ಮಡಿಕೇರಿ: ಕೊಡಗು (Kodagu) ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ವರುಣನ ಅಬ್ಬರ ಜೋರಾಗಿದ್ದು, ಜಿಲ್ಲೆಯ ಜಲಪಾತಗಳು ಮೈದುಂಬಿ ಹರಿಯುತ್ತಿದೆ. ಆದರೆ ಇದೇ ವೇಳೆ ಪ್ರವಾಸಿಗರ ಕೆಲ ನಿರ್ಲಕ್ಷ್ಯ ಹಾಗೂ ಹುಚ್ಚಾಟಗಳು ಪ್ರಾಣಕ್ಕೆ ಕುತ್ತು ತರುತ್ತಿವೆ. ಇಂತಹದ್ದೇ ಒಂದು ಘಟನೆ ಸೋಮವಾರಪೇಟೆ ತಾಲೂಕಿನ ಪ್ರಸಿದ್ಧ ಮಲ್ಲಳ್ಳಿ ಜಲಪಾತದಲ್ಲಿ(Mallalli Waterfalls) ನಡೆದಿದೆ.
ಫೋಟೋ ತೆಗೆಯಲು ಹೋಗಿ ಜಲದಿಗ್ಬಂಧನಕ್ಕೆ ಸಿಲುಕಿದ್ದ ಇಬ್ಬರು ಕಾಲೇಜು ವಿದ್ಯಾರ್ಥಿಗಳನ್ನು(Bengaluru Students) ಅಗ್ನಿಶಾಮಕ ಸಿಬ್ಬಂದಿ ರೋಮಾಂಚನಕಾರಿಯಾಗಿ ರಕ್ಷಿಸಿದ್ದಾರೆ. ಆಂಧ್ರಪ್ರದೇಶ ಮೂಲದ ಸಂತೋಷ್ ಕುಮಾರ್ ಮತ್ತು ಗಣೇಶ್ ನಾಯಕ್ ಬೆಂಗಳೂರಿನ ಪ್ರತಿಷ್ಠಿತ ಕಾಲೇಜೊಂದರಲ್ಲಿ ವ್ಯಾಸಂಗ ಮಾಡುತ್ತಿದ್ದು, ವೀಕೆಂಡ್ ಹಿನ್ನೆಲೆ ಕೊಡಗು ಪ್ರವಾಸಕ್ಕೆ ಬಂದಿದ್ದರು. ಭೋರ್ಗರೆದು ಹರಿಯುತ್ತಿದ್ದ ಮಲ್ಲಳ್ಳಿ ಜಲಪಾತದ ಮಧ್ಯದಲ್ಲಿದ್ದ ಬಂಡೆಯೊಂದರ ಮೇಲೆ ನಿಂತು ಫೋಟೋ ಹಾಗೂ ಸೆಲ್ಫಿ ತೆಗೆದುಕೊಳ್ಳಲು ಇಬ್ಬರೂ ಇಳಿದಿದ್ದರು.
ಬಂಡೆಯ ಮೇಲೆ ನಿಂತು ಫೋಟೋ ಕ್ಲಿಕ್ಕಿಸಿಕೊಳ್ಳುತ್ತಿದ್ದಾಗ, ಜಲಪಾತದ ಮೇಲ್ಭಾಗದಲ್ಲಿರುವ ವಿದ್ಯುತ್ ಉತ್ಪಾದನಾ ಘಟಕದಿಂದ ಏಕಾಏಕಿ ಹೆಚ್ಚಿನ ಪ್ರಮಾಣದ ನೀರನ್ನು ನದಿಗೆ ಹರಿಬಿಡಲಾಯಿತು. ಪರಿಣಾಮ ಕಣ್ಮುಚ್ಚಿ ಕಣ್ಬಿಡುವಷ್ಟರಲ್ಲಿ ನದಿಯ ನೀರಿನ ಮಟ್ಟ ಅಪಾಯದ ಮಟ್ಟ ಮೀರಿ ಹೆಚ್ಚಾಯಿತು. ನೀರಿನ ರಭಸಕ್ಕೆ ಹೆದರಿದ ವಿದ್ಯಾರ್ಥಿಗಳಿಗೆ ದಡ ಸೇರಲು ಸಾಧ್ಯವಾಗದೆ, ನಡು ನದಿಯ ಬಂಡೆಯ ಮೇಲೆಯೇ ಸಿಲುಕಿಕೊಂಡರು. ನೀರಿನ ಆರ್ಭಟ ಹೆಚ್ಚುತ್ತಿದ್ದಂತೆ ಇಬ್ಬರು ಆತಂಕದಿಂದ ಕಿರುಚಾಡಲು ಆರಂಭಿಸಿದ್ದಾರೆ.

ನಡುನೀರನಲ್ಲಿ ಸಿಲುಕಿ ಆಕ್ರಂದನ ಮಾಡುತ್ತಿದ್ದ ಯುವಕರನ್ನು ಕಂಡು ತಕ್ಷಣವೇ ಸ್ಥಳೀಯರು ಹಾಗೂ ಇತರ ಪ್ರವಾಸಿಗರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಕಾರ್ಯಪ್ರವೃತ್ತರಾದ ಅಗ್ನಿಶಾಮಕ ಸಿಬ್ಬಂದಿ, ಉಕ್ಕಿ ಹರಿಯುತ್ತಿದ್ದ ನೀರಿನ ರಭಸವನ್ನೂ ಲೆಕ್ಕಿಸದೆ ಹಗ್ಗ ಹಾಗೂ ಲೈಫ್ ಜಾಕೆಟ್‌ಗಳ ಸಹಾಯದಿಂದ ಸಾಹಸಮಯ ಕಾರ್ಯಾಚರಣೆ ನಡೆಸಿದ್ದಾರೆ. ಕೊನೆಗೂ ಇಬ್ಬರು ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ದಡಕ್ಕೆ ಕರೆತರುವಲ್ಲಿ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ಇದನ್ನೂ ಓದಿ: `ಮಹಾ’ ಮಳೆಗೆ ಬಲಿಯಾದವರ ಸಂಖ್ಯೆ 13ಕ್ಕೆ ಏರಿಕೆ – ಹಲವೆಡೆ ಭೂಕುಸಿತ, ಮುಂಬೈ-ಪುಣೆ ರೈಲ್ವೆ ಸಂಚಾರ ಸ್ಥಗಿತ
