ನವದೆಹಲಿ: ತಮಿಳುನಾಡಿನ (Tamil Nadu) ಚೆನ್ನೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರನ್ನು ʻಭಯೋತ್ಪಾದಕʼ ಎಂದು ಕರೆದಿದ್ದಕ್ಕಾಗಿ ಚುನಾವಣಾ ಆಯೋಗವು (Election Commission) ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರಿಗೆ ನೋಟಿಸ್ ಜಾರಿ ಮಾಡಿದೆ.
ತಮ್ಮ ನಿಲುವನ್ನು 24 ಗಂಟೆಯ ಒಳಗಡೆ ಸ್ಪಷ್ಟಪಡಿಸುವಂತೆ ಕೇಂದ್ರ ಚುನಾವಣಾ ಆಯೋಗವು (ECI) ನೋಟಿಸ್‌ನಲ್ಲಿ ಸೂಚಿಸಿದೆ.
ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್(Nirmala Sitharaman) ನೇತೃತ್ವದ ಬಿಜೆಪಿ ನಿಯೋಗವು ಖರ್ಗೆ ಅವರ ಹೇಳಿಕೆಯು ಮಾದರಿ ಚುನಾವಣಾ ನೀತಿ ಸಂಹಿತೆಯ (MCC) ಉಲ್ಲಂಘನೆಯಾಗಿದೆ ಎಂದು ಆರೋಪಿಸಿ ಆಯೋಗಕ್ಕೆ ದೂರು ನೀಡಿತ್ತು. ಇದನ್ನೂ ಓದಿ: ತಮಿಳುನಾಡು, ಪಶ್ಚಿಮ ಬಂಗಾಳ ಚುನಾವಣೆ – 1,000 ಕೋಟಿ ಮೌಲ್ಯದ ವಸ್ತುಗಳು ಜಪ್ತಿ
ಖರ್ಗೆ ಹೇಳಿದ್ದೇನು?
ತಮಿಳುನಾಡು ವಿಧಾನಸಭೆ ಚುನಾವಣೆ ಪ್ರಚಾರದ ವೇಳೆ ಡಿಎಂಕೆ ಮತ್ತು ಎಐಎಡಿಎಂಕೆ ಮೈತ್ರಿ ಬಗ್ಗೆ ಮಾತನಾಡುತ್ತಾ, ಎಐಎಡಿಎಂಕೆಯವರು ಮೋದಿಯವರ ಜೊತೆ ಹೇಗೆ ಕೈಜೋಡಿಸುತ್ತಾರೆ? ಅವರು ಒಬ್ಬ ಭಯೋತ್ಪಾದಕ. ಅವರಿಗೆ ಸಮಾನತೆ ಮತ್ತು ನ್ಯಾಯದ ಮೇಲೆ ನಂಬಿಕೆಯಿಲ್ಲ ಎಂದು ವಾಗ್ದಾಳಿ ನಡೆಸಿದ್ದರು.
ತನ್ನ ಹೇಳಿಕೆ ಭಾರೀ ವಿರೋಧ ವ್ಯಕ್ತವಾಗುತ್ತಿದ್ದಂತೆ ಸ್ಪಷ್ಟನೆ ನೀಡಿದ ಅವರು, ನಾನು ಅವರನ್ನು ಅಕ್ಷರಶಃ ಭಯೋತ್ಪಾದಕ ಎಂದು ಕರೆದಿಲ್ಲ. ಅವರು ಇಡಿ (ED), ಸಿಬಿಐ (CBI) ಮತ್ತು ಐಟಿ (IT) ಅಂತಹ ಸಂಸ್ಥೆಗಳ ಮೂಲಕ ರಾಜಕೀಯ ವಿರೋಧಿಗಳನ್ನು ಮತ್ತು ಜನರನ್ನು ಬೆದರಿಸುತ್ತಿದ್ದಾರೆ (Terrorising) ಎಂಬ ಅರ್ಥದಲ್ಲಿ ಹೇಳಿದ್ದೇನೆ ಎಂದು ಹೇಳುವ ಮೂಲಕ ತನ್ನ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಈ ಹಿಂದೆ 2023ರ ಕರ್ನಾಟಕದ ಚುನಾವಣೆ ಮೋದಿ ಅವರನ್ನು ‘ವಿಷದ ಹಾವು’ ಎಂದು ಕರೆದಿದ್ದಕ್ಕಾಗಿ ಖರ್ಗೆ ಅವರಿಗೆ ಆಯೋಗ ನೋಟಿಸ್ ನೀಡಿತ್ತು. ಇದೇ ಸಮಯದಲ್ಲಿ ಅವರ ಪುತ್ರ ಪ್ರಿಯಾಂಕ್ ಖರ್ಗೆ ಅವರಿಗೂ “ನಾಲಾಯಕ್” ಹೇಳಿಕೆಗಾಗಿ ನೋಟಿಸ್ ನೀಡಲಾಗಿತ್ತು
ಹರಿಯಾಣ ಚುನಾವಣೆಯಲ್ಲಿ ಇವಿಎಂ (EVM) ಅಕ್ರಮ ನಡೆದಿದೆ ಎಂಬ ಕಾಂಗ್ರೆಸ್ ಆರೋಪಗಳ ಬಗ್ಗೆ ಆಯೋಗವು ಖರ್ಗೆ ಅವರಿಗೆ ಸುದೀರ್ಘ ಪತ್ರ ಬರೆದು, ಈ ಆರೋಪಗಳು ಆಧಾರರಹಿತ ಮತ್ತು ಸಾರ್ವಜನಿಕರಲ್ಲಿ ಗೊಂದಲ ಮೂಡಿಸುತ್ತವೆ ಎಂದು ಎಚ್ಚರಿಸಿತ್ತು.



