– ಕಡೇ ತನಕ ಕೋಮುವಾದಿಗಳ ವಿರುದ್ಧ ಹೋರಾಡ್ತೀನಿ
ಬೆಂಗಳೂರು: ನಾನು ಯಾವತ್ತಿಗೂ ಸಿದ್ಧಾಂತ, ಮೌಲ್ಯಗಳಲ್ಲಿ ರಾಜೀ ಮಾಡಿಕೊಂಡಿಲ್ಲ. ಅಧಿಕಾರದ ಹಿಂದೆ ಹೋದವನಲ್ಲ, ಆಸ್ತಿ ಹಣದ ಹಿಂದೆ ಬಿದ್ದಿಲ್ಲ. ಆಸ್ತಿ – ಹಣ ಮಾಡಬೇಕು ಅಂತಲೂ ಅನ್ನಿಸಲಿಲ್ಲ. ಜನಶಕ್ತಿ ಇದ್ರೆ ರಾಜಕಾರಣ ಮಾಡಬಹುದು ಎಂದು ನಿರ್ಗಮಿತ ಸಿಎಂ ಸಿದ್ದರಾಮಯ್ಯ (Siddaramaiah) ತಿಳಿಸಿದರು.
ರಾಜ್ಯಪಾಲರ (Governor) ಅನುಪಸ್ಥಿತಿಯಲ್ಲಿ ಕಾರ್ಯದರ್ಶಿಗೆ ಪತ್ರ ಹಸ್ತಾಂತರಿಸಿದ ಬಳಿಕ ಸುದ್ದಿಗೋಷ್ಠಿ ನಡೆಸಿ ಸಿದ್ದರಾಮಯ್ಯ ಅವರು ಮಾತನಾಡಿದರು. ಇದನ್ನೂ ಓದಿ: ನನಗೆ ರಾಷ್ಟ್ರ ರಾಜಕಾರಣದಲ್ಲಿ ಆಸಕ್ತಿ ಇಲ್ಲ, ರಾಜ್ಯ ರಾಜಕೀಯದಲ್ಲೇ ಮುಂದುವರಿಯುತ್ತೇನೆ: ಸಿದ್ದರಾಮಯ್ಯ ಸ್ಪಷ್ಟನೆ
8 ವರ್ಷ ಸಿಎಂ, ಎರಡು ಸಲ ವಿರೋಧ ಪಕ್ಷದ ನಾಯಕನಾಗಿ ಕೆಲಸ ಮಾಡಲು ಕಾಂಗ್ರೆಸ್ ಅವಕಾಶ ಕೊಟ್ಟಿದೆ. ಸೋನಿಯಾ ಗಾಂಧಿ ಅವರು ನನ್ನನ್ನ ಕಾಂಗ್ರೆಸ್‌ಗೆ ಸೇರ್ಪಡೆ ಮಾಡಿಕೊಂಡರು. ಆಗ ನನ್ನೊಟ್ಟಿಗೆ 8 ಜನ ಶಾಸಕರೂ ಸೇರಿಕೊಂಡಿದ್ರು. ಅವರಲ್ಲಿ ಈಗ ಕೆಲವರು ಇಲ್ಲ. ಅವರಿಗೆಲ್ಲ ಚಿರಋಣಿ. ನಾನು ಕಡೇ ತನಕ ಕೋಮುವಾದಿಗಳ ವಿರುದ್ಧ ಹೋರಾಡ್ತೀನಿ. ಕೊನೇ ಉಸಿರಿರುವ ತನಕ ಸಂವಿಧಾನಕ್ಕೆ ಯಾರೇ ಧಕ್ಕೆ ತಂದರೂ ಅದರ ವಿರುದ್ಧ ಹೋರಾಡ್ತೀನಿ ಎಂದು ನುಡಿದರು.
ಎರಡು ಬಾರಿ ಸಿಎಂ ಎರಡು ಬಾರಿ ವಿಪಕ್ಷ ನಾಯಕನ ಸ್ಥಾನದ ಅವಕಾಶ ಸಿಕ್ಕಿತು. ಹಳ್ಳಿಯಿಂದ ಬಂದ ನಾನು ಶಾಸಕನಾಗುತ್ತೇನೆ, ಸಚಿವನಾಗುತ್ತೇನೆ, ವಿಪಕ್ಷ ನಾಯಕನಾಗುತ್ತೇನೆ ಅಥವಾ ಸಿಎಂ ಆಗುತ್ತೇನೆಂದು ಕನಸು ಕಂಡಿರಲಿಲ್ಲ. ನಾನು ಕಾಂಗ್ರೆಸ್ ಸೇರಿದ್ದು 2006 ರಲ್ಲಿ ಅಲ್ಲಿಂದ ಎಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಮುಖಂಡರು ಶಾಸಕರು ಸಂಸದರು ನನಗೆ ಪ್ರೀತಿ ತೋರಿಸಿದ್ದಾರೆ. ಅವಕಾಶ ಕಲ್ಪಿಸಿಕೊಟ್ಟಿದ್ದಾರೆ ಅವರೆಲ್ಲರಿಗೂ ಧನ್ಯವಾದಗಳು. ನಾನು 2 ಬಾರಿ ಸಿಎಂ ಆಗಿದ್ದಾಗ ನನ್ನ ಜೊತೆ ಕೆಲಸ ಮಾಡಿದ ನನ್ನ ಸಹೋದ್ಯೋಗಿಗಳು ಎಲ್ಲಾ ರೀತಿಯ ಬೆಂಬಲ ಸಹಕಾರ ಪ್ರೀತಿ ವ್ಯಕ್ತಪಡಿಸಿದ್ದಾರೆ, ಅದಕ್ಕೆ ನಾನು ಯಾವಾಗಲೂ ಚಿರಋಣಿ ಆಗಿರುತ್ತೇನೆ ಎಂದು ಹಳೆಯ ನೆನಪುಗಳನ್ನ ಮೆಲುಕುಹಾಕಿದರು.
ನನ್ನ ರಾಜಕೀಯ ಪ್ರವೇಶ ಆಕಸ್ಮಿಕ, ರಾಜಕೀಯ ಕುಟುಂಬದ ಹಿನ್ನೆಲೆ ನನಗಿರಲಿಲ್ಲ. ರಾಜಕಾರಣಕ್ಕೆ ಬಂದ ಮೊದಲಿಂದ ಬುದ್ಧ, ಬಸವ, ಅಂಬೇಡ್ಕರ್, ಗಾಂಧೀಜಿ ತತ್ವ ಆದರ್ಶದಲ್ಲಿ ನಂಬಿಕೆ ಇಟ್ಟವನು. ಸಂವಿಧಾನದಲ್ಲಿ ಅಪಾರ ನಂಬಿಕೆ ಇಟ್ಟವನು. ಒಂದು ಕುಟುಂಬವಾಗಿ ಎಲ್ಲರೂ ಒಟ್ಟಾಗಿ ಬಾಳಬೇಕು ಎಂಬ ನಂಬಿಕೆ ಇಟ್ಟುಕೊಂಡವನು. ಇಡೀ ಸಮಾಜ ಕುವೆಂಪು ಅವರು ಹೇಳಿದಂತೆ ಸರ್ವಜನಾಂಗದ ಶಾಂತಿಯ ತೋಟ ಆಗಬೇಕು ಎಂದು ಕರೆ ನೀಡಿದರು. ಇದನ್ನೂ ಓದಿ: ಸಂವಿಧಾನವೇ ನನ್ನ ಧರ್ಮ, ಮತದಾರರೇ ನನ್ನ ಅಭಿಮಾನಿ ದೇವರು: ಸಿದ್ದರಾಮಯ್ಯ
ಎಲ್ಲಾರಿಗೂ ಸಮಾನತೆಯ ಅವಕಾಶ ಸಿಗಬೇಕು. ಅಸಮಾನತೆ ತೊಲಗಿ ಸಮ ಸಮಾಜ ನಿರ್ಮಾಣ ಆಗಬೇಕು. ಅದಕ್ಕೆ ನಮ್ಮ ಸರ್ಕಾರ ಸಮಾನತೆ ತರುವ ಪ್ರಯತ್ನ ಮಾಡಿದೆ. ಪ್ರಣಾಳಿಕೆಯಲ್ಲಿ ಹೇಳಿದಂತೆ ಜಾರಿಯ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇವೆ. ಇದು ನನಗೆ ಮತ್ತು ನಮ್ಮ ಪಕ್ಣಕ್ಕೆ ಸಂತೃಪ್ತಿ ತಂದುಕೊಟ್ಟಿದೆ. ಪ್ರಧಾನಿ ಆದಿಯಾಗಿ ಎಲ್ಲರೂ ನಮ್ಮ ಮೇಲೆ ಆರೋಪ ಮಾಡಿದರು. ತಲಾ ಆದಾಯದಲ್ಲಿ ದೇಶದಲ್ಲೇ ನಾವು ನಂ.1 ಇದ್ದೇವೆ. ಜಿಎಸ್ ಟಿ ಸಂಗ್ರಹದಲ್ಲಿ ನಾವು ನಂ.2 ಇದ್ದೇವೆ. ಆದ್ರೆ ಸಿದ್ದರಾಮಯ್ಯ ರಿಂದ ಸಾಲ ಹೆಚ್ಚಳ ಆಗಿದೆ ಎಂಬುದು ನನ್ನ ಮೇಲೆ ಮಾಡುವ ಆರೋಪವಷ್ಟೇ ಎಂದು ವಿಪಕ್ಷಗಳಿಗೆ ತಿರುಗೇಟು ನೀಡಿದರು.
ಮುಂದುವರಿದು… ಹೈಕಮಾಂಡ್ ರಾಜ್ಯಸಭೆಗೆ ಹೋಗಿ ಅಂತ ನನಗೆ ಹೇಳಿದ್ರು. ನಾನು ಬಹಳ ವಿನಮ್ರವಾಗಿ ಆಗಲ್ಲ ಅಂತ ಹೇಳಿದೆ. ರಾಷ್ಟ್ರ ರಾಜಕಾರಣದಲ್ಲಿ ನನಗೆ ಆಸಕ್ತಿ ಇಲ್ಲ. ರಾಜ್ಯ ರಾಜಕಾರಣದಲ್ಲೇ ಇರುತ್ತೇನೆ ಅಂತ ಹೇಳಿದ್ದೇನೆ. ರಾಜ್ಯದ ಜನ ನನ್ನನ್ನು 5 ವರ್ಷಗಳ ಕಾಲ ಶಾಸಕನಾಗಿ ಆಯ್ಕೆ ಮಾಡಿದ್ದಾರೆ. ಇನ್ನೂ 2 ವರ್ಷ ಇದೆ. ಅಲ್ಲಿವರೆಗೆ ಕರ್ನಾಟಕ ಹಾಗೂ ನನ್ನ ಕ್ಷೇತ್ರದ ಜನತೆ ಪರವಾಗಿ ಕೆಲಸ ಮಾಡುತ್ತೇನೆ ಎಂದು ಹೇಳಿದರು.
ಇದೇ ವೇಳೆ ಮುಂದಿನ ಮುಖ್ಯಮಂತ್ರಿ ಯಾರು ಎಂಬ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ, ಆ ಬಗ್ಗೆ ಶಾಸಕಾಂಗ ಪಕ್ಷದ ಸಭೆ ಹಾಗೂ ಹೈಕಮಾಂಡ್ ತೀರ್ಮಾನ ಮಾಡುತ್ತೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯ ಕೊನೆಯಲ್ಲಿ ಎಲ್ಲರೂ ಕೈ ಹಿಡಿದು ಮೇಲಕ್ಕೆ ಎತ್ತಿ ಒಗ್ಗಟ್ಟು ಪ್ರದರ್ಶನ ಮಾಡಿದರು. ಇದನ್ನೂ ಓದಿ: ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ – ರಾಜ್ಯಪಾಲರ ಅನುಪಸ್ಥಿತಿಯಲ್ಲಿ ಕಾರ್ಯದರ್ಶಿಗೆ ಪತ್ರ ಹಸ್ತಾಂತರ
