾ ಸಿದ್ದಕಲೆ ಎಲ್ಲಿಂದ ಬಂತು ಮಿಸ್ಟರ್ ಸಿದ್ದ ಕಲಾ ನಿಪುಣಪ್ಪಾ ಎಂದಿದ್ದಾರೆ.

ಹೈಕಮಾಂಡ್ ನಿರ್ಧಾರಕ್ಕೂ ಗುನ್ನ, ಅಹಿಂದದ ಹೆಸರಿನಲ್ಲಿ ದಲಿತ ನಾಯಕರಾದ ಖರ್ಗೆ ಅವರಿಗೂ ಖೆಡ್ಡಾ, ಡಾ. ಪರಮೇಶ್ವರ್ ಅವರಿಗೆ ಸೋಲಿನ ಸುಳಿ, ಈಗ ನೋಡಿದರೆ ಬಂಡೆಯ ಕೆಳಗೂ ಡೈನಾಮೈಟ್ ಇಡುತ್ತಿದ್ದೀರಿ ಇಂಥ ಅನೈತಿಕ, ನೀಚ, ನಿಕೃಷ್ಟ, ಹೀನ ರಾಜಕಾರಣಕ್ಕೆ ನಾಂದಿ ಹಾಡಿರುವ ಪರಮಪಾತಕ ಪರಾಕಾಷ್ಠೆ ಯಾರು ಎಂದು ವಾಗ್ದಾಳಿ ನಡೆಸಿದ್ದಾರೆ.

ಜೆಡಿಎಸ್ ಬಿಜೆಪಿಯ ಬಿ ಟೀಂ ಅನ್ನುತ್ತೀರಿ ಹಾಗಾದರೆ ಆಡಳಿತ ಪಕ್ಷದಲ್ಲೇ ಕೂತು ವಿರೋಧಿಗಳೊಂದಿಗೆ ಕುಮ್ಮಕ್ಕಾಗಿ ಬೆನ್ನಿಗಿರಿದ ಬ್ರೂಟಸ್ ಯಾರು? ಮೈತ್ರಿ ಸರ್ಕಾರಕ್ಕೆ ಮೊದಲ ದಿನದಿಂದಲೇ ಮಹೂರ್ತ ಇಟ್ಟವರು ಯಾರು? ಸ್ವಯಂಘೋಷಿತ ಅಹಿಂದ ನಾಯಕರೇ ನಿಮ್ಮೊಳಗಿದೆ ಕಾರ್ಕೋಟಕ ವಿಷ. ಆ ವಿಷವೇ ನಿಮಗೆ ಮುಳುವು. ಇದನ್ನೂ ಓದಿ: ರಾಜ್ಯಾದ್ಯಂತ 3 ದಿನ ಮೋಡ ಕವಿದ ವಾತಾವರಣ – ಸಾಧಾರಣ ಮಳೆ ಸಾಧ್ಯತೆ

ಅಹಾ.. ಕೋಲಾರದಲ್ಲಿ ಕಲರ್‍ಫುಲ್ ಸುಳ್ಳುಗಳ ಸರಮಾಲೆಯನ್ನೇ ಸೃಷ್ಟಿಸಿ ಕೃತಾರ್ಥರಾಗಿದ್ದೀರಿ. ಅಡ್ಜಸ್ಟ್‍ಮೆಂಟ್ ರಾಜಕಾರಣದ ಹರಿಕಾರರು ನೀವಲ್ಲವೇ, ವಿನಾಶಕಾಲೇ ವಿಪರೀತ ಸುಳ್ಳು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published.

Back to top button