ಅಯೋಧ್ಯೆ: ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ (Shri Ram Janmabhoomi Teerth Kshetra Trust) ತಾತ್ಕಾಲಿಕ ಪ್ರಧಾನ ಕಾರ್ಯದರ್ಶಿಯನ್ನಾಗಿ ನಿವೃತ್ತ ಐಎಫ್‌ಎಸ್ ಅಧಿಕಾರಿ ಕೃಷ್ಣಮೋಹನ್ (Krishna Mohan) ಅವರನ್ನು ನೇಮಕ ಮಾಡಲಾಗಿದೆ.
ರಾಮಮಂದಿರದ (Ram Mandir) ಕಾಣಿಕೆ ಮತ್ತು ದೇಣಿಗೆ ಹಣ ದುರುಪಯೋಗವಾಗಿರುವ ಆರೋಪದ ಹಿನ್ನೆಲೆಯಲ್ಲಿ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ (Champat Rai) ಮತ್ತು ಟ್ರಸ್ಟಿ ಅನಿಲ್ ಮಿಶ್ರಾ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದ್ದರು. ಸೋಮವಾರ ನಡೆದ ಟ್ರಸ್ಟ್‌ನ ಪ್ರಮುಖ ಸಭೆಯಲ್ಲಿ ರಾಜೀನಾಮೆಯನ್ನು ಅಂಗೀಕರಿಸಲಾಗಿದೆ. ಬಳಿಕ ಕೃಷ್ಣಮೋಹನ್ ಅವರನ್ನು ಆ ಸ್ಥಾನಕ್ಕೆ ನೇಮಿಸಲಾಗಿದೆ. ಇದನ್ನೂ ಓದಿ: ರಾಮ ಮಂದಿರ ದೇಣಿಗೆ ಹಗರಣ| ಚಂಪತ್ ರಾಯ್ ರಾಜೀನಾಮೆ ಅಂಗೀಕಾರ; ಬಜರಂಗ್ ಬಾಗ್ರ ಹೊಸ ಪ್ರಧಾನ ಕಾರ್ಯದರ್ಶಿ

ಕೃಷ್ಣಮೋಹನ್ ಯಾರು?
ನಿವೃತ್ತ ಐಎಫ್‌ಎಸ್ ಅಧಿಕಾರಿ ಕೃಷ್ಣಮೋಹನ್ ಅವರು, ಪ್ರಸ್ತುತ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಸದಸ್ಯರು. ರಾಮ ಮಂದಿರ ಟ್ರಸ್ಟ್‌ನ ಟ್ರಸ್ಟಿ ಕಾಮೇಶ್ವರ ಚೌಪಾಲ್ ಅವರ ನಿಧನದ ನಂತರ, 2025ರ ಸೆಪ್ಟೆಂಬರ್ 9ರಂದು ಸದಸ್ಯರನ್ನಾಗಿ ಆಯ್ಕೆ ಮಾಡಲಾಗಿತ್ತು.
ಅವರು ಉತ್ತರ ಪ್ರದೇಶದ ಹರ್ದೋಯಿ ಜಿಲ್ಲೆಯ ಶಹಾಬಾದ್ ನಿವಾಸಿಯಾಗಿದ್ದಾರೆ. ಲಕ್ನೋ ವಿಶ್ವವಿದ್ಯಾಲಯದಲ್ಲಿ ಎಂಎಸ್ಸಿ ಪದವಿ ಪೂರೈಸಿದ್ದಾರೆ. ಬಳಿಕ 1978ರಲ್ಲಿ ಭಾರತೀಯ ಅರಣ್ಯ ಸೇವೆಗೆ (ಐಎಫ್‌ಎಸ್) ಆಯ್ಕೆಯಾಗಿದ್ದರು. ಮಹಾರಾಷ್ಟ್ರದಲ್ಲಿ ಕೇಡರ್ ಅಧಿಕಾರಿಯಾಗಿದ್ದರು.
ನಾಗ್ಪುರ ಪೋಸ್ಟಿಂಗ್ ಸಮಯದಲ್ಲಿ ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಗೆ ಸೇರಿದರು. ಸಂಘದ ನಗರ, ಜಿಲ್ಲೆ, ಪ್ರಾಂತ್ಯ ಮತ್ತು ಕ್ಷೇತ್ರ ಸಂಘ ಚಾಲಕರಾಗಿದ್ದರು. 2012ರಲ್ಲಿ ಸೇವಾ ನಿವೃತ್ತಿಯಾದರು. ಬಳಿಕ ಹಾರ್ದೋಯ್‌ಗೆ ವಾಪಸ್ ಬಂದು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು.
ರಾಮ ಮಂದಿರ ದೇಣಿಗೆ ಅಕ್ರಮ ಆರೋಪ ಬಂದಾಗ ಕೃಷ್ಣಮೋಹನ್ ಕೊಟ್ಟಿದ್ದ ದೂರಿನ ಆಧಾರದಲ್ಲಿ ಎಫ್ ಐ ಆರ್ ದಾಖಲಾಗಿತ್ತು.
ರಾಮಮಂದಿರ ದೇಣಿಗೆ ಕಳ್ಳತನ
ರಾಮಮಂದಿರಕ್ಕೆ ಭಕ್ತರು ನೀಡಿದ ಕಾಣಿಕೆ ಮತ್ತು ದೇಣಿಗೆಯಲ್ಲಿ ಸುಮಾರು 7 ರಿಂದ 7.5 ಕೋಟಿ ರೂ. ಹಣ ದುರುಪಯೋಗವಾಗಿದೆ (Ram Mandir Donation Theft) ಎಂದು ಸಮಾಜವಾದಿ ಪಕ್ಷದ ನಾಯಕರು ಗಂಭೀರ ಆರೋಪ ಮಾಡಿದ್ದರು. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಸೂಚನೆ ಮೇರೆಗೆ ರಚನೆಯಾಗಿದ್ದ ವಿಶೇಷ ತನಿಖಾ ತಂಡ (SIT) ಪ್ರಾಥಮಿಕ ವರದಿಯನ್ನು ಸಲ್ಲಿಸಿತ್ತು. ಮಂದಿರದಲ್ಲಿ ಸಿಸಿಟಿವಿ ಕ್ಯಾಮೆರಾಗಳಿದ್ದರೂ, ಕಾಣಿಕೆ ಹಣ ಎಣಿಕೆ ಮಾಡುವ ಜವಾಬ್ದಾರಿ ಹೊಂದಿದ್ದ ಸಿಬ್ಬಂದಿಯೇ ಹಣ ಕಳ್ಳತನ ಮಾಡಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಈ ಹಗರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಈಗಾಗಲೇ ಚಂಪತ್ ರಾಯ್ ಅವರ ಆಪ್ತ ಹಾಗೂ ಕಾರು ಚಾಲಕ ರಾಮ್ ಶಂಕರ್ ಯಾದವ್ ಅಲಿಯಾಸ್ ಟಿನ್ನು ಯಾದವ್ ಸೇರಿದಂತೆ ಒಟ್ಟು ಎಂಟು ಜನರನ್ನು ಬಂಧಿಸಿದ್ದಾರೆ. ಆರೋಪಿಗಳ ಮನೆಗಳಿಂದ ಸುಮಾರು 80 ಲಕ್ಷ ರೂ. ನಗದನ್ನು ವಶಪಡಿಸಿಕೊಳ್ಳಲಾಗಿದೆ.
ಚಂಪತ್ ರಾಯ್ ಅವರು ತಮ್ಮ ಆಪ್ತರಲ್ಲಿ ಟಿನ್ನು ಯಾದವ್ ನನ್ನ ನಂಬಿಕೆಯನ್ನು ದುರುಪಯೋಗಪಡಿಸಿಕೊಂಡು ಈ ವಂಚನೆ ಎಸಗಿದ್ದಾನೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ ಎಂದು ವರದಿಯಾಗಿದೆ. ಇದನ್ನೂ ಓದಿ: ಈ ಪಾಪಕೃತ್ಯ ಮಾಡಿದ ಪ್ರತಿಯೊಬ್ಬರನ್ನೂ ಮೋದಿ, ಯೋಗಿ ಶಿಕ್ಷಿಸುತ್ತಾರೆ: ಮೌನಮುರಿದ ರಾಮ ಮಂದಿರ ಟ್ರಸ್ಟ್ ಮುಖ್ಯಸ್ಥ
