– ಅಪರಾಧಿಗಳಿಗೆ ಕಠಿಣಾತಿಕಠಿಣ ಶಿಕ್ಷೆ ವಿಧಿಸಬೇಕು
– ಬೆಳ್ಳಿಯ ವಸ್ತುಗಳನ್ನು ಟಂಕಸಾಲೆಯಲ್ಲಿ ಕರಗಿಸಲಾಗಿದೆ
ಅಯೋಧ್ಯೆ: ರಾಮ ಮಂದಿರ (Ram Mandir) ಲೋಕಾರ್ಪಣೆಗೊಂಡ ಬಳಿಕ ಈ ವರ್ಷದ ಮಾರ್ಚ್ 31 ರವರೆಗೆ ಒಟ್ಟು 582 ಕೋಟಿ ರೂ. ಕಾಣಿಕೆ ಹಣ ಬಂದಿದ್ದು ಅದರಲ್ಲಿ 391 ಕೋಟಿ ರೂಪಾಯಿಗಳನ್ನು ಮಂದಿರದ ನಿರ್ವಹಣಾ ವೆಚ್ಚಕ್ಕಾಗಿ ಬಳಸಲಾಗಿದೆ. ಉಳಿದ ಮೊತ್ತವು ಬ್ಯಾಂಕ್ ಖಾತೆಗಳಲ್ಲಿದೆ ಎಂದು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರದ ಟ್ರಸ್ಟ್(Shri Ram Janmabhoomi Teerth Kshetra Trust ) ತಿಳಿಸಿದೆ.
ರಾಮ ಮಂದಿರ ಕಾಣಿಕೆ ಹಣ ದುರುಪಯೋಗದ ಹಿನ್ನೆಲೆಯಲ್ಲಿ ಇಂದು ಸಭೆ ನಡೆಸಿದ ಬಳಿಕ ಟ್ರಸ್ಟ್ ಮಾಧ್ಯಮ ಹೇಳಿಕೆಯನ್ನು ಬಿಡುಗಡೆ ಮಾಡಿದೆ. ಈ ಹೇಳಿಕೆಯಲ್ಲಿ ಕಾಣಿಕೆ ಹಣದ ಎಣಿಕೆ ಪ್ರಕ್ರಿಯೆಯಲ್ಲಿ ನಡೆದಿರುವ ಅಕ್ರಮಗಳಿಂದಾಗಿ ಟ್ರಸ್ಟಿಗಳು ತೀವ್ರವಾಗಿ ನೊಂದಿದ್ದಾರೆ ಮತ್ತು ಚಿಂತಿತರಾಗಿದ್ದಾರೆ ಹಾಗೂ ಈ ದುರದೃಷ್ಟಕರ ಘಟನೆಯ ಬಗ್ಗೆ ತೀವ್ರ ವಿಷಾದ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದೆ.
ಹೇಳಿಕೆಯಲ್ಲಿ ಏನಿದೆ?
ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರದ ಟ್ರಸ್ಟಿಗಳ ಸಭೆಯು ಇಂದು ಅಯೋಧ್ಯೆಯಲ್ಲಿ ನಡೆಯಿತು. ಈ ಸಭೆಯಲ್ಲಿ ಮುಖ್ಯವಾಗಿ ದಾನಪಾತ್ರೆಗಳಿಂದ ಬಂದ ಹಣದ ಎಣಿಕೆ ಪ್ರಕ್ರಿಯೆಯಲ್ಲಿ ನಡೆದಿರುವ ಅಕ್ರಮಗಳು, ಅದರ ತನಿಖೆ ಮತ್ತು ಕೈಗೊಳ್ಳಲಾದ ಕ್ರಮಗಳು, ಪ್ರಧಾನ ಕಾರ್ಯದರ್ಶಿ ಹಾಗೂ ಒಬ್ಬರು ಟ್ರಸ್ಟಿಯವರ ರಾಜೀನಾಮೆ, ಮಾಧ್ಯಮಗಳಲ್ಲಿ ನಡೆಯುತ್ತಿರುವ ಚರ್ಚೆಗಳು ಮತ್ತು ಮುಂದಿನ ಮಧ್ಯಂತರ ವ್ಯವಸ್ಥೆಗಳು ಮುಂತಾದ ವಿಷಯಗಳ ಕುರಿತು ಚರ್ಚಿಸಲಾಯಿತು.
2020 ರಲ್ಲಿ ಟ್ರಸ್ಟ್ ಸ್ಥಾಪನೆಯಾದ ನಂತರ, 6 ವರ್ಷಗಳಿಗಿಂತಲೂ ಕಡಿಮೆ ಅವಧಿಯಲ್ಲಿ ಪ್ರಭು ಶ್ರೀ ರಾಮನ ಭವ್ಯ ಮತ್ತು ಅದ್ವಿತೀಯ ಮಂದಿರದ ನಿರ್ಮಾಣದ ಐತಿಹಾಸಿಕ ಕಾರ್ಯವು ಪೂರ್ಣಗೊಂಡಿದೆ. ಇದೇ ಅವಧಿಯಲ್ಲಿ ಮುಖ್ಯ ಮಂದಿರ ಹಾಗೂ ಪ್ರಾಕಾರದಲ್ಲಿ ನಿರ್ಮಿಸಲಾದ ಎಲ್ಲಾ ಮಂದಿರಗಳ ಪ್ರಾಣಪ್ರತಿಷ್ಠೆ, ಧ್ವಜಾರೋಹಣ ಮತ್ತು ಶ್ರೀರಾಮ ಯಂತ್ರದ ಸ್ಥಾಪನೆಯಂತಹ ಮಹತ್ತರ ಕಾರ್ಯಗಳು ಪ್ರಭುವಿನ ಕೃಪೆಯಿಂದ ಅತ್ಯಂತ ಆನಂದದಿಂದ ಮತ್ತು ಶಾಸ್ತ್ರೋಕ್ತ ವಿಧಿವಿಧಾನಗಳೊಂದಿಗೆ ಸಂಪೂರ್ಣಗೊಂಡಿವೆ. ಈ ಸಾಂಸ್ಕೃತಿಕ ಪರಂಪರೆಯ ನಿರ್ಮಾಣದಲ್ಲಿ ಮತ್ತು ಅನೇಕ ಧಾರ್ಮಿಕ ಉತ್ಸವಗಳಲ್ಲಿ ಸಹಕರಿಸಿದ ಇಡೀ ಹಿಂದೂ ಸಮಾಜ, ಕಾರ್ಮಿಕರು, ಎಂಜಿನಿಯರ್‌ಗಳು, ಶಿಲ್ಪಿಗಳು, ವಾಸ್ತುಶಿಲ್ಪಿಗಳು ಮತ್ತು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಟ್ರಸ್ಟ್ ತನ್ನ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತದೆ.
‘ನಿಧಿ ಸಮರ್ಪಣಾ ಅಭಿಯಾನ’ ಮತ್ತು ಕಾರ್ಪಸ್ ದಾನದ ಮೂಲಕ ಒಟ್ಟು 3,264 ಕೋಟಿ ರೂ. ಹಣ ಸಂಗ್ರಹವಾಗಿದ್ದು, ಅದರಲ್ಲಿ 2,370 ಕೋಟಿ ರೂಪಾಯಿಗಳನ್ನು ಮಂದಿರ ನಿರ್ಮಾಣ ಮತ್ತು ಬಂಡವಾಳ ವೆಚ್ಚಕ್ಕಾಗಿ ಬಳಸಲಾಗಿದೆ. ಆರಂಭದಿಂದ ಮಾರ್ಚ್ 31, 2026 ರವರೆಗೆ ಒಟ್ಟು 582 ಕೋಟಿ ರೂ. ಕಾಣಿಕೆ ಹಣ ಬಂದಿದ್ದು, ಅದರಲ್ಲಿ 391 ಕೋಟಿ ರೂ.ಗಳನ್ನು ಮಂದಿರದ ನಿರ್ವಹಣಾ ವೆಚ್ಚಕ್ಕಾಗಿ ಬಳಸಲಾಗಿದೆ. ಉಳಿದ ಮೊತ್ತವು ಬ್ಯಾಂಕ್ ಖಾತೆಗಳಲ್ಲಿದೆ. ಈ ಎಲ್ಲಾ ಹಣಕಾಸಿನ ಮಾಹಿತಿಯನ್ನು ಟ್ರಸ್ಟ್ ಕಾಲಕಾಲಕ್ಕೆ ಮಾಧ್ಯಮಗಳ ಮುಂದೆ ಪ್ರಸ್ತುತಪಡಿಸುತ್ತಾ ಬಂದಿದೆ.
ಕಾಣಿಕೆ ಹಣದ ಎಣಿಕೆ ಪ್ರಕ್ರಿಯೆಯಲ್ಲಿ ನಡೆದಿರುವ ಅಕ್ರಮಗಳಿಂದಾಗಿ ಟ್ರಸ್ಟಿಗಳು ತೀವ್ರವಾಗಿ ನೊಂದಿದ್ದಾರೆ ಮತ್ತು ಚಿಂತಿತರಾಗಿದ್ದಾರೆ ಹಾಗೂ ಈ ದುರದೃಷ್ಟಕರ ಘಟನೆಯ ಬಗ್ಗೆ ತೀವ್ರ ವಿಷಾದ ವ್ಯಕ್ತಪಡಿಸುತ್ತಾರೆ.
ಈ ಪ್ರಕರಣದ ಮಾಹಿತಿ ಸಿಗುತ್ತಿದ್ದಂತೆಯೇ, ಟ್ರಸ್ಟ್‌ನ ಅಧಿಕಾರಿಗಳು ಅಕ್ರಮಗಳ ಬಗ್ಗೆ ಪ್ರಾಥಮಿಕ ವಿವರಗಳನ್ನು ಕಲೆಹಾಕಿ, ತಕ್ಷಣವೇ ಉತ್ತರ ಪ್ರದೇಶ ಸರ್ಕಾರಕ್ಕೆ ನಿಷ್ಪಕ್ಷಪಾತ ತನಿಖೆ ನಡೆಸುವಂತೆ ವಿನಂತಿಸಿದರು. ಟ್ರಸ್ಟ್‌ನ ವಿನಂತಿಯ ಮೇರೆಗೆ, ಇಡೀ ಪ್ರಕರಣದ ನಿಷ್ಪಕ್ಷಪಾತ, ಸಮಗ್ರ ಮತ್ತು ಸತ್ಯಾಸತ್ಯತೆ ಆಧಾರಿತ ತನಿಖೆಗಾಗಿ ಸರ್ಕಾರವು ತಕ್ಷಣವೇ ಉನ್ನತ ಮಟ್ಟದ ತನಿಖಾ ತಂಡವನ್ನು (SIT) ರಚಿಸಿತು. ಇದರಲ್ಲಿ ಯಾರ ಪಾತ್ರವೇನಿದೆ? ಯಾರು ಭಾಗಿಯಾಗಿದ್ದಾರೆ ಮತ್ತು ಯಾರ ವಿರುದ್ಧ ಮೊಕದ್ದಮೆ ದಾಖಲಿಸಬೇಕು? ಈ ಎಲ್ಲಾ ಪ್ರಶ್ನೆಗಳಿಗೆ ತನಿಖೆಯ ಆಧಾರದ ಮೇಲಷ್ಟೇ ಉತ್ತರಿಸಲು ಸಾಧ್ಯವಿತ್ತು. ಇದೇ ಉದ್ದೇಶದಿಂದ ಇಂತಹ ತನಿಖಾ ತಂಡ ರಚನೆಗೆ ವಿನಂತಿಸಲಾಗಿತ್ತು. ಇದನ್ನೂ ಓದಿ: ರಾಮ ಮಂದಿರ ದೇಣಿಗೆ ಹಗರಣ| ಚಂಪತ್ ರಾಯ್ ರಾಜೀನಾಮೆ ಅಂಗೀಕಾರ
ಎಸ್‌ಐಟಿಯ ಪ್ರಾಥಮಿಕ ವರದಿ ಬಂದ ನಂತರ, ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಮತ್ತು ಮತ್ತೊಬ್ಬ ಟ್ರಸ್ಟಿ ಅನಿಲ್ ಮಿಶ್ರಾ ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ಪತ್ರ ನೀಡಿದ್ದು, ಅದನ್ನು ಇಂದು ನಡೆದ ಟ್ರಸ್ಟ್ ಸಭೆಯಲ್ಲಿ ಪರಿಶೀಲನೆಗೆ ಮಂಡಿಸಲಾಯಿತು. ನಿಷ್ಪಕ್ಷಪಾತ ತನಿಖೆಗಾಗಿ ನೈತಿಕ ಆಧಾರದ ಮೇಲೆ ಅವರಿಬ್ಬರು ನೀಡಿದ ರಾಜೀನಾಮೆಯನ್ನು ಟ್ರಸ್ಟ್ ಅಂಗೀಕರಿಸಿದೆ. ಇದರೊಂದಿಗೆ, ಟ್ರಸ್ಟ್ ಗೋಪಾಲ್ ನಗರ್ಕೋಟೆ ಅವರ ಹೆಸರನ್ನು ವಿಶಿಷ್ಟ ಆಹ್ವಾನಿತ ಸದಸ್ಯರ ಪಟ್ಟಿಯಿಂದ ತೆಗೆದುಹಾಕಲು ನಿರ್ಧರಿಸಿದೆ. ತನಿಖೆಯ ಕಾನೂನಾತ್ಮಕ ಪ್ರಕ್ರಿಯೆ ಪೂರ್ಣಗೊಂಡ ನಂತರವೇ ಸತ್ಯ ಹೊರಬರಲಿದ್ದು, ಅಲ್ಲಿಯವರೆಗೆ ಯಾವುದೇ ವ್ಯಕ್ತಿಯ ಮೇಲೆ ದೋಷಾರೋಪಣೆ ಮಾಡುವುದು ಸರಿಯಲ್ಲ ಎಂದು ಟ್ರಸ್ಟ್ ನಂಬುತ್ತದೆ.
ಮ್ಯಾನೇಜ್‌ಮೆಂಟ್ ಹಾಗೂ ಕಾರ್ಯಾಚರಣೆಯ ಪದ್ಧತಿ ಮತ್ತು ವ್ಯವಸ್ಥೆಯ ದೌರ್ಬಲ್ಯಗಳನ್ನು ದೂರಾಗಿಸಿ, ಅವುಗಳನ್ನು ಬಲಪಡಿಸುವ ಅಗತ್ಯವನ್ನು ಟ್ರಸ್ಟ್ ಹೇಳಿದೆ. ಅಲ್ಲದೆ ಎಸ್‌ಐಟಿಯಿಂದ ನಿರೀಕ್ಷಿಸಲಾದ ಶಿಫಾರಸುಗಳ ಹೊರತಾಗಿ, ತಜ್ಞರಿಂದಲೂ ಸ್ವತಂತ್ರ ಸಲಹೆಗಳನ್ನು ಪಡೆಯುವಂತೆ ಸೂಚಿಸಿದೆ. ಇದರಿಂದ ಮಂದಿರ ನಿರ್ವಹಣೆಗೆ ಒಂದು ಆದರ್ಶ, ದಕ್ಷ ಮತ್ತು ಪಾರದರ್ಶಕ ವ್ಯವಸ್ಥೆಯನ್ನು ಸ್ಥಾಪಿಸಬಹುದಾಗಿದ್ದು, ಅದು ಈ ಕ್ಷೇತ್ರದಲ್ಲಿ ಎಲ್ಲರಿಗೂ ಮಾದರಿಯಾಗಲಿದೆ.
ಕೆಲವು ಜನರು ಈ ದುರದೃಷ್ಟಕರ ಪ್ರಕರಣವನ್ನು ಶ್ರೀರಾಮಲಲ್ಲಾ ಮಂದಿರ, ಶ್ರೀರಾಮ ಜನ್ಮಭೂಮಿ, ಹಿಂದೂ ಸಮಾಜ ಮತ್ತು ವಿಶಾಲವಾದ ಹಿಂದೂ ನಂಬಿಕೆಯನ್ನು ದುರ್ಬಲಗೊಳಿಸುವ ಅವಕಾಶವಾಗಿ ಬಳಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಸಾರ್ವಜನಿಕರ ಮುಂದೆ ಆಧಾರರಹಿತ ಆರೋಪಗಳನ್ನು ಮಂಡಿಸಲಾಗುತ್ತಿದ್ದು, ಇವುಗಳ ಉದ್ದೇಶ ಸತ್ಯವನ್ನು ಹೊರತರುವುದಲ್ಲ, ಬದಲಿಗೆ ನಿರಂತರವಾಗಿ ಗೊಂದಲವನ್ನು ಹರಡುವುದಾಗಿದೆ. ಇದನ್ನೂ ಓದಿ: ಈ ಪಾಪಕೃತ್ಯ ಮಾಡಿದ ಪ್ರತಿಯೊಬ್ಬರನ್ನೂ ಮೋದಿ, ಯೋಗಿ ಶಿಕ್ಷಿಸುತ್ತಾರೆ: ಮೌನಮುರಿದ ರಾಮ ಮಂದಿರ ಟ್ರಸ್ಟ್ ಮುಖ್ಯಸ್ಥ
ನಗದು ಹಣದ ಹೊರತಾಗಿ ಅನೇಕ ಭಕ್ತರು ಪ್ರಭು ಶ್ರೀ ರಾಮಲಲ್ಲಾಗೆ ವಸ್ತುಗಳ ರೂಪದಲ್ಲಿ ಕಾಣಿಕೆಗಳನ್ನು ಅರ್ಪಿಸಿದ್ದಾರೆ. ಇಂತಹ ಒಟ್ಟು 2,926 ಕಾಣಿಕೆಗಳು ಬಂದಿದ್ದು, ಇವೆಲ್ಲವನ್ನೂ ದಿನಾಂಕ ಮತ್ತು ಸಂಪೂರ್ಣ ವಿವರಗಳೊಂದಿಗೆ ರಿಜಿಸ್ಟರ್‌ನಲ್ಲಿ ದಾಖಲಿಸಲಾಗಿದೆ. ಇವುಗಳ ಭೌತಿಕ ಪರಿಶೀಲನೆಯನ್ನು (Physical Verification) ಪ್ರತಿ ವರ್ಷ ಸ್ವತಂತ್ರ ಚಾರ್ಟರ್ಡ್ ಅಕೌಂಟೆಂಟ್ ಸಂಸ್ಥೆಯು ಆಂತರಿಕ ಆಡಿಟರ್ ಆಗಿ ನಡೆಸುತ್ತದೆ. ಕೌಂಟರ್‌ನಲ್ಲಿ ಇಂತಹ ಕಾಣಿಕೆಗಳನ್ನು ನೀಡಿದ ಎಲ್ಲಾ ಭಕ್ತರಿಗೂ ರಸೀದಿ ನೀಡಲಾಗಿದೆ ಮತ್ತು ಕೌಂಟರ್‌ನ ಹೊರತಾಗಿ ದಾನ ನೀಡಿದ ಭಕ್ತರ ವಿವರ ಲಭ್ಯವಿದ್ದಲ್ಲಿ ಅವರಿಗೂ ರಸೀದಿಗಳನ್ನು ತಲುಪಿಸಲಾಗಿದೆ.
ತಾವು ನೀಡಿದ ಕಾಣಿಕೆಯ ಬಳಕೆ ಅಥವಾ ಪರಿಶೀಲನೆಯನ್ನು ತಿಳಿಯಲು ಇಚ್ಛಿಸುವ ಎಲ್ಲಾ ಭಕ್ತರಲ್ಲಿ ವಿನಂತಿಯೇನೆಂದರೆ, ಅವರು ಯಾವಾಗ ಬೇಕಾದರೂ ಟ್ರಸ್ಟ್‌ನ ಅಧಿಕಾರಿಯೊಂದಿಗೆ ದಿನಾಂಕ ಮತ್ತು ಸಮಯವನ್ನು ನಿಗದಿಪಡಿಸಿಕೊಂಡು ಅಯೋಧ್ಯೆಗೆ ಆಗಮಿಸಿ, ಪ್ರಭು ಶ್ರೀ ರಾಮಲಲ್ಲಾ ದರ್ಶನದ ಜೊತೆಗೆ ತಮ್ಮ ಕಾಣಿಕೆಯ ಪರಿಶೀಲನೆಯನ್ನು ಮಾಡಿಕೊಳ್ಳಬಹುದು. ಬೆಳ್ಳಿಯ ವಸ್ತುಗಳನ್ನು ಭಾರತ ಸರ್ಕಾರದ ಟಂಕಸಾಲೆಯಲ್ಲಿ (Mint) ಕರಗಿಸಿ ಬಿಲ್ಲೆಗಳನ್ನಾಗಿ (Bars) ಮಾಡಲಾಗಿದ್ದು, ಅವುಗಳ ಮೂಲ ಸ್ವರೂಪದ ವಿವರಗಳು ಫೋಟೋ ಮತ್ತು ತೂಕದ ಸಮೇತ ಲಭ್ಯವಿವೆ. ಕರಗಿಸಿದ ನಂತರ ಬೆಳ್ಳಿಯ ಶುದ್ಧತೆ ಮತ್ತು ಒಟ್ಟು ತೂಕದ ಕುರಿತಾದ ಟಂಕಸಾಲೆಯ ಪ್ರಮಾಣಪತ್ರಗಳೂ ಸಹ ಲಭ್ಯವಿವೆ.
