ಚೆನ್ನೈ: ಕರೂರು ಕಾಲ್ತುಳಿತ (Karur Stampede) ಸಂತ್ರಸ್ತರ ಕುಟುಂಬಸ್ಥರಿಗೆ ಸಿಎಂ ವಿಜಯ್ (CM Vijay) ಹೊರಡಿಸಿದ್ದ ಸರ್ಕಾರಿ ಉದ್ಯೋಗ ಆದೇಶವನ್ನು ಮದ್ರಾಸ್ ಹೈಕೋರ್ಟ್ (Madras High Court) ರದ್ದುಗೊಳಿಸಿದೆ.
ಈ ಕ್ರಮದಿಂದ ಇತರರು ಅಂತಹ ಉದ್ಯೋಗವನ್ನು ಪಡೆಯಲು ʻಮಹಾದ್ವಾರʼ ತೆರೆದಂತಾಗುತ್ತದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಅಲ್ಲದೇ ಸರ್ಕಾರದ ನಿರ್ಧಾರ ಸಂವಿಧಾನದ ಆರ್ಟಿಕಲ್ 14 (ಸಮಾನತೆಯ ಹಕ್ಕು) ಮತ್ತು ಆರ್ಟಿಕಲ್ 16ನ್ನು (ಸರ್ಕಾರಿ ಉದ್ಯೋಗದಲ್ಲಿ ಅವಕಾಶದ ಸಮಾನತೆ) ಉಲ್ಲಂಘಿಸುತ್ತದೆ ಎಂದು ಪೀಠ ಅಭಿಪ್ರಾಯಪಟ್ಟಿದೆ. ಇದನ್ನೂ ಓದಿ: ಕರೂರು ಕಾಲ್ತುಳಿತ – ಮೃತರ ಕುಟುಂಬಸ್ಥರಿಗೆ 10 ಲಕ್ಷ ಪರಿಹಾರ ಘೋಷಿಸಿದ ಸಿಎಂ ಸ್ಟಾಲಿನ್

ಈ ತಿಂಗಳ ಆರಂಭದಲ್ಲಿ, ಮುಖ್ಯಮಂತ್ರಿ ವಿಜಯ್ ಕರೂರಿಗೆ ಭೇಟಿ ನೀಡಿದ್ದರು. ಈ ವೇಳೆ 41 ಸಂತ್ರಸ್ತರ ಕುಟುಂಬಗಳ ಪೈಕಿ, 32 ಕುಟುಂಬಗಳಿಗೆ ಕರುಣಾಳು ಸರ್ಕಾರಿ ಉದ್ಯೋಗ ನೇಮಕಾತಿ ಆದೇಶ ಪ್ರತಿಯನ್ನು ವಿತರಿಸಿದ್ದರು.
ವಿಜಯ್ ನಿರ್ಧಾರಕ್ಕೆ ಎಐಎಡಿಎಂಕೆ ನಾಯಕನ ವಿರೋಧ
ಹಿರಿಯ ಎಐಎಡಿಎಂಕೆ ನಾಯಕ ಆರ್.ಬಿ. ಉದಯಕುಮಾರ್ ಅವರು ಕಾಲ್ತುಳಿತ ಸಂತ್ರಸ್ತರ ಕುಟುಂಬಸ್ಥರಿಗೆ ಉದ್ಯೋಗ ನೀಡುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ತಮಿಳುನಾಡಿನಲ್ಲಿ ಎಲ್ಲಾ ಸರ್ಕಾರಿ ನೇಮಕಾತಿಗಳನ್ನು ತಮಿಳುನಾಡು ಸಾರ್ವಜನಿಕ ಸೇವಾ ಆಯೋಗ (ಟಿಎನ್‌ಪಿಎಸ್‌ಸಿ) ಮೂಲಕ ಕಟ್ಟುನಿಟ್ಟಾಗಿ ನಡೆಸಬೇಕು ಎಂದು ಒತ್ತಿ ಹೇಳಿದ್ದರು. ರಾಜಕೀಯ ಕಾರಣಗಳಿಗಾಗಿ ನಿಯಮಗಳನ್ನು ಉಲ್ಲಂಘಿಸುವ ಮೂಲಕ ಸರ್ಕಾರಿ ಉದ್ಯೋಗಗಳನ್ನು ಪರಿಹಾರವಾಗಿ ನೀಡುವ ನಿರ್ಧಾರ ತಪ್ಪು. ಇದು ಯುವಜನರ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಿದ್ದರು.
ಕರೂರು ಕಾಲ್ತುಳಿತ ಪ್ರಕರಣ
2025ರ ಸೆಪ್ಟೆಂಬರ್‌ನಲ್ಲಿ ಡಿಎಂಕೆ ಅಧಿಕಾರದಲ್ಲಿದ್ದಾಗ ವಿಜಯ್ ಪಾಲ್ಗೊಂಡಿದ್ದ ಟಿವಿಕೆ (TVK) ರ‍್ಯಾಲಿಯಲ್ಲಿ ನಡೆ ಕಾಲ್ತುಳಿತ ಸಂಭವಿಸಿತ್ತು. ಈ ಅವಘಡದಲ್ಲಿ ಮಕ್ಕಳು ಸೇರಿದಂತೆ 41 ಜನ ಸಾವನ್ನಪ್ಪಿದ್ದರು. ವಿಜಯ್ ಕಾರ್ಯಕ್ರಮಕ್ಕೆ ತಡವಾಗಿ ಬಂದಿದ್ದರಿಂದ ಅನುಮತಿಸಲಾದ ಸಾಮರ್ಥ್ಯಕ್ಕಿಂತ ಹೆಚ್ಚಿನ ಜನಸಂದಣಿ ಉಂಟಾಗಿತ್ತು ಎಂದು ಪೊಲೀಸರು ಆರೋಪಿಸಿದ್ದರು. ರ‍್ಯಾಲಿಯ ಸ್ಥಳದಲ್ಲಿ ಕುಡಿಯುವ ನೀರು, ಆಹಾರ ಮತ್ತು ಶೌಚಾಲಯ ಸೌಲಭ್ಯಗಳ ಕೊರತೆ ಸೇರಿದಂತೆ ಹಲವಾರು ಲೋಪಗಳನ್ನು ಉಲ್ಲೇಖಿಸಿದ್ದರು.
ಟಿವಿಕೆ ಈ ಆರೋಪಗಳನ್ನು ತಿರಸ್ಕರಿಸಿತ್ತು. ಅಲ್ಲದೇ ಪೊಲೀಸರ ವೈಫಲ್ಯ ಮತ್ತು ಮಾಜಿ ಡಿಎಂಕೆ ಸಚಿವ ಸೆಂಥಿಲ್ ಬಾಲಾಜಿ ಅವರ ಪಿತೂರಿಯಿಂದ ಈ ಅವಘಡ ಸಂಭವಿಸಿದೆ ಎಂದು ಆರೋಪಿಸಿತ್ತು.
ಅಕ್ಟೋಬರ್ 2025 ರಲ್ಲಿ, ಸುಪ್ರೀಂ ಕೋರ್ಟ್ ತನಿಖೆಯನ್ನು ರಾಜ್ಯ ಮಟ್ಟದ ವಿಶೇಷ ತನಿಖಾ ತಂಡದಿಂದ (ಎಸ್‌ಐಟಿ) ಕೇಂದ್ರ ತನಿಖಾ ದಳಕ್ಕೆ (ಸಿಬಿಐ) ವರ್ಗಾಯಿಸಿತ್ತು. ಈ ವೇಳೆ ಸ್ವತಂತ್ರ ಮತ್ತು ನಿಷ್ಪಕ್ಷಪಾತ ತನಿಖೆಯ ಅಗತ್ಯವನ್ನು ಒತ್ತಿಹೇಳಿತ್ತು. ಈ ಪ್ರಕರಣದ ತನಿಖೆಯನ್ನು ಸಿಬಿಐ ನಡೆಸುತ್ತಿದೆ. ಇದನ್ನೂ ಓದಿ: ಕೊಟ್ಟ ಮಾತು ಉಳಿಸಿಕೊಂಡ ಸಿಎಂ ವಿಜಯ್ – ಕರೂರು ದುರಂತ ಸಂತ್ರಸ್ತರ 32 ಕುಟುಂಬಗಳಿಗೆ ಸರ್ಕಾರಿ ಉದ್ಯೋಗ
