ಅಯೋಧ್ಯೆ: ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ (Champat Rai)ಮತ್ತು ಟ್ರಸ್ಟಿ ಅನಿಲ್ ಮಿಶ್ರಾ ಅವರ ರಾಜೀನಾಮೆಯನ್ನು ಟ್ರಸ್ಟ್ ಅಧಿಕೃತವಾಗಿ ಅಂಗೀಕರಿಸಿದೆ.
ರಾಮಮಂದಿರದ (Ram Mandir) ಕಾಣಿಕೆ ಮತ್ತು ದೇಣಿಗೆ ಹಣ ದುರುಪಯೋಗವಾಗಿರುವ ಆರೋಪದ ಹಿನ್ನೆಲೆಯಲ್ಲಿ ಇವರಿಬ್ಬರೂ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದ್ದರು. ಸೋಮವಾರ ನಡೆದ ಟ್ರಸ್ಟ್‌ನ ಪ್ರಮುಖ ಸಭೆಯಲ್ಲಿ ರಾಜೀನಾಮೆಯನ್ನು ಅಂಗೀಕರಿಸಲಾಗಿದೆ.
ರಾಮಮಂದಿರಕ್ಕೆ ಭಕ್ತರು ನೀಡಿದ ಕಾಣಿಕೆ ಮತ್ತು ದೇಣಿಗೆಯಲ್ಲಿ ಸುಮಾರು 7 ರಿಂದ 7.5 ಕೋಟಿ ರೂ. ಹಣ ದುರುಪಯೋಗವಾಗಿದೆ ಎಂದು ಸಮಾಜವಾದಿ ಪಕ್ಷದ ನಾಯಕರು ಗಂಭೀರ ಆರೋಪ ಮಾಡಿದ್ದರು. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಸೂಚನೆ ಮೇರೆಗೆ ರಚನೆಯಾಗಿದ್ದ ವಿಶೇಷ ತನಿಖಾ ತಂಡ (SIT) ಪ್ರಾಥಮಿಕ ವರದಿಯನ್ನು ಸಲ್ಲಿಸಿತ್ತು. ಮಂದಿರದಲ್ಲಿ ಸಿಸಿಟಿವಿ ಕ್ಯಾಮೆರಾಗಳಿದ್ದರೂ, ಕಾಣಿಕೆ ಹಣ ಎಣಿಕೆ ಮಾಡುವ ಜವಾಬ್ದಾರಿ ಹೊಂದಿದ್ದ ಸಿಬ್ಬಂದಿಯೇ ಹಣ ಕಳ್ಳತನ ಮಾಡಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಈ ಪಾಪಕೃತ್ಯ ಮಾಡಿದ ಪ್ರತಿಯೊಬ್ಬರನ್ನೂ ಮೋದಿ, ಯೋಗಿ ಶಿಕ್ಷಿಸುತ್ತಾರೆ: ಮೌನಮುರಿದ ರಾಮ ಮಂದಿರ ಟ್ರಸ್ಟ್ ಮುಖ್ಯಸ್ಥ
ಈ ಹಗರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಈಗಾಗಲೇ ಚಂಪತ್ ರಾಯ್ ಅವರ ಆಪ್ತ ಹಾಗೂ ಕಾರು ಚಾಲಕ ರಾಮ್ ಶಂಕರ್ ಯಾದವ್ ಅಲಿಯಾಸ್ ಟಿನ್ನು ಯಾದವ್ ಸೇರಿದಂತೆ ಒಟ್ಟು ಎಂಟು ಜನರನ್ನು ಬಂಧಿಸಿದ್ದಾರೆ. ಆರೋಪಿಗಳ ಮನೆಗಳಿಂದ ಸುಮಾರು 80 ಲಕ್ಷ ರೂ. ನಗದನ್ನು ವಶಪಡಿಸಿಕೊಳ್ಳಲಾಗಿದೆ.
ಚಂಪತ್ ರಾಯ್ ಅವರು ತಮ್ಮ ಆಪ್ತರಲ್ಲಿ ಟಿನ್ನು ಯಾದವ್ ನನ್ನ ನಂಬಿಕೆಯನ್ನು ದುರುಪಯೋಗಪಡಿಸಿಕೊಂಡು ಈ ವಂಚನೆ ಎಸಗಿದ್ದಾನೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ ಎಂದು ವರದಿಯಾಗಿದೆ. ಇದನ್ನೂ ಓದಿ: ಕರ್ನಾಟಕಕ್ಕೆ ತಂದು ಕರಗಿಸಿದ್ರಾ ರಾಮನ ಚಿನ್ನ? – ರೈಲಿನಲ್ಲಿ ಸಾಗಿಸಿ ಬಿಸ್ಕೆಟ್ ಮಾಡಿರುವ ಶಂಕೆ
ಭಕ್ತರಿಗೆ ಟ್ರಸ್ಟ್‌ನಿಂದ ಭರವಸೆ
ದೇಣಿಗೆ ಕಳ್ಳತನದ ಘಟನೆಯಿಂದ ತೀವ್ರ ಆಘಾತ ಮತ್ತು ನೋವಾಗಿದೆ ಎಂದು ತಿಳಿಸಿರುವ ರಾಮಮಂದಿರ ಟ್ರಸ್ಟ್, ಭಕ್ತರು ವೈಯಕ್ತಿಕವಾಗಿ ನೀಡಿದ ಬೆಳ್ಳಿ ಇಟ್ಟಿಗೆಗಳು, ಒಡವೆಗಳು ಮತ್ತು ಇತರೆ ಬೆಲೆಬಾಳುವ ವಸ್ತುಗಳು ಸಂಪೂರ್ಣ ಸುರಕ್ಷಿತವಾಗಿವೆ ಮತ್ತು ಅವುಗಳ ನಿಖರವಾದ ದಾಖಲೆಗಳು ಟ್ರಸ್ಟ್ ಬಳಿ ಇವೆ ಎಂದು ಸ್ಪಷ್ಟಪಡಿಸಿದೆ. ತಪ್ಪಿತಸ್ಥರಿಗೆ ಕಾನೂನಿನ ಪ್ರಕಾರ ಕಠಿಣ ಶಿಕ್ಷೆ ಕೊಡಿಸುವುದಾಗಿ ಟ್ರಸ್ಟ್ ಭರವಸೆ ನೀಡಿದೆ.
