– ಅಭಿಮಾನಿಯ ಸತ್ಕಾರದಿಂದ ಮೈಸೂರಿಗೆ ಮನಸೋತ ಗಾಯಕಿ
ಮೈಸೂರು: ಸಾವಿರಾರು ಹಾಡುಗಳ ಮೂಲಕ ಕನ್ನಡಿಗರ ಮನಸ್ಸಿನಲ್ಲಿ ಶಾಶ್ವತ ಸ್ಥಾನ ಪಡೆದ ಗಾನಕೋಗಿಲೆ ಎಸ್.ಜಾನಕಮ್ಮ (S.Janaki) ಅವರಿಗೆ ಮೈಸೂರಿನ ಜೊತೆ ಕೇವಲ ಕಾರ್ಯಕ್ರಮಗಳ ನಂಟು ಮಾತ್ರ ಇರಲಿಲ್ಲ. ಈ ನಗರವನ್ನು ತಮ್ಮ ಮನೆಯಂತೆಯೇ ಕಂಡಿದ್ದ ಜಾನಕಮ್ಮ, ಇಲ್ಲಿನ ಅಭಿಮಾನಿಯೊಬ್ಬರ ಮನೆಯಲ್ಲಿ ತಿಂಗಳುಗಟ್ಟಲೆ ಉಳಿದುಕೊಳ್ಳುತ್ತಿದ್ದರು. ಕೊನೆಗೂ ಅವರ ಬದುಕಿನ ಕೊನೆಯ ಅಧ್ಯಾಯವೂ ಮೈಸೂರಿನಲ್ಲೇ ಮುಗಿದಿದೆ.
ಮೈಸೂರಿನ (Mysuru) ಎನ್.ಆರ್. ಮೊಹಲ್ಲಾದ ನವೀನ್ ಎಂಬ ಅಭಿಮಾನಿ ಒಮ್ಮೆ ಪ್ರೀತಿಯಿಂದ ಜಾನಕಮ್ಮ ಅವರನ್ನು ತಮ್ಮ ಮನೆಗೆ ಆಹ್ವಾನಿಸಿದ್ದರು. ಆ ಒಂದು ಆಹ್ವಾನವೇ ಜೀವಮಾನದ ಸಂಬಂಧವಾಗಿ ಬೆಳೆದಿತ್ತು. ಚೆನ್ನೈನಿಂದ ಬಂದಾಗಲೆಲ್ಲಾ ಜಾನಕಮ್ಮ ಯಾವುದೇ ಹೋಟೆಲ್ ಆಯ್ಕೆ ಮಾಡುತ್ತಿರಲಿಲ್ಲ. ನೇರವಾಗಿ ನವೀನ್ ಅವರ ಮನೆಗೇ ಬರುತ್ತಿದ್ದರು. ಮನೆಯ ಸದಸ್ಯರಂತೆಯೇ ಬೆರೆತು, ವಾರಗಳಲ್ಲ, ತಿಂಗಳುಗಟ್ಟಲೆ ಅಲ್ಲೇ ನೆಂಟರಂತೆ ವಾಸ ಮಾಡುತ್ತಿದ್ದರು. ಇದನ್ನೂ ಓದಿ: ಸಂಗೀತ ಲೋಕದ ಸಾಮ್ರಾಜ್ಞೆ ಎಸ್.ಜಾನಕಿ ಹಾಡಿದ್ದು 40 ಸಾವಿರಕ್ಕೂ ಹೆಚ್ಚು ಹಾಡುಗಳು

ಕಳೆದ ಎರಡು ದಶಕಗಳಿಂದ ಈ ಪರಂಪರೆ ಮುಂದುವರಿದಿತ್ತು. ನವೀನ್ ಅವರ ಕುಟುಂಬವೂ ಜಾನಕಮ್ಮ ಅವರನ್ನು ಅತಿಥಿಯಾಗಿ ಅಲ್ಲ, ಮನೆಯ ಹಿರಿಯರಂತೆ ನೋಡಿಕೊಂಡಿತ್ತು. ಮೈಸೂರಿಗೆ ಬಂದಾಗಲೆಲ್ಲಾ ಇದೇ ಮನೆ ಅವರ ನೆಚ್ಚಿನ ತಾಣವಾಗಿತ್ತು. ಅಭಿಮಾನ ಮತ್ತು ಆತ್ಮೀಯತೆ ಸೇರಿ ಬೆಳೆದ ಈ ಸಂಬಂಧ ಎಲ್ಲರಿಗೂ ಮಾದರಿಯಾಗಿತ್ತು.
ಇತ್ತೀಚೆಗೂ ಜಾನಕಮ್ಮ ಇದೇ ಮನೆಯಲ್ಲಿದ್ದರು. ಇದೇ ವೇಳೆ ಅವರ ಕಾಲಿಗೆ ಉಂಟಾಗಿದ್ದ ಗಾಯ ಗ್ಯಾಂಗ್ರಿನ್ ಆಗಿ ತೀವ್ರ ಸ್ವರೂಪ ಪಡೆದುಕೊಂಡಿತು. ಆರೋಗ್ಯದಲ್ಲಿ ಏರುಪೇರಾದ ಕಾರಣ ಅವರನ್ನು ಮೈಸೂರಿನ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರು ಚಿಕಿತ್ಸೆ ನೀಡಿದರೂ ಆರೋಗ್ಯ ಸುಧಾರಿಸಲಿಲ್ಲ. ಅಂತಿಮವಾಗಿ ಜಾನಕಮ್ಮ ಇಹಲೋಕ ತ್ಯಜಿಸಿದರು. ಇದನ್ನೂ ಓದಿ: ಖ್ಯಾತ ಗಾಯಕಿ, ಗಾನಕೋಗಿಲೆ ಎಸ್.ಜಾನಕಿ ಇನ್ನಿಲ್ಲ
ಇದೀಗ ನವೀನ್ ಅವರು ಬೋಗಾದಿ ರಸ್ತೆಯಲ್ಲಿ ಹೊಂದಿರುವ ತೋಟದಲ್ಲೇ ಜಾನಕಮ್ಮ ಅವರ ಅಂತ್ಯಕ್ರಿಯೆ ನಡೆಯುತ್ತಿದೆ. ಒಬ್ಬ ಅಭಿಮಾನಿಯ ಮನೆಗೆ ಆರಂಭವಾದ ಆತ್ಮೀಯ ನಂಟು, ಅದೇ ಕುಟುಂಬದ ತೋಟದಲ್ಲಿ ಅಂತಿಮ ವಿದಾಯದವರೆಗೂ ಸಾಗಿರುವುದು ಭಾವನಾತ್ಮಕ ಸಂಗತಿಯಾಗಿ ಉಳಿದಿದೆ.
ಅಭಿಮಾನಿ ಮತ್ತು ಕಲಾವಿದರ ಸಂಬಂಧ ಎಷ್ಟರ ಮಟ್ಟಿಗೆ ಆತ್ಮೀಯವಾಗಿರಬಹುದು ಎಂಬುದಕ್ಕೆ ಎಸ್.ಜಾನಕಮ್ಮ ಮತ್ತು ಮೈಸೂರಿನ ನವೀನ್ ಕುಟುಂಬದ ಸಂಬಂಧವೇ ಜೀವಂತ ಉದಾಹರಣೆ. ಮೈಸೂರನ್ನು ತಮ್ಮ ಎರಡನೇ ಮನೆಯಾಗಿ ಕಂಡ ಜಾನಕಮ್ಮ, ಬದುಕಿನ ಕೊನೆಯ ದಿನಗಳನ್ನೂ ಇಲ್ಲಿಯೇ ಕಳೆದರು. ಈಗ ಅದೇ ಮೈಸೂರಿನ ಮಣ್ಣಿನಲ್ಲೇ ಅವರಿಗೆ ಅಂತಿಮ ವಿದಾಯ ಸಿಗುತ್ತಿದೆ. ಇದನ್ನೂ ಓದಿ: ಕರ್ನಾಟಕದಲ್ಲೇ ಗಾಯನಕ್ಕೆ ವಿದಾಯ ಘೋಷಿಸಿದ್ದ ಎಸ್.ಜಾನಕಿ
