ಬೆಂಗಳೂರು: ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ (HD Devegowda) ಅವರ ಧರ್ಮಪತ್ನಿ ಚೆನ್ನಮ್ಮ (Chennamma) ಅವರ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು. ಕುಟುಂಬಸ್ಥರು ಆಗಮಿಸಿ ಆರೋಗ್ಯ ವಿಚಾರಿಸಿದ್ದಾರೆ.
ನಿನ್ನೆ (ಜು.17) ಚೆನ್ನಮ್ಮ ಅವರ ಆರೋಗ್ಯದಲ್ಲಿ ದಿಢೀರ್ ಏರುಪೇರು ಕಾಣಿಸಿಕೊಂಡಿದ್ದರಿಂದ ಕುಟುಂಬಸ್ಥರಲ್ಲಿ ಆತಂಕ ಮೂಡಿತ್ತು. ವಿಷಯ ತಿಳಿಯುತ್ತಿದ್ದಂತೆ ಆಸ್ಪತ್ರೆಗೆ ಧಾವಿಸಿದ ಪತಿ ಹೆಚ್.ಡಿ.ದೇವೇಗೌಡರು, ಪುತ್ರರಾದ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಹಾಗೂ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಅವರು ವೈದ್ಯರನ್ನು ಭೇಟಿ ಮಾಡಿ ಚೆನ್ನಮ್ಮ ಅವರ ಆರೋಗ್ಯ ವಿಚಾರಿಸಿದರು. ತೀವ್ರ ಉಸಿರಾಟದ ಸಮಸ್ಯೆ ಎದುರಿಸುತ್ತಿದ್ದ ಹಿನ್ನೆಲೆ, ತಾವು ನಂಬಿದ ದೇವರೇ ಇನ್ನು ಕಾಪಾಡಬೇಕು ಎಂದು ಕುಟುಂಬಸ್ಥರು ಕಳವಳ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ:ಬೇ ರೆ ಯಾವ ತೊಂದರೆಯೂ ಇಲ್ಲ, ಉಸಿರಾಟದ ಸಮಸ್ಯೆ ಬಗೆಹರಿಯಬೇಕು: ಪತ್ನಿ ಬಗ್ಗೆ ಹೆಚ್‌ಡಿಡಿ ಮಾತು
ಕಳೆದ ಮೂರು ದಿನಗಳಿಂದ ಉಸಿರಾಟದ ತೊಂದರೆಯಿಂದಾಗಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿರುವ ಚೆನ್ನಮ್ಮ ಅವರಿಗೆ ತಜ್ಞ ವೈದ್ಯರ ತಂಡ ನಿರಂತರ ಚಿಕಿತ್ಸೆ ನೀಡುತ್ತಿದೆ. ಸೊಸೆ ಭವಾನಿ ರೇವಣ್ಣ ಅವರು ರಾತ್ರಿಯಿಡೀ ಆಸ್ಪತ್ರೆಯಲ್ಲೇ ಉಳಿದು ಅತ್ತೆಯ ಆರೋಗ್ಯ ನೋಡಿಕೊಂಡಿದ್ದಾರೆ.
ಸದ್ಯ ಚೆನ್ನಮ್ಮ ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದು, ಶೀಘ್ರದಲ್ಲೇ ಚೇತರಿಸಿಕೊಂಡು ಮನೆಗೆ ವಾಪಸಾಗಲಿದ್ದಾರೆ ಎಂಬ ನಿರೀಕ್ಷೆಯಲ್ಲಿ ಕುಟುಂಬಸ್ಥರಿದ್ದಾರೆ. ಇಂದು ಬೆಳಗ್ಗೆ 8 ಗಂಟೆಗೆ ವೈದ್ಯರ ತಂಡ ಮತ್ತೊಮ್ಮೆ ತಪಾಸಣೆ ನಡೆಸಿದ್ದು, ಆರೋಗ್ಯದ ಸ್ಥಿತಿಗತಿ ಬಗ್ಗೆ ಮಾಹಿತಿ ಹೊರಬೀಳುವ ಸಾಧ್ಯತೆಯಿದೆ.ಇದನ್ನೂ ಓದಿ: ದೇವೇಗೌಡರ ಪತ್ನಿ ಚೆನ್ನಮ್ಮ ಆರೋಗ್ಯ ಸ್ಥಿರವಾಗಿದೆ: ಆರ್. ಅಶೋಕ್
