ಕೋಲ್ಕತ್ತಾ: ಪಶ್ಚಿಮ ಬಂಗಾಳ (West Bengal) ರಾಜಕೀಯದಲ್ಲಿ ನಕಲಿ ಸಹಿ ಆರೋಪ ಭಾರಿ ಸಂಚಲನ ಸೃಷ್ಟಿಸಿದೆ. ಈ ವಿವಾದದ ನಡುವೆಯೇ ತೃಣಮೂಲ ಕಾಂಗ್ರೆಸ್ (TMC) ತನ್ನ ಇಬ್ಬರು ಶಾಸಕರಾದ ಸಂದೀಪನ್ ಸಹಾ ಮತ್ತು ಋತಬ್ರತ ಬ್ಯಾನರ್ಜಿ ಅವರನ್ನು ಪಕ್ಷದಿಂದ ಉಚ್ಚಾಟಿಸಿದೆ.
ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ ಎಂಬ ಆರೋಪದ ಮೇಲೆ ಇಬ್ಬರ ವಿರುದ್ಧ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಟಿಎಂಸಿ ತಿಳಿಸಿದೆ. ಇದನ್ನೂ ಓದಿ: ಹೊಸ ಪಕ್ಷ ಸ್ಥಾಪಿಸುತ್ತಾರಾ ಅಣ್ಣಾಮಲೈ?
ಈ ಬೆಳವಣಿಗೆಗೂ ಮುನ್ನ, ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿ ಸೋಭಾಂದೇಬ್ ಚಟ್ಟೋಪಾಧ್ಯಾಯ ಅವರನ್ನು ಬೆಂಬಲಿಸುವ ಪತ್ರದಲ್ಲಿ ತಮ್ಮ ಪರವಾಗಿ ನಕಲಿ ಸಹಿ ಹಾಕಲಾಗಿದೆ ಎಂದು ಇಬ್ಬರು ಶಾಸಕರು ದೂರು ನೀಡಿದ್ದರು.
ಈ ಬಗ್ಗೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಟಿಎಂಸಿಯ ಇಬ್ಬರು ಶಾಸಕರೇ ತಮ್ಮ ಸಹಿ ನಕಲಿ ಮಾಡಲಾಗಿದೆ ಎಂದು ದೂರು ನೀಡಿದ್ದಾರೆ ಎಂದು ಹೇಳಿದ್ದರು. ಈ ಹೇಳಿಕೆ ನೀಡಿದ ಕೆಲವೇ ಹೊತ್ತಿನಲ್ಲಿ ಟಿಎಂಸಿ ತನ್ನ ಇಬ್ಬರು ಶಾಸಕರ ಉಚ್ಚಾಟನೆ ಆದೇಶ ಹೊರಡಿಸಿದೆ.
ಟಿಎಂಸಿ ಉಪಾಧ್ಯಕ್ಷೆ ಚಂದ್ರಿಮಾ ಭಟ್ಟಾಚಾರ್ಯ ಸಹಿ ಮಾಡಿರುವ ಪತ್ರದಲ್ಲಿ, ಇಬ್ಬರು ಶಾಸಕರು ಪಕ್ಷದ ಸಭೆಗಳಿಗೆ ಪದೇ ಪದೇ ಗೈರಾಗುತ್ತಿದ್ದರು. ಅಲ್ಲದೆ ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದರು ಎಂದು ಆರೋಪಿಸಲಾಗಿದೆ.
ಪಕ್ಷದ ಹಿತಾಸಕ್ತಿಗೆ ಧಕ್ಕೆ ಉಂಟುಮಾಡುವ ಹೇಳಿಕೆಗಳನ್ನು ನೀಡಿರುವ ಕಾರಣದಿಂದ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟಿಸಲಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಇದನ್ನೂ ಓದಿ: ಅಭಿಷೇಕ್ ಬ್ಯಾನರ್ಜಿ ಹಲ್ಲೆ, ಐವರ ಬಂಧನ – ಟಿಎಂಸಿಯ ಮಾಜಿ ಶಾಸಕಿಯ ಆಪ್ತರೇ ಆರೋಪಿಗಳು!
ಈ ಕುರಿತು ಸುವೇಂದು ಅಧಿಕಾರಿ ಮಾತನಾಡಿ, ತೃಣಮೂಲ ಕಾಂಗ್ರೆಸ್ ತನ್ನದೇ ಶಾಸಕರ ಸಹಿಗಳನ್ನು ನಕಲಿ ಮಾಡಿದೆ. ಈ ಬಗ್ಗೆ ದೂರು ನೀಡಿರುವುದು ಅವರ ಪಕ್ಷದ ಶಾಸಕರೇ ಎಂದು ಟಿಎಂಸಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಇದರಲ್ಲಿ ಬಿಜೆಪಿಯ ಯಾವುದೇ ಪಾತ್ರವಿಲ್ಲ ಎಂದು ಹೇಳಿದ್ದಾರೆ.
ಲೋಕಸಭೆ ಚುನಾವಣೆಯ ನಂತರ ಟಿಎಂಸಿಯೊಳಗಿನ ಭಿನ್ನಾಭಿಪ್ರಾಯಗಳು ಹೆಚ್ಚಾಗಿವೆ ಎಂಬ ಚರ್ಚೆಗಳು ನಡೆಯುತ್ತಿರುವ ಹೊತ್ತಲ್ಲೇ ಈ ಘಟನೆ ರಾಜಕೀಯ ವಲಯದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದೆ. ಸದ್ಯ ನಕಲಿ ಸಹಿ ಆರೋಪ ಮತ್ತು ಶಾಸಕರ ಉಚ್ಚಾಟನೆ ಪ್ರಕರಣ ಪಶ್ಚಿಮ ಬಂಗಾಳ ರಾಜಕೀಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
