ಅಯೋಧ್ಯೆ: ರಾಮ ಮಂದಿರ(Ram Mandir) ದೇಣಿಗೆ ಹಗರಣದ ವಿವಾದ ಬೆನ್ನಲ್ಲೇ ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಇಂದು ನಡೆಸಿದ ಸಭೆಗೆ ವಿವಾದಿತ ನಾಯಕರಿಗೆ ಪ್ರವೇಶ ನಿರಾಕರಿಸಲಾಗಿದೆ.
ಟ್ರಸ್ಟ್‌ನ ಮಾಜಿ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್(Champat Rai) ಹಾಗೂ ಪ್ರಮುಖ ಸದಸ್ಯ ಗೋಪಾಲ್ ರಾವ್ (Gopal Rao) ಅವರಿಗೆ ಈ ಮಹತ್ವದ ಸಭೆಯಲ್ಲಿ ಭಾಗವಹಿಸಲು ಅವಕಾಶ ನೀಡಿಲ್ಲ. ಇವರಿಬ್ಬರೂ ಸಭೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದರೂ ಸಹ ಇವರನ್ನು ಸಭೆಯೊಳಗೆ ಭಾಗಿಯಾಗಲು ಅನುಮತಿ ನೀಡಲಿಲ್ಲ.
ಸದ್ಯ ಚಂಪತ್ ರಾಯ್ ಮತ್ತು ಗೋಪಾಲ್ ರಾವ್ ಅವರನ್ನು ಪ್ರತ್ಯೇಕ ಕೊಠಡಿಯೊಂದರಲ್ಲಿ ಕೂರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಹಗರಣದ ಹಿನ್ನೆಲೆಯಲ್ಲಿ ಇವರನ್ನು ಸಭೆಯಿಂದಲೇ ದೂರ ಇಡಲಾಗಿದೆ.
ಇನ್ನು ಇದೇ ಹಗರಣದ ವಿವಾದಕ್ಕೆ ಸಿಲುಕಿ ರಾಜೀನಾಮೆ ನೀಡಿರುವ ಮತ್ತೊಬ್ಬ ಟ್ರಸ್ಟಿ ಅನಿಲ್ ಮಿಶ್ರಾ (Anil Mishra) ಅವರು ಇಂದಿನ ಸಭೆಗೆ ಸಂಪೂರ್ಣವಾಗಿ ಗೈರಾಗಿದ್ದಾರೆ.
ಮೊಬೈಲ್ ನಿಷೇಧ
ಟ್ರಸ್ಟ್ ಸಭೆ ನಡೆಸಿದ ಜಾಗಕ್ಕೆ ಮೊಬೈಲ್ ಫೋನ್‌ಗಳನ್ನು ಕೊಂಡೊಯ್ಯುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿತ್ತು. ಟ್ರಸ್ಟ್‌ನ ಯಾವುದೇ ಸದಸ್ಯರು ಸಭೆ ನಡೆಯುವ ಸ್ಥಳಕ್ಕೆ ಮೊಬೈಲ್ ಒಯ್ಯುವಂತಿಲ್ಲ ಎಂದು ಸೂಚಿಸಲಾಗಿದ್ದು, ಅತ್ಯಂತ ರಹಸ್ಯವಾಗಿ ಈ ಚರ್ಚೆಗಳನ್ನು ನಡೆಸಲಾಗಿದೆ.
ಭದ್ರತಾ ಸಿಬ್ಬಂದಿಗಳು ಹಾಗೂ ಸಭೆಯಲ್ಲಿ ಭಾಗವಹಿಸಿರುವ ಸಂತರ ವೈಯಕ್ತಿಕ ಶಿಷ್ಯಂದಿರಿಗೂ ಕೂಡ ಸಭಾಂಗಣದೊಳಗೆ ಪ್ರವೇಶ ನೀಡದೆ ಹೊರಗೇ ನಿಲ್ಲಿಸಲಾಗಿದೆ. ಇದನ್ನೂ ಓದಿ: ರಾಮ ಮಂದಿರ ದೇಣಿಗೆ ಹಗರಣ| ಚಂಪತ್ ರಾಯ್ ರಾಜೀನಾಮೆ ಅಂಗೀಕಾರ; ಬಜರಂಗ್ ಬಾಗ್ರ ಹೊಸ ಪ್ರಧಾನ ಕಾರ್ಯದರ್ಶಿ
ಪೇಜಾವರ ಶ್ರೀ ಭಾಗಿ
ಉಡುಪಿಯ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರು ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಮುಖ ವಿಶ್ವಸ್ಥರಾಗಿ (ಟ್ರಸ್ಟಿ) ಕಾರ್ಯನಿರ್ವಹಿಸುತ್ತಿದ್ದು ಇಂದಿನ ಸಭೆಯಲ್ಲಿ ಭಾಗಿಯಾಗಿದ್ದಾರೆ.
ದೇಣಿಗೆ ಕಳ್ಳತನದ ಹಗರಣದ ನಂತರ ಟ್ರಸ್ಟ್‌ನ ಆಡಳಿತ ಮಂಡಳಿಯನ್ನು ಪುನಾರಚಿಸುವ ಹಾಗೂ ವ್ಯವಸ್ಥೆಯನ್ನು ಸಂಪೂರ್ಣವಾಗಿ ಪಾರದರ್ಶಕಗೊಳಿಸುವ ನಿಟ್ಟಿನಲ್ಲಿ ಇಂದಿನ ಸಭೆಯಲ್ಲಿ ಅತ್ಯಂತ ಕಟ್ಟುನಿಟ್ಟಿನ ಆಡಳಿತಾತ್ಮಕ ನಿರ್ಧಾರಗಳನ್ನು ಕೈಗೊಳ್ಳುವ ಸಾಧ್ಯತೆಯಿದೆ.
