– 11 ಲಕ್ಷಕ್ಕೂ ಅಧಿಕ ದಂಡ ವಸೂಲಿ
– ವಿಜಯನಗರದಲ್ಲಿ ಆರ್‌ಟಿಒ ಕಾರ್ಯಾಚರಣೆ
ವಿಜಯನಗರ: ಮಕ್ಕಳ ಸುರಕ್ಷತೆಯ ಹಿತದೃಷ್ಟಿಯಿಂದ ವಿಜಯನಗರ (Vijyangara) ಜಿಲ್ಲೆಯ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು (RTO) ಖಾಸಗಿ ಶಾಲಾ-ಕಾಲೇಜು (School- College) ವಾಹನಗಳ ವಿರುದ್ಧ ಸಮರ ಸಾರಿದ್ದಾರೆ.
ಜಿಲ್ಲೆಯಾದ್ಯಂತ ವಿಶೇಷ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು, ಸೂಕ್ತ ದಾಖಲಾತಿಗಳಿಲ್ಲದೆ ನಿಯಮ ಉಲ್ಲಂಘಿಸಿ ಸಂಚರಿಸುತ್ತಿದ್ದ ಬರೋಬ್ಬರಿ 390 ಖಾಸಗಿ ಶಾಲಾ ವಾಹನಗಳನ್ನು ಜಪ್ತಿ ಮಾಡಿದ್ದಾರೆ.
ಫಿಟ್‌ನೆಸ್ ಪ್ರಮಾಣಪತ್ರ (FC) ಹಾಗೂ ಇನ್ಶೂರೆನ್ಸ್ (ವಿಮೆ) ಇಲ್ಲದೆ ರಸ್ತೆಗಿಳಿದಿದ್ದ ವಾಹನಗಳ ವಿರುದ್ಧ ಆರ್‌ಟಿಒ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಜರುಗಿಸಿದ್ದಾರೆ. ಕಳೆದ ಫೆಬ್ರವರಿಯಿಂದ ಇಲ್ಲಿಯವರೆಗೆ ಒಟ್ಟು 103 ಪ್ರಕರಣಗಳನ್ನು ದಾಖಲಿಸಿಕೊಂಡಿರುವ ಸಾರಿಗೆ ಇಲಾಖೆ, ಉಲ್ಲಂಘನೆ ಎಸಗಿದ ವಾಹನ ಮಾಲೀಕರಿಂದ 11 ಲಕ್ಷ ರೂ.ಅಧಿಕ ದಂಡ ವಸೂಲಿ ಮಾಡಿದೆ. ಅಲ್ಲದೆ, ಜಪ್ತಿ ಮಾಡಲಾದ ಖಾಸಗಿ ಶಾಲಾ ವಾಹನಗಳಿಗೂ ದಂಡ ವಿಧಿಸಲಾಗಿದೆ.
ಶಾಲೆಗೆ ತೆರಳುವ ಮಕ್ಕಳ ಸುರಕ್ಷತೆಗೆ ಮೊದಲ ಆದ್ಯತೆ ನೀಡಲಾಗುತ್ತಿದ್ದು, ಖಾಸಗಿ ಶಾಲಾ ಆಡಳಿತ ಮಂಡಳಿ, ವಾಹನ ಮಾಲೀಕರು ಹಾಗೂ ಚಾಲಕರು ತಕ್ಷಣವೇ ತಮ್ಮ ವಾಹನಗಳ ಎಲ್ಲಾ ದಾಖಲೆಗಳನ್ನು ಸರಿಪಡಿಸಿಕೊಂಡು ಬಳಿಕವಷ್ಟೇ ರಸ್ತೆಗೆ ವಾಹನಗಳನ್ನು ಇಳಿಸಬೇಕು ಎಂದು ಆರ್‌ಟಿಒ ಅಧಿಕಾರಿಗಳು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ.
