ಬೆಂಗಳೂರು: ಉತ್ತರಖಂಡದ ಡೆಹ್ರಾಡೂನ್‌ನಲ್ಲಿ ಇತ್ತೀಚೆಗೆ ನಡೆದ 2026ರ ಸಾಲಿನ ರಾಷ್ಟ್ರೀಯ ಐಸ್ ಹಾಕಿ ಚಾಂಪಿಯನ್‌ಶಿಪ್‌ನಲ್ಲಿ(Ice Hockey Championship) ಕರ್ನಾಟಕದ ಕಿರಿಯ ಆಟಗಾರರು ಅಭೂತಪೂರ್ವ ಸಾಧನೆ ಮಾಡಿದ್ದಾರೆ. ಟೂರ್ನಿಯ ಅಂಡರ್-12 ಬಾಲಕರ ಹಾಗೂ ಬಾಲಕಿಯರ ಎರಡೂ ವಿಭಾಗಗಳಲ್ಲಿ ರಾಜ್ಯದ ತಂಡಗಳು ಅತ್ಯುತ್ತಮ ಪ್ರದರ್ಶನ ನೀಡಿಬೆಳ್ಳಿ ಪದಕ ಮುಡಿಗೇರಿಸಿಕೊಳ್ಳುವ ಮೂಲಕ ಕರ್ನಾಟಕಕ್ಕೆ (Karnataka) ಕೀರ್ತಿ ತಂದಿದ್ದಾರೆ.
ರಾಷ್ಟ್ರೀಯ ಮಟ್ಟದ ಈ ಐತಿಹಾಸಿಕ ಸಾಧನೆಗೆ ಆಟಗಾರರ ಕಠಿಣ ಪರಿಶ್ರಮ, ಶಿಸ್ತು ಮತ್ತು ಸಮರ್ಪಣಾ ಮನೋಭಾವವೇ ಕಾರಣವಾಗಿದೆ. ಈ ಮಹತ್ವದ ಟೂರ್ನಿಗೆ ಸಜ್ಜಾಗಲು ತಂಡವು ಕಳೆದ ಏಪ್ರಿಲ್ ತಿಂಗಳಲ್ಲಿ ಡೆಹ್ರಾಡೂನ್‌ನಲ್ಲಿ 10 ದಿನಗಳ ಕಾಲ ನಡೆದ ವಿಶೇಷ ತರಬೇತಿ ಶಿಬಿರದಲ್ಲಿ ಭಾಗವಹಿಸಿತ್ತು. ಈ ಕಠಿಣ ತರಬೇತಿಯೇ ರಾಷ್ಟ್ರೀಯ ವೇದಿಕೆಯಲ್ಲಿ ಪ್ರಬಲ ಪೈಪೋಟಿ ನೀಡಲು ತಂಡಕ್ಕೆ ಶ್ರೀರಕ್ಷೆಯಾಯಿತು.
ಪ್ರಸ್ತುತ ಕರ್ನಾಟಕ ರಾಜ್ಯ ಐಸ್ ಹಾಕಿ ಅಸೋಸಿಯೇಷನ್ ಅನ್ನು ರಾಜ್ಯಾಧ್ಯಕ್ಷರಾದ ಮೋನಿಕಾ ಸಾವಂತ್ ಹಾಗೂ ಪ್ರಧಾನ ಕಾರ್ಯದರ್ಶಿಮಂಜುನಾಥ್ ಮಂಡೋಕಾರ್ ಮುನ್ನಡೆಸುತ್ತಿದ್ದು, ತಂಡಕ್ಕೆ ಮುಖ್ಯ ಕೋಚ್ ಆಗಿ ಅರುಣ್ ತರಬೇತಿ ನೀಡುತ್ತಿದ್ದಾರೆ. ಇದನ್ನೂ ಓದಿ: ವಿಶ್ವಕಪ್‌ನಲ್ಲಿ `ಟ್ರಂಪ್ ಕಾರ್ಡ್ʼ ಬಳಸಿ ರೆಡ್ ಕಾರ್ಡ್‌ಗೆ ತಡೆ – ಫಿಫಾದ ನಡೆಗೆ ಭಾರೀ ಆಕ್ರೋಶ

ಬೆಳ್ಳಿ ಗೆದ್ದ ಅಂಡರ್-12 ಬಾಲಕರ ತಂಡ:
ರೇಯಾಂಶ್, ಹಿತಾರ್ಥ್, ಕಿಯಾನ್, ಮೊಹಿಲ್, ರುತ್ವಿಕ್, ಜೇಡನ್, ಆಯುಷ್ಮಾನ್, ಹೃತಿಕ್, ನಿಷ್ಕ್, ದಿವ್ಯಾಂತ್ ಪ್ರಜ್ಞಾನ್, ಶೇಖ್ ಅಫ್ನಾನ್, ತನ್ವಿಕ್, ಪ್ರತೀಕ್, ರುಶಾಲ್, ಸಮ್ರಾಟ್, ಜಿನಯ್, ಯಶಸ್, ಸಾಯಿದೀಪ್ ಮತ್ತು ಭುವಿಕ್.

ಬೆಳ್ಳಿ ಗೆದ್ದ ಅಂಡರ್-12 ಬಾಲಕಿಯರ ತಂಡ:
ರಿತಿಕಾ, ಕೀರ್ತನಾ ಗೌಡ, ಅಂಜಾನಾ, ಕೋವಿದಾ ಕಲಕುಂಟ, ದೀಕ್ಷಿಕಾ ಎಸ್.ಎನ್., ಧನ್ವಿ ಮುತ್ತುಸ್ವಾಮಿ, ನಕ್ಷತ್ರ ಸಿ., ಯಶಿಕಾ, ಎಸ್. ನೇಹಾ, ತಾನ್ಶಿ ಮಿಶ್ರಾ, ಅವಂತಿಕಾ, ದಿತ್ಯಾ, ಈಕ್ಷಿತಾ, ಇಶಾನ್ವಿ ರೈ, ಸಾಸ್ತಿಕಾ, ಪುನರ್ವಿ ಎಸ್. ಕುಮಾರ್, ನಮ್ರತಾ, ಮಿಂಚನಾ ಗೌಡ ಮತ್ತು ರಿಯಾ ಆರ್.

ಅಲ್ಪ ಅಂತರದಲ್ಲಿ ತಪ್ಪಿದ ಪದಕ
ಇದೇ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕದ ಅಂಡರ್-15 (U-15) ಬಾಲಕರ ಹಾಗೂ ಬಾಲಕಿಯರ ತಂಡಗಳು ಕೂಡ ಅದ್ಭುತ ಪ್ರದರ್ಶನ ನೀಡಿ ಗಮನ ಸೆಳೆದಿವೆ. ದೇಶದ ದೈತ್ಯ ತಂಡಗಳ ವಿರುದ್ಧ ಅಪ್ರತಿಮ ಹೋರಾಟ ನಡೆಸಿದ ಎರಡೂ ತಂಡಗಳು ತೀವ್ರ ಪೈಪೋಟಿಯ ನಡುವೆ 4ನೇ ಸ್ಥಾನ ಪಡೆದುಕೊಂಡಿವೆ. ಅತ್ಯಲ್ಪ ಅಂತರದಲ್ಲಿ ಪದಕ ತಪ್ಪಿದರೂ, ಇವರ ಆತ್ಮವಿಶ್ವಾಸದ ಆಟವು ರಾಜ್ಯದಲ್ಲಿ ಐಸ್ ಹಾಕಿ ಕ್ರೀಡೆಗೆ ಉಜ್ವಲ ಭವಿಷ್ಯವಿದೆ ಎಂಬುದನ್ನು ಸಾಬೀತುಪಡಿಸಿದೆ.
ರಾಷ್ಟ್ರೀಯ ಮಟ್ಟದಲ್ಲಿ ಮಿಂಚಿ ರಾಜ್ಯಕ್ಕೆ ಹೆಮ್ಮೆ ತಂದಿರುವ ಎಲ್ಲಾ ಪುಟ್ಟ ಕ್ರೀಡಾಪಟುಗಳು ಹಾಗೂ ತರಬೇತುದಾರರಿಗೆ ಕ್ರೀಡಾಭಿಮಾನಿಗಳಿಂದ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ.
