– ನಾಳೆಗೆ ಕಲಾಪ ಮುಂದೂಡಿಕೆ
ನವದೆಹಲಿ: ಸಾರ್ವಜನಿಕ ಪರೀಕ್ಷೆಗಳಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ(Anti-Paper Leak Bill) ಹಾಗೂ ಅಕ್ರಮಗಳನ್ನು ತಡೆಯಲು ಕೇಂದ್ರ ಸರ್ಕಾರವು ಸಾರ್ವಜನಿಕ ಪರೀಕ್ಷೆಗಳ (ಅಕ್ರಮಗಳ ತಡೆ) ತಿದ್ದುಪಡಿ ಮಸೂದೆ-2026 ಅನ್ನು ಲೋಕಸಭೆಯಲ್ಲಿ (Lok Sabaha) ಮಂಡಿಸಿದೆ.
ಕೇಂದ್ರ ಸಚಿವ ಜಿತೇಂದ್ರ ಸಿಂಗ್(Jitendra Singh) ಅವರು ತಿದ್ದುಪಡಿ ಮಸೂದೆ 2026 ಅನ್ನು ಮಂಡಿಸಿದರು. ಮಂಡಿಸಿದ ಬೆನ್ನಲ್ಲೇ ಭಾರೀ ಗಲಾಟೆ ನಡೆದ ಪರಿಣಾಮ ಕಲಾಪವನ್ನು ಮಂಗಳವಾರಕ್ಕೆ ಮುಂದೂಡಿದ್ದು ಮತಕ್ಕೆ ಹಾಕಲಾಗುತ್ತದೆ.
ಇಂದು ಬೆಳಗ್ಗೆ ಕಲಾಪ ಆರಂಭವಾಗುತ್ತಿದ್ದಂತೆ ವಿದ್ಯಾರ್ಥಿಗಳ ಮೇಲೆ ಪೊಲೀಸರು ನಡೆಸಿದ ಲಾಠಿಚಾರ್ಜ್ ಖಂಡಿಸಿ ವಿರೋಧಪಕ್ಷದ ಸದಸ್ಯರು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಕಲಾಪವನ್ನು 2 ಗಂಟೆಗೆ ಮುಂದೂಡಲಾಯಿತು. ಇದನ್ನೂ ಓದಿ: 1 ಕೋಟಿ ದೇಣಿಗೆ, ಉಚಿತ ಕಾನೂನು ನೆರವು – ಸಿಜೆಪಿ ಪ್ರತಿಭಟನಾಕಾರರ ಬೆಂಬಲಕ್ಕೆ ನಿಂತ ಕಪಿಲ್ ಸಿಬಲ್
ಮಧ್ಯಾಹ್ನ 2 ಗಂಟೆಗೆ ಕಲಾಪ ಶುರುವಾದಾಗಲೂ ಅದೇ ಚಿತ್ರಣ. ಈ ವೇಳೆ ಗರಂ ಆದ ಸ್ಪೀಕರ್ ಓಂಬಿರ್ಲಾ, ವಿಪಕ್ಷಗಳು-ಸರ್ಕಾರ ಸಮಾಲೋಚನೆ ನಡೆಸಿ ಒಂದು ಸೂಕ್ತ ನಿರ್ಧಾರಕ್ಕೆ ಬರಬೇಕು ಅಂತ ಸಲಹೆ ನೀಡಿದರು. ಅಲ್ಲದೇ ಸಂಜೆ 5 ಗಂಟೆಯಿಂದ ಸುದೀರ್ಘ ಚರ್ಚೆ ಆಗಲಿದೆ ಅಂತ ಸದನಕ್ಕೆ ತಿಳಿಸಿದರು. ಸಂಜೆ ಕಲಾಪ ಆರಂಭವಾದರೂ, ಗದ್ದಲದಿಂದಾಗಿ ನಾಳೆಗೆ ಮುಂದೂಡಲಾಯಿತು. ಇದನ್ನೂ ಓದಿ: ಪ್ರತಿಭಟನೆ ನಡೆಸಿದ ಮಾತ್ರಕ್ಕೆ ಲಾಠಿಚಾರ್ಜ್ ಮಾಡಲು ಸಾಧ್ಯವಿಲ್ಲ: ಸುಪ್ರೀಂ ಕೋರ್ಟ್
ರಾಜ್ಯಸಭೆಯಲ್ಲೂ ಕಲಾಪ ಆರಂಭವಾಗುತ್ತಿದ್ದಂತೆ ವಿಪಕ್ಷಗಳು ಪ್ರತಿಭಟನಾನಿರತ ವಿದ್ಯಾರ್ಥಿಗಳ ಮೇಲಿನ ಲಾಠಿಚಾರ್ಜ್ ಪ್ರಸ್ತಾಪಿಸಿ ಘೋಷಣೆ ಕೂಗಿದರು. ಮಲ್ಲಿಕಾರ್ಜುನ ಖರ್ಗೆ ಮಾತಾಡಿ, ಇದು ನಮ್ಮ ಇತಿಹಾಸದಲ್ಲಿ ಪ್ರಜಾಪ್ರಭುತ್ವದ ಮೇಲಾದ ಅತ್ಯಂತ ಗಂಭೀರವಾದ ದಾಳಿಗಳಲ್ಲಿ ಒಂದಾಗಿದೆ. ಮ್ಮ ಧ್ವನಿ ಎತ್ತಿದ್ದಕ್ಕಾಗಿ ವಿದ್ಯಾರ್ಥಿಗಳನ್ನು ಥಳಿಸಿ, ಎಳೆದಾಡಿ, ಅಪರಾಧಿಗಳಂತೆ ನಡೆಸಿಕೊಂಡ ಘಟನೆ ಹಿಂದೆಂದೂ ಸಂಭವಿಸಿರಲಿಲ್ಲ. ಗೃಹ ಸಚಿವ ಅಮಿತ್ ಶಾ ಅವರನ್ನು ಹೊಣೆಗಾರರನ್ನಾಗಿಸಬೇಕು ಎಂದು ಆಕ್ರೋಶ ಹೊರಹಾಕಿದರು.
ವಿಪಕ್ಷಗಳ ಗದ್ದಲಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು, ದೇಶಾದ್ಯಂತ ವಿದ್ಯಾರ್ಥಿಗಳು ವ್ಯಕ್ತಪಡಿಸಿರುವ ಕಳವಳಗಳನ್ನು ಗಮನದಲ್ಲಿಟ್ಟುಕೊಂಡು ಲೋಕಸಭೆಯಲ್ಲಿ ಪ್ರಮುಖ ಮಸೂದೆ ಮಂಡಿಸಲಾಗಿದೆ. ಆದರೆ ಸುಗಮ ಕಲಾಪಕ್ಕೆ ವಿಪಕ್ಷಗಳು ಅಡ್ಡಿ ಮಾಡುತ್ತಿರೋದು ಬೇಸರ ಸಂಗತಿ ಎಂದು ದೂರಿದರು.
