ಶಿವಮೊಗ್ಗ: ಕಾರ್ಯ ವೈಖರಿಯನ್ನು ಪರಿಶೀಲಿಸಲು ಮುಂದಿನ ದಿನಗಳಲ್ಲಿ ಸರ್ಕಾರಿ ಕಚೇರಿಗಳಿಗೆ ಅನಿರೀಕ್ಷಿತ ಭೇಟಿ ನೀಡಲಾಗುವುದು ಎಂದು ಉಪ ಲೋಕಾಯುಕ್ತ ಬಿ.ಎಸ್ ಪಾಟೀಲ್ ಅವರು ತಿಳಿಸಿದ್ದಾರೆ.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಉಪ ಲೋಕಾಯುಕ್ತರು ಸಾರ್ವಜನಿಕ ದೂರು ಅರ್ಜಿಗಳ ವಿಚಾರಣೆ ಹಾಗೂ ಅಧಿಕಾರಿಗಳ ಸಭೆಯಲ್ಲಿ ಈ ಬಗ್ಗೆ ಮಾತನಾಡಿದರು. ಅಧಿಕಾರಿಗಳ ಆಧ್ಯತೆ ಮೇರೆಗೆ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಅವರ ಅಹವಾಲುಗಳನ್ನು ಕಾಲಮಿತಿಯ ಒಳಗಾಗಿ ವಿಲೇವಾರಿ ಮಾಡಬೇಕು. ಸರ್ಕಾರದ ಸೌಲಭ್ಯಗಳು ಸರಿಯಾಗಿ ಜನಸಾಮಾನ್ಯರಿಗೆ ಸಿಗದಿದ್ದರೆ ದೂರುಗಳು ಬರುವುದು ಸಹಜ. ಶಿವಮೊಗ್ಗ ಜಿಲ್ಲೆಗೆ ಸಂಬಂಧಿಸಿದಂತೆ 48 ಪ್ರಕರಣಗಳು ಲೋಕಾಯುಕ್ತದ ಮುಂದಿದ್ದು, ನಾಳೆ ಇದರ ಬಗ್ಗೆ ವಿಚಾರಣೆ ನಡೆಸಲಾಗುವುದು. ಲೋಕಾಯುಕ್ತದಲ್ಲಿ ಬಾಕಿ ಇರುವ ಎಲ್ಲಾ ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗುತ್ತಿದೆ ಎಂದು ಹೇಳಿದರು.
Advertisement
Advertisement
ಅಧಿಕಾರಿಗಳು ತಮ್ಮ ಕಾರ್ಯವ್ಯಾಪ್ತಿಯಲ್ಲಿ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಿದರೆ ಯಾವುದೇ ದೂರುಗಳಿಗೆ ಅವಕಾಶ ಇರುವುದಿಲ್ಲ. ಇಲ್ಲಿನ ಜನರು ಜಾಗೃತರಾಗಿದ್ದು, ಅಧಿಕಾರಿಗಳು ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು. ಕರ್ತವ್ಯದಲ್ಲಿ ಲೋಪ ಎಸಗಿರುವುದು ದೃಢಪಟ್ಟ ಪ್ರಕರಣಗಳಲ್ಲಿ ಕ್ರಮ ಕೈಗೊಳ್ಳಲಾಗುವುದು. ಉತ್ತಮ ಆಡಳಿತದಲ್ಲಿ ಶಿವಮೊಗ್ಗ ರಾಜ್ಯಕ್ಕೆ ಮಾದರಿಯಾಗುವಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.
Advertisement
ಜಿಲ್ಲಾಧಿಕಾರಿ ಕೆ.ಬಿ ಶಿವಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಾಂತರಾಜು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಲ್ ವೈಶಾಲಿ, ಲೋಕಾಯುಕ್ತ ರಿಜಿಸ್ಟ್ರಾರ್ ಸಂತೋಷ್ ಕುಮಾರ್, ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
Advertisement
ಅನಿರೀಕ್ಷಿತ ಭೇಟಿ:
ಉಪ ಲೋಕಾಯುಕ್ತರು ಸಭೆಯ ಬಳಿಕ ಗಾಡಿಕೊಪ್ಪದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಟ್ಯಾಂಕ್ ಮೊಹಲ್ಲಾದಲ್ಲಿರುವ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯ, ಬಾಪೂಜಿ ನಗರದಲ್ಲಿರುವ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ ಸೌಲಭ್ಯಗಳು ಹಾಗೂ ಕಾರ್ಯವೈಖರಿಯ ಪರಿಶೀಲನೆ ನಡೆಸಿದರು.
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಂಟನೇ ತರಗತಿಯ 5 ಮಕ್ಕಳು ನಿರಂತರವಾಗಿ ಗೈರು ಹಾಜರಾಗುತ್ತಿದ್ದು, ಅವರನ್ನು ಮರಳಿ ಶಾಲೆಗೆ ಕರೆ ತರುವ ಕುರಿತು ಶಿಕ್ಷಕರು ಕ್ರಮ ಕೈಗೊಳ್ಳುವಂತೆ ಉಪ ಲೋಕಾಯುಕ್ತರು ಸೂಚಿಸಿದರು. ಇದರಲ್ಲಿ ಪೋಷಕರ ಜವಾಬ್ದಾರಿಯೂ ಇದೆ. ಶಾಲೆಯ ಮೇಲ್ಘಾವಣಿ ಮಳೆಗಾಲದಲ್ಲಿ ಸೋರುವುದನ್ನು ಗಮನಿಸಲಾಗಿದ್ದು, ಸರಿಪಡಿಸಲು ಸೂಚಿಸಲಾಗಿದೆ ಎಂದು ತಿಳಿಸಿದರು.
ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯವನ್ನು ಉತ್ತಮವಾಗಿ ನಿರ್ವಹಣೆ ಮಾಡಲಾಗಿದ್ದು, ವಾರ್ಡನ್ ಸಯೀದಾ ಬಾನು ಅವರಿಗೆ ಪ್ರಶಂಸೆ ವ್ಯಕ್ತಪಡಿಸಿದರು. ಬಾಲಕಿಯರಲ್ಲಿ ಆತ್ಮವಿಶ್ವಾಸ ಮತ್ತು ಧೈರ್ಯ ಮೂಡಿಸುವಂತಹ ಚಟುವಟಿಕೆಗಳನ್ನು ವಸತಿ ನಿಲಯದಲ್ಲಿ ಹಮ್ಮಿಕೊಳ್ಳುವಂತೆ ಉಪ ಲೋಕಾಯುಕ್ತರು ಸಲಹೆ ನೀಡಿದರು.