ಬೆಂಗಳೂರು: ಹಲವು ತಿಂಗಳಿಂದ ನಡೆಯುತ್ತಿದ್ದ ನಾಯಕತ್ವ ಬದಲಾವಣೆ ಚರ್ಚೆಗೆ ಕೊನೆಗೂ ಅಂತಿಮ ರೂಪ ಸಿಕ್ಕಿದೆ. ಇಷ್ಟು ದಿನಗಳಿಂದ ನಡೀತಿದ್ದ ಬಣ ಬಡಿದಾಟ, ವಾಕ್‌ಪ್ರಹಾರ. ಶೀತಲ ಸಮರಕ್ಕೆ ಸಿದ್ದರಾಮಯ್ಯ (Siddaramaiah) ರಾಜೀನಾಮೆ ನೀಡುವ ಮೂಲಕ ಬ್ರೇಕ್ ಬಿದ್ದಿದೆ. ರಾಜಕಾರಣದ ಎಲ್ಲ ಅಂತೆ ಕಂತೆಗಳಿಗೆ ಇತಿಶ್ರೀ ಹಾಡಲಾಗಿದೆ.
ಡಿಸಿಎಂ ಆಗಿದ್ದ ಡಿಕೆ ಶಿವಕುಮಾರ್ (DK Shivakumar) ನಿರೀಕ್ಷೆಯಂತೆ ರಾಜ್ಯದ ಮುಖ್ಯಮಂತ್ರಿ ಆಗಲಿದ್ದಾರೆ. ಯಾವುದೇ ಗೊಂದಲ, ಗೋಜಲು, ಗುದ್ದಾಟ, ತಿಕ್ಕಾಟಕ್ಕೆ ಸಿದ್ದರಾಮಯ್ಯ ಆಸ್ಪದ ಕೊಡದೇ ಗೌರವಪೂರ್ವಕವಾಗಿ ಅಧಿಕಾರ ತ್ಯಜಿಸಿದ್ದಾರೆ. ಯಾರೂ ನಿರೀಕ್ಷಿಸದಂಥ ಬೆಳವಣಿಗೆಗೆ ಸಿದ್ದರಾಮಯ್ಯ ಸಾಕ್ಷಿಯಾಗಿದ್ದಾರೆ. ಎಲ್ಲೂ ಬೇಸರ, ಅಸಮಾಧಾನ ವ್ಯಕ್ತಪಡಿಸದೇ ಮುಖ್ಯಮಂತ್ರಿ (Chief Minister) ಹುದ್ದೆಯನ್ನ ಪದತ್ಯಾಗ ಮಾಡಿದ್ದಾರೆ. ಈ ಮೂಲಕ ನಾಯಕತ್ವ ಬದಲಾವಣೆ ಪ್ರಹಸನಕ್ಕೆ ತೆರೆ ಬಿದ್ದಿದೆ. ಇದನ್ನೂ ಓದಿ: ಸೋಮವಾರ ಗೋಧೂಳಿ ಮುಹೂರ್ತದಲ್ಲಿ ಡಿಕೆ ಶಿವಕುಮಾರ್ ಪಟ್ಟಾಭಿಷೇಕ?

ಹೈಕಮಾಂಡ್ ಹೇಳಿದಂತೆ, ವಚನ ಭ್ರಷ್ಟರಾಗದೇ ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಿ ಮಾತು ಉಳಿಸಿಕೊಂಡಿದ್ದಾರೆ. ಇತ್ತ ಡಿಸಿಎಂ ಡಿಕೆ ಶಿವಕುಮಾರ್ ನಿವಾಸ ಇದೀಗ ಶಕ್ತಕೇಂದ್ರವಾಗಿ ಮಾರ್ಪಟ್ಟಿದೆ. ಡಿಕೆ ಶಿವಕುಮಾರ್ ಹೊಸ ಸಿಎಂ ಅನ್ನೋದು ಕನ್ಫರ್ಮ್ ಆಗ್ತಿದ್ದಂತೆ ಸದಾಶಿವ ನಗರದ ನಿವಾಸ ತಮ್ಮ ಬಣದ ಶಾಸಕರು, ಬೆಂಬಲಿಗರಿಂದ ತುಂಬಿ ತುಳುಕುತ್ತಿದೆ.
ನಿನ್ನೆಯೆಲ್ಲಾ ಆಪ್ತರು ಮೌನ.. ಇಂದು ಮಾತು
ಪವರ್ ಸೆಂಟರ್ ಆಗಿ ಬದಲಾಗಿರುವ ಡಿಕೆ ಶಿವಕುಮಾರ್ ನಿವಾಸಕ್ಕೆ ಆಪ್ತರ ದಂಡೇ ಹರಿದು ಬರುತ್ತಿದೆ. ಡಿಕೆಶಿ ಸಿಎಂ ಆಗ್ತಿರೋದಕ್ಕೆ ಅಭಿನಂದನೆ ಸಲ್ಲಿಸುತ್ತಿದ್ದಾರೆ. ಆಪ್ತರಾದ ಎನ್‌ಎ ಹ್ಯಾರಿಸ್, ಬೇಳೂರು ಗೋಪಾಲಕೃಷ್ಣ, ಆನೇಕಲ್ ಶಿವಣ್ಣ, ಕದಲೂರು ಉದಯ್ ಸೇರಿದಂತೆ ಹಲವರು ಬಂದು ವಿಷ್ ಮಾಡಿದ್ದಾರೆ. ಇದನ್ನೂ ಓದಿ: ಯತೀಂದ್ರ ಸಂಪುಟ ಸೇರ್ಪಡೆಗೆ ಕೊನೆಗೂ ಒಪ್ಪಿದ ಸಿದ್ದರಾಮಯ್ಯ
ಅಂದ್ಹಾಗೆ ನಾಯಕತ್ವ ಬದಲಾವಣೆ ವಿಚಾರವಾಗಿ ಹೈಕಮಾಂಡ್ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಅವರನ್ನ ದೆಹಲಿಗೆ ಕರೆಸಿಕೊಂಡಾಗ ಡಿಕೆ ಆಪ್ತರಲ್ಲಿ ಮೌನ ಆವರಿಸಿತ್ತು. ಸಿದ್ದರಾಮಯ್ಯ ರಾಜೀನಾಮೆ ಕೊಡ್ತಾರಾ, ಡಿಕೆಶಿಗೆ ಅಧಿಕಾರ ಹಸ್ತಾಂತರ ಮಾಡ್ತಾರಾ? ಹೈಕಮಾಂಡ್ ಮಾತಿಗೆ ಸಮ್ಮತಿ ಸೂಚಿಸ್ತಾರಾ? ಕೊಟ್ಟ ಮಾತಿನಂತೆ ನಡೆದುಕೊಳ್ತಾರಾ? ನಮ್ಮ ನಾಯಕ ಸಿಎಂ ಆಗ್ತಾರಾ? ಹೀಗೆ ಹತ್ತು ಹಲವು ಪ್ರಶ್ನೆಗಳು, ಆತಂಕ ಆಪ್ತರಲ್ಲಿ ಮೂಡಿತ್ತು. ದೆಹಲಿಗೆ ಸಿದ್ದರಾಮಯ್ಯ ತಮ್ಮ ಆಪ್ತರ ಸಚಿವರ ದಂಡು ಜೊತೆಗೆ ತೆರಳಿದ್ದರು. ಆದ್ರೆ ಡಿಕೆ ಬಣದ ಆಪ್ತರು ಮಾತ್ರ ದೆಹಲಿಗೆ ತೆರಳದೆ ಇಲ್ಲೇ ಉಳಿದುಕೊಂಡಿದ್ದರು.
ದೆಹಲಿಯಿಂದ ವಾಪಸ್ ಆದ ಬಳಿಕವೂ ಡಿಕೆ ಆಪ್ತರಲ್ಲಿ ಮೌನ ಆವರಿಸಿತ್ತು. ಯಾವಾಗ ಸಿದ್ದರಾಮಯ್ಯ ಬ್ರೇಕ್‌ಫಾಸ್ಟ್ ಕರೆದು ರಾಜೀನಾಮೆ ಘೊಷಿಸಿದ್ರೋ ನಿರಾಳರಾದ್ರು. ಡಿಕೆ ನಿವಾಸಕ್ಕೆ ಅಭಿನಂದಿಸಿದ್ರು. ನಿನ್ನೆಯೆಲ್ಲಾ ಮೌನವಾಗಿದ್ದವರು. ಇಂದು ಮಾತನಾಡಲು ಶುರು ಮಾಡಿದ್ರು.
ಒಟ್ನಲ್ಲಿ ಸಿದ್ದರಾಮಯ್ಯ ಗೊಂದಲ ಗೋಜಲು ಇಲ್ಲದೇ ಭಾವನಾತ್ಮಕವಾಗಿ ಪದತ್ಯಾಗ ಮಾಡಿದ್ದಾರೆ. ಪವರ್ ಸೆಂಟರ್ ಇದೀಗ ಅದಲು ಬದಲಾಗಿದೆ. ಇದನ್ನೂ ಓದಿ: ಅಧಿಕಾರದ ಹಿಂದೆ ಹೋದವನಲ್ಲ, ಆಸ್ತಿ-ಹಣದ ಹಿಂದೆ ಬಿದ್ದಿಲ್ಲ: ಸಿದ್ದರಾಮಯ್ಯ ನೇರ ನುಡಿ
