– ರಾಜಕೀಯ ಒತ್ತಡಕ್ಕೆ ಮಣಿಯದಿರಲು ಸೂಚನೆ
ಬೆಂಗಳೂರು: ರಾಜ್ಯದಲ್ಲಿ ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (SIR) ಗಂಭೀರ ವಿವಾದ ಮತ್ತು ರಾಜಕೀಯ ಆರೋಪಗಳಿಗೆ ಕಾರಣವಾಗಿದ್ದು, ಕೇಂದ್ರ ಚುನಾವಣಾ ಆಯೋಗದ(Election Commission of India) ಹಿರಿಯ ಅಧಿಕಾರಿಗಳ ತಂಡ ಈ ಗೊಂದಲ ನಿವಾರಿಸಲು ಬೆಂಗಳೂರಿಗೆ ದೌಡಾಯಿಸಿದೆ.
ಉಪ ಚುನಾವಣಾ ಆಯುಕ್ತ ಸಂಜಯ್ ಕುಮಾರ್(Sanjay Kumar) ನೇತೃತ್ವದ ತಂಡ ಗ್ರೇಟರ್ ಬೆಂಗಳೂರು ಪ್ರಾಧಿಕಾರ(GBA) ಕೇಂದ್ರ ಕಚೇರಿಯಲ್ಲಿ ರಾಜ್ಯ ಚುನಾವಣಾ ಅಧಿಕಾರಿಗಳು ಮತ್ತು ಜಿಬಿಎ ಆಡಳಿತಾಧಿಕಾರಿಗಳೊಂದಿಗೆ ಇಂದು ಮಹತ್ವದ ಹೈವೋಲ್ಟೇಜ್ ಸಭೆ ನಡೆಸಿದೆ. ವಿರೋಧ ಪಕ್ಷಗಳು ಮಾಡಿರುವ ಆರೋಪಗಳು ಮತ್ತು ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಆಳವಾಗಿ ಚರ್ಚಿಸಿದ ಆಯೋಗ, ಅಧಿಕಾರಿಗಳಿಗೆ ಕಟ್ಟುನಿಟ್ಟಾದ ಸೂಚನೆಗಳನ್ನು ನೀಡಿದೆ.
ಆಯೋಗದ ಸೂಚನೆ ಏನು?
ಎಸ್‌ಐಆರ್ ಪ್ರಕ್ರಿಯೆಯ ಪುನರ್ ಪರಿಶೀಲನೆ ಇಲ್ಲ ಎಂದು ಆಯೋಗ ಸ್ಪಷ್ಟಪಡಿಸಿದ್ದು, ಈ ಕುರಿತಾದ ವಿರೋಧ ಪಕ್ಷಗಳ ಆರೋಪಗಳಿಗೆ ತೆರೆ ಎಳೆದಿದೆ. ಪ್ರತಿ ಮನೆಗೆ ಭೇಟಿ ನೀಡಿ ಮತದಾರರ ವಿವರ ಪರಿಷ್ಕರಿಸುವಂತೆ ಬಿಎಲ್‌ಓಗಳಿಗೆ ಕಡ್ಡಾಯ ಸೂಚನೆ ನೀಡಲಾಗಿದೆ. ಯಾವುದೇ ಧಾರ್ಮಿಕ ಕೇಂದ್ರ ಅಥವಾ ಸಮೂಹ ಸಭೆಗಳಲ್ಲಿ ಫಾರ್ಮ್ ವಿತರಿಸುವಂತಿಲ್ಲ. ಇದನ್ನೂ ಓದಿ: SIR ಪ್ರಕ್ರಿಯೆಯಲ್ಲಿ ನಾವ್ಯಾರು ಕೈ ಹಾಕಿಲ್ಲ, ಆದ್ರೆ ಆಯೋಗ ಮಾಡ್ತಿರೋ ಅಭಿಯಾನದಲ್ಲಿ ಭಿನ್ನಾಭಿಪ್ರಾಯ ಇದೆ: ಡಿಕೆಶಿ
ಬಿಎಲ್‌ಓಗಳು ಮನೆ ಭೇಟಿ ನೀಡಿದ್ದಾರಾ ಎಂದು ರಾಜ್ಯ ಚುನಾವಣಾಧಿಕಾರಿಗಳು ಖುದ್ದು ಸ್ಥಳ ಪರಿಶೀಲನೆ ನಡೆಸಿ ಖಚಿತಪಡಿಸಿಕೊಳ್ಳಬೇಕು.ಕಮಿಷನರ್, ಎಆರ್‌ಒ ಮತ್ತು ಬಿಎಲ್‌ಓಗಳಿಗೆ ನಿಗದಿಪಡಿಸಿದ ಮತದಾರರ ನೋಂದಣಿ ಮತ್ತು ಪರಿಷ್ಕರಣೆಯ ಟಾರ್ಗೆಟ್ ಮುಟ್ಟುವಂತೆ ಒತ್ತಡ ಹೇರಲಾಗಿದೆ. ಈ ಬಗ್ಗೆ ಜಿಲ್ಲಾ ಮತ್ತು ರಾಜ್ಯ ಚುನಾವಣಾಧಿಕಾರಿಗಳು ಪರಿಶೀಲಿಸಿ ವರದಿ ಸಲ್ಲಿಸಬೇಕು.
ಅಧಿಕಾರಿಗಳು ಯಾವುದೇ ರಾಜಕೀಯ ಒತ್ತಡಕ್ಕೆ ಒಳಗಾಗದೇ, ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸಬೇಕು. ಮತಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯಲ್ಲಿನ ಲೋಪಗಳು ಮತ್ತು ಈ ಕುರಿತು ಬಂದಿರುವ ದೂರುಗಳ ಬಗ್ಗೆ ಪ್ರತ್ಯೇಕವಾಗಿ ಚರ್ಚೆ ನಡೆಸಲಾಗುವುದು. ಇದನ್ನೂ ಓದಿ: ರಾಜ್ಯದಲ್ಲಿ SIR ಲೋಪ – ಬಿಜೆಪಿ, ಜೆಡಿಎಸ್‌ನ ಮೈತ್ರಿ ನಾಯಕರಿಂದ ಮುಖ್ಯ ಚುನಾವಣಾಧಿಕಾರಿಗೆ ದೂರು
ರಾಜ್ಯದಲ್ಲಿ ಪಾರದರ್ಶಕ ಮತ್ತು ನಿಖರ ಮತಪಟ್ಟಿ ತಯಾರಿಕೆಗಾಗಿ ಅಧಿಕಾರಿಗಳು ಶ್ರಮಿಸಬೇಕು ಮತ್ತು ಯಾವುದೇ ಅಕ್ರಮ ಅಥವಾ ಗೊಂದಲಕ್ಕೆ ಅವಕಾಶ ನೀಡದಂತೆ ಕಟ್ಟುನಿಟ್ಟಾಗಿ ನಡೆದುಕೊಳ್ಳಬೇಕು ಎಂದು ಕೇಂದ್ರ ಚುನಾವಣಾ ಆಯೋಗ ನಿರ್ದೇಶಿಸಿದೆ.
