ನವದೆಹಲಿ: ಪ್ರತಿಭಟನೆ ನಡೆಸಿದ ಕಾರಣಕ್ಕೆ ಲಾಠಿಚಾರ್ಜ್ (Lathicharge) ಮಾಡಲು ಸಾಧ್ಯವಿಲ್ಲ. ಇಂತಹ ನಡೆ ಸಮರ್ಥನೀಯವಲ್ಲ ಎಂದು ಸುಪ್ರೀಂ ಕೋರ್ಟ್ (Supreme Court) ಅಭಿಪ್ರಾಯಪಟ್ಟಿದೆ.
ನೀಟ್ ಪ್ರಶ್ನೆ ಪತ್ರಿಕೆ (NEET 2026) ಸೋರಿಕೆ ವಿರುದ್ಧ ಕಾಕ್ರೋಚ್ ಜನತಾ ಪಾರ್ಟಿ ನಡೆಸಿದ್ದ ಸಂಸತ್ ಚಲೋ ಪ್ರತಿಭಟನೆ ವೇಳೆ ವಿದ್ಯಾರ್ಥಿಗಳ (Students Protest) ಮೇಲೆ ಪೊಲೀಸರು ಲಾಠಿಚಾರ್ಜ್ ನಡೆಸಿ, ಪೆಲೆಟ್ ಗನ್ ಹಾಗೂ ಅಶ್ರವಾಯು ಸಿಡಿಸಿದ್ದರು. ಅಲ್ಲದೇ ದೇಶಾದ್ಯಂತ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುತ್ತಿರುವ ವಿದ್ಯಾರ್ಥಿಗಳ ಮೇಲೆ ಪೊಲೀಸರು ಲಾಠಿಚಾರ್ಜ್ ಮಾಡುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದಿದ್ದವು. ಈ ಬಗ್ಗೆ ವಿಚಾರಣೆ ನಡೆಸುವಂತೆ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದ್ದು, ಅರ್ಜಿಗಳ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಇದನ್ನೂ ಓದಿ: ವಿದ್ಯಾರ್ಥಿಗಳ ಪ್ರತಿಭಟನೆ ವೇಳೆ AK-47 ಹಿಡಿದು ಗುಂಡು ಹಾರಿಸಿದ ಕಾನ್ಸ್‌ಟೇಬಲ್ – ವಿಡಿಯೋ ವೈರಲ್ ಬೆನ್ನಲ್ಲೇ ಅಮಾನತು

ಸಿಜೆಐ ಸೂರ್ಯ ಕಾಂತ್, ನ್ಯಾ.ಜೋಯ್ಮಲ್ಯ ಬಾಗ್ಚಿ ಮತ್ತು ನ್ಯಾ.ವಿ ಮೋಹನ ಅವರಿದ್ದ ಪೀಠ ಈ ಅರ್ಜಿಗಳನ್ನು ವಿಚಾರಣೆಗೆ ಕೈಗೆತ್ತಿಕೊಂಡಿದೆ. ಈ ವೇಳೆ ಶಾಂತಿಯುತ ಮತ್ತು ಕಾನೂನುಬದ್ಧ ಪ್ರತಿಭಟನೆಯ ಹಕ್ಕನ್ನು ಸಂವಿಧಾನ ನೀಡಿದೆ. ಕೇವಲ ಪ್ರತಿಭಟನೆ ನಡೆಸಿದ ಮಾತ್ರಕ್ಕೆ ಲಾಠಿಚಾರ್ಜ್ ನಡೆಸುವುದು ಸಮರ್ಥನೀಯವಲ್ಲ ಎಂದು ಪೀಠ ಹೇಳಿದೆ.
ಪೊಲೀಸರ ಬಲವಂತದ ಕ್ರಮಗಳ ಬಗ್ಗೆ ಸ್ವತಂತ್ರ ಪರಿಶೀಲನೆ ಆಗಬೇಕು. ದೇಶಾದ್ಯಂತ ಪ್ರತಿಭಟನೆಗಳನ್ನು ನಿರ್ವಹಿಸಲು ಪೊಲೀಸರಿಗೆ ಏಕರೂಪದ ಮಾರ್ಗಸೂಚಿಗಳ ಅಗತ್ಯವಿದೆ ಎಂದು ಪೀಠ ಅಭಿಪ್ರಾಯಪಟ್ಟಿದೆ. ಇದನ್ನೂ ಓದಿ: ದೆಹಲಿ ಪೊಲೀಸರಿಂದ ಪೆಲೆಟ್ ಗನ್ ಬಳಕೆ – ಮಾಧ್ಯಮಗಳ ಮುಂದೆ ಗಾಯಾಳುವಿನ ಟಿ ಶರ್ಟ್ ಎತ್ತಿ ತೋರಿಸಿದ ರಾಹುಲ್ ಗಾಂಧಿ
