ನವದೆಹಲಿ: ಡಿಜಿಟಲ್ ಪಾವತಿ ಬಳಕೆದಾರರಿಗೆ (UPI Payments) ಕೇಂದ್ರ ಸರ್ಕಾರ ಮಹತ್ವದ ಸ್ಪಷ್ಟನೆ ನೀಡಿದ್ದು, 2,000 ರೂ. ವರೆಗೆ ನಡೆಯುವ ಯುಪಿಐ ವಹಿವಾಟುಗಳಿಗೆ ಯಾವುದೇ ನೇರ ಅಥವಾ ಪರೋಕ್ಷ ಶುಲ್ಕ ವಿಧಿಸುವಂತಿಲ್ಲ ಎಂದು ತಿಳಿಸಿದೆ. ಇದೇ ನಿಯಮ ರೂಪೇ ಡೆಬಿಟ್ ಕಾರ್ಡ್ ಮೂಲಕ ನಡೆಯುವ ಪಾವತಿಗಳಿಗೂ ಅನ್ವಯವಾಗಲಿದೆ.
ಬ್ಯಾಂಕ್‌ಗಳು ಅಥವಾ ಪಾವತಿ ವ್ಯವಸ್ಥೆ ಒದಗಿಸುವ ಸಂಸ್ಥೆಗಳು ಇಂತಹ ವಹಿವಾಟುಗಳಿಗೆ ಗ್ರಾಹಕರಿಂದ ಯಾವುದೇ ಶುಲ್ಕ ವಸೂಲಿ ಮಾಡುವಂತಿಲ್ಲ. ಕೇಂದ್ರ ಹಣಕಾಸು ಸಚಿವಾಲಯವು ಪಾವತಿ ಮತ್ತು ಇತ್ಯರ್ಥ ವ್ಯವಸ್ಥೆಗಳ ಕಾಯ್ದೆ (Payment and Settlement Systems Act) 2007ರ ತಿದ್ದುಪಡಿ ನಿಯಮಗಳ ಅಡಿಯಲ್ಲಿ ಈ ಅಧಿಸೂಚನೆ ಹೊರಡಿಸಿದೆ.
2,000 ರೂ.ವರೆಗೆ ಯುಪಿಐ ಮೂಲಕ ಹಣ ಪಾವತಿಸುವವರು ಮಾತ್ರವಲ್ಲದೆ, ಹಣ ಸ್ವೀಕರಿಸುವವರ ಮೇಲೂ ಯಾವುದೇ ನೇರ ಅಥವಾ ಪರೋಕ್ಷ ಶುಲ್ಕ ವಿಧಿಸಲು ಅವಕಾಶವಿಲ್ಲ. ರೂಪೇ ಡೆಬಿಟ್ ಕಾರ್ಡ್ ಪಾವತಿಗಳಿಗೂ ಇದೇ ರೀತಿಯ ಶುಲ್ಕ ವಿನಾಯಿತಿ ಮುಂದುವರಿಯಲಿದೆ.
ಸದ್ಯದ ಅಧಿಸೂಚನೆಯ ಪ್ರಮುಖ ಅಂಶವೆಂದರೆ, 2,000 ರೂ.ಗಿಂತ ಹೆಚ್ಚಿನ ಯುಪಿಐ ವಹಿವಾಟುಗಳ ಮೇಲೆ ಶುಲ್ಕ ವಿಧಿಸುವ ಸಾಧ್ಯತೆಗೆ ಅವಕಾಶ ಕಲ್ಪಿಸಿರುವುದು. ಆದರೆ ಇಂತಹ ವಹಿವಾಟುಗಳಿಗೆ ಶುಲ್ಕ ವಿಧಿಸುವುದೇ ಅಥವಾ ಇಲ್ಲವೇ, ವಿಧಿಸಿದರೆ ಎಷ್ಟು ಶುಲ್ಕ ಮತ್ತು ಯಾವ ರೀತಿಯಲ್ಲಿ ವಿಧಿಸಲಾಗುತ್ತದೆ ಎಂಬುದರ ಕುರಿತು ಸರ್ಕಾರದಿಂದ ಇನ್ನೂ ಅಂತಿಮ ನಿರ್ಧಾರ ಹೊರಬಿದ್ದಿಲ್ಲ.
ಇದು ವಿಶೇಷವಾಗಿ ವ್ಯಾಪಾರಿಗಳಿಗೆ ಸಂಬಂಧಿಸಿದ ವ್ಯಾಪಾರಿ ರಿಯಾಯಿತಿ ದರ (Merchant Discount Rate: MDR) ಕುರಿತು ಮುಂದಿನ ದಿನಗಳಲ್ಲಿ ಹೊಸ ವ್ಯವಸ್ಥೆ ಜಾರಿಗೆ ಬರುವ ಸಾಧ್ಯತೆಯನ್ನು ಸೂಚಿಸಿದೆ. ಆದರೆ ಸಾಮಾನ್ಯ ವ್ಯಕ್ತಿಯಿಂದ ವ್ಯಕ್ತಿಗೆ ನಡೆಯುವ ಪಾವತಿಗಳ ಮೇಲೆ ಶುಲ್ಕ ವಿಧಿಸುವ ಬಗ್ಗೆ ಈ ಅಧಿಸೂಚನೆಯಲ್ಲಿ ಯಾವುದೇ ಅಂತಿಮ ಘೋಷಣೆ ಇಲ್ಲ.
ಸಣ್ಣ ಮೊತ್ತದ ಡಿಜಿಟಲ್ ಪಾವತಿಗಳಿಗೆ ಶುಲ್ಕದ ಹೊರೆ ಬಾರದಂತೆ ನೋಡಿಕೊಳ್ಳುವುದು ಸರ್ಕಾರದ ನಿರ್ಧಾರದ ಪ್ರಮುಖ ಉದ್ದೇಶವಾಗಿದೆ. ದಿನನಿತ್ಯದ ಖರೀದಿ, ಸಣ್ಣ ವ್ಯಾಪಾರಿಗಳ ಪಾವತಿ ಸೇರಿದಂತೆ 2,000 ರೂ. ವರೆಗಿನ UPI ವಹಿವಾಟುಗಳು ಶುಲ್ಕಮುಕ್ತವಾಗಿರುವುದರಿಂದ ಡಿಜಿಟಲ್ ಪಾವತಿ ಬಳಕೆದಾರರಿಗೆ ತಕ್ಷಣದ ಹೆಚ್ಚುವರಿ ವೆಚ್ಚ ಇರುವುದಿಲ್ಲ. ಇದನ್ನೂ ಓದಿ: ಮಂಗಳ ಗೌರಿಗಾಗಿ ಒಂದಾದ ಮಾಲಾಶ್ರೀ, ರುಕ್ಮಿಣಿ ವಸಂತ್
2025-26ರ ಅಂಕಿಅಂಶಗಳ ಪ್ರಕಾರ, ವ್ಯಕ್ತಿಯಿಂದ ವ್ಯಾಪಾರಿಗೆ ನಡೆದ UPI ಪಾವತಿಗಳಲ್ಲಿ ಕೇವಲ ಶೇ.4ರಷ್ಟು ವಹಿವಾಟುಗಳು 2,000 ರೂ.ಗಿಂತ ಹೆಚ್ಚಿನ ಮೊತ್ತದ್ದಾಗಿದ್ದವು. ಆದರೆ, ಮೌಲ್ಯದ ದೃಷ್ಟಿಯಿಂದ ಈ ದೊಡ್ಡ ಮೊತ್ತದ ವಹಿವಾಟುಗಳ ಪಾಲು ಸುಮಾರು ಮೂರನೇ ಎರಡರಷ್ಟಿತ್ತು. ಹೀಗಾಗಿ ಮುಂದಿನ ಶುಲ್ಕ ವ್ಯವಸ್ಥೆಯು ಮುಖ್ಯವಾಗಿ ಹೆಚ್ಚಿನ ಮೌಲ್ಯದ ವ್ಯಾಪಾರಿ ವಹಿವಾಟುಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.ಇದನ್ನೂ ಓದಿ: BBK 13: ಬಳೆ ಹಾಕಿಕೊಂಡು ಕುಳಿತುಕೊಳ್ಳಿ ಎಂದ ಕಿರಣ್ – ದೊಡ್ಮನೆಯಲ್ಲಿ ಮತ್ತೆ ಶುರುವಾಯ್ತು ‘ಬಳೆ’ ವಿವಾದ

