ಇಂಪಾಲ್: ಮಣಿಪುರದ (Manipur) ಉಖ್ರುಲ್ ಜಿಲ್ಲೆಯಲ್ಲಿ ದಂಗೆಕೋರರು ನಡೆಸಿದ ದಾಳಿಯಲ್ಲಿ ಅಸ್ಸಾಂ ರೈಫಲ್ಸ್‌ನ (Assam Rifles Soldiers) ಇಬ್ಬರು ಸೈನಿಕರು ಹುತಾತ್ಮರಾಗಿದ್ದಾರೆ.
ಈ ದಾಳಿಯಲ್ಲಿ ವಾರಂಟ್ ಅಧಿಕಾರಿ ಬಲ್ವಂತ್ ಸಿಂಗ್ ಮತ್ತು ರೈಫಲ್‌ಮ್ಯಾನ್ ಸಿಎಂ ಸಿಂಗ್ ಹುತಾತ್ಮರಾಗಿದ್ದಾರೆ. ಬೆಂಗಾವಲು ಪಡೆ ಮೇಲೆ ಹೊಂಚು ಹಾಕಿ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. ಉಖ್ರುಲ್ ನಗರದಿಂದ 8 ಕಿಮೀ ದೂರದಲ್ಲಿರುವ ರಾಷ್ಟ್ರೀಯ ಹೆದ್ದಾರಿ 202 ರಲ್ಲಿ ಈ ದಾಳಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬೆಂಗಾವಲು ಪಡೆ ಮೇಲೆ ನಡೆದ ದಾಳಿಯ ನಂತರ, ಭದ್ರತಾ ಪಡೆಗಳು ಇಡೀ ಪ್ರದೇಶವನ್ನು ಸುತ್ತುವರೆದು ಶೋಧ ನಡೆಸುತ್ತಿವೆ. ಭದ್ರತಾ ಪಡೆಗಳು ಹಾಗೂ ದಾಳಿಕೋರರ ನಡುವೆ ಗಂಟೆಗಟ್ಟಲೇ ಭಾರೀ ಗುಂಡಿನ ಚಕಮಕಿ ನಡೆದಿದೆ ಎಂದು ಸ್ಥಳೀಯರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಮಣಿಪುರದ ಗೃಹ ಸಚಿವ ಗೋವಿಂದಾಸ್ ಕೊಂಥೌಜಮ್ ಬೆಂಗಾವಲು ಪಡೆ ಮೇಲಿನ ದಾಳಿಯನ್ನು ಖಂಡಿಸಿದ್ದಾರೆ. ಇಂತಹ ದಾಳಿಗಳು ನಾವೆಲ್ಲರೂ ಎತ್ತಿಹಿಡಿಯಲು ಬಯಸುವ ಶಾಂತಿ ಮತ್ತು ಸಾಮರಸ್ಯವನ್ನು ಹಾಳುಮಾಡುತ್ತವೆ. ಈ ದಾಳಿಯ ಹೊಣೆಗಾರರನ್ನು ನ್ಯಾಯದ ಕಟಕಟೆಗೆ ತರಲಾಗುವುದು ಎಂದಿದ್ದಾರೆ. ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆಗಳನ್ನು ಮುಂದುವರೆಸಿವೆ.

