ಖ್ಯಾತ ಗಾಯಕಿ ಎಸ್.ಜಾನಕಿ ಅವರ ನಿಧನಕ್ಕೆ ನಟ ಅನಂತ್‌ನಾಗ್ (Anant Nag) ಕಂಬನಿ ಮಿಡಿದಿದ್ದಾರೆ. ಸಿನಿಮಾರಂಗದಲ್ಲಿ ಗಾಯಕಿ ಜೊತೆಗಿನ ಒಡನಾಟದ ಕುರಿತು ನೆನಪುಗಳನ್ನು ʼಪಬ್ಲಿಕ್ ಟಿವಿʼ ಜೊತೆ ನಟ ಹಂಚಿಕೊಂಡಿದ್ದಾರೆ.
‘ನನಗೆ ಎಸ್.ಜಾನಕಿ (S.Janaki) ಅವರ ಭೇಟಿಯಾಗುವ ಭಾಗ್ಯ ಸಿಕ್ಕಿದ್ದು 70ರ ದಶಕದಲ್ಲಿ. ʼಬಯಲು ದಾರಿʼ ಸಿನಿಮಾ ಹಿನ್ನೆಲೆ ಅವರ ಭೇಟಿಯಾಗಿದ್ದೆ. ಬಹುತೇಕ ನನ್ನ ಎಲ್ಲಾ ಚಿತ್ರಗಳಿಗೆ ಅವರ ಹಾಡಿನ ಭಾಗ್ಯ ಸಿಕ್ಕಿದೆ’ ಎಂದು ಅನಂತ್‌ನಾಗ್ ನೆನಪಿಸಿಕೊಂಡರು. ಇದನ್ನೂ ಓದಿ: ಸಕಲ ಸರ್ಕಾರಿ ಗೌರವಗಳೊಂದಿಗೆ ನಾಳೆ ಮೈಸೂರಲ್ಲಿ ಎಸ್.ಜಾನಕಿ ಅಂತ್ಯಕ್ರಿಯೆ; ಮೊಮ್ಮಗಳಿಂದ ಅಂತ್ಯಸಂಸ್ಕಾರ
ನಾನು ನಾಲ್ಕೈದು ಸಲ ಜಾನಕಮ್ಮನವರನ್ನು ಭೇಟಿಯಾಗಿ ಕಾಲು ಮುಟ್ಟಿ ಆಶೀರ್ವಾದ ಪಡೆದುಕೊಂಡಿದ್ದೆ. ಅವರು ನಮ್ಮನ್ನು ಪ್ರೀತಿಯಿಂದ ಮಾತನಾಡಿಸುತ್ತಿದ್ದರು. ನನ್ನ ಜೀವಮಾನದಲ್ಲಿ ಜಾನಕಿ ಅವರಂತಹ ಗಾಯಕಿಯನ್ನು ಕಂಡಿಲ್ಲ ಎಂದು ನಟ ತಿಳಿಸಿದರು.
ಡಾ.ವಿಷ್ಣುವರ್ಧನ್ ಮತ್ತು ಭಾರತಿ ಅಭಿನಯದ ಹೊಂಬಿಸಿಲು ಸಿನಿಮಾದ ಎಸ್.ಜಾನಕಿ ಅವರು ಹಾಡಿದ ʼಹೂವಿಂದ ಹೂವಿಗೆ ಹಾರುವ ದುಂಬಿʼ ಹಾಡು ನನಗೆ ಅಚ್ಚುಮೆಚ್ಚು. ಅಷ್ಟು ಸುಂದರವಾಗಿ ಹಾಡನ್ನು ಹಾಡಿದ್ದಾರೆ. ಇದು ಜಗದ್ವಿಖ್ಯಾತಿ ಹಾಡು ಎಂದರೂ ತಪ್ಪಾಗಲಾರದು. ಅದು ನನಗೆ ಅಧ್ಯಾತ್ಮದ ಅನುಭವ ನೀಡುತ್ತದೆ. ಈಗಲೂ ನಾನು ಆ ಹಾಡನ್ನು ಕೇಳುತ್ತೇನೆಂದು ಸ್ಮರಿಸಿದರು. ಇದನ್ನೂ ಓದಿ: ಸಂಗೀತ ಲೋಕದ ಸಾಮ್ರಾಜ್ಞೆ ಎಸ್.ಜಾನಕಿ ಹಾಡಿದ್ದು 40 ಸಾವಿರಕ್ಕೂ ಹೆಚ್ಚು ಹಾಡುಗಳು
