ನವದೆಹಲಿ: ನೀಟ್ ಪರೀಕ್ಷೆಗೆ ಸಂಬಂಧಿಸಿದ ವಿವಾದಗಳ ನಡುವೆ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ಕುಟುಂಬಗಳಿಗೆ 1 ಕೋಟಿ ರೂ. ಪರಿಹಾರ ನೀಡುವಂತೆ ಪ್ರಧಾನಿ ಮೋದಿಗೆ (Narendra Modi) ಕಾಕ್ರೋಚ್ ಜನತಾ ಪಕ್ಷದ (Cockroach Janata Party) ಸಂಸ್ಥಾಪಕ ಅಭಿಜೀತ್ ದೀಪ್ಕೆ (Abhijeet Dipke) ಆಗ್ರಹಿಸಿದ್ದಾರೆ.
ಈ ಸಂಬಂಧ ಪ್ರಧಾನಿ ಮೋದಿಗೆ ಅವರು ಪತ್ರ ಬರೆದಿದ್ದಾರೆ. ಪತ್ರದಲ್ಲಿ, ಪ್ರಶ್ನೆ ಪತ್ರಿಕೆ ಸೋರಿಕೆಗೆ ಹೊಣೆಗಾರಿಕೆ ವಹಿಸುವಂತೆ ಒತ್ತಾಯಿಸಿದ್ದಾರೆ. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರನ್ನು ವಜಾಗೊಳಿಸುವ ತಮ್ಮ ಬೇಡಿಕೆಯನ್ನು ಪುನರುಚ್ಚರಿಸಿದ್ದಾರೆ. ನಮ್ಮ ದೇಶದ ಭವಿಷ್ಯಕ್ಕೆ ಅಂದರೆ ನಮ್ಮ ಯುವ ವಿದ್ಯಾರ್ಥಿಗಳ ಜೀವನ ಮತ್ತು ಮಾನಸಿಕ ಆರೋಗ್ಯಕ್ಕೆ ಬೆದರಿಕೆಯೊಡ್ಡಿ ಬೆಳೆಯುತ್ತಿರುವ ಬಿಕ್ಕಟ್ಟಿನ ಬಗ್ಗೆ ನಿಮ್ಮ ಗಮನ ಸೆಳೆಯಲು ನಾನು ಇಂದು ಭಾರವಾದ ಹೃದಯದಿಂದ ನಿಮಗೆ ಪತ್ರ ಬರೆಯುತ್ತಿದ್ದೇನೆ ಎಂದು ದಿಪ್ಕೆ ಬೇಸರ ಹೊರಹಾಕಿದ್ದಾರೆ. ಇದನ್ನೂ ಓದಿ: ವಿದೇಶದಲ್ಲಿನ ಕೆಲ ಶಕ್ತಿಗಳು ದೇಶದ ಯುವಜನರನ್ನ ಕೈಗೊಂಬೆಯಾಗಿ ಮಾಡಿಕೊಳ್ಳಲು ಬಯಸ್ತಿವೆ; ʻಕಾಕ್ರೋಚ್ʼಗೆ ನಬಿನ್ ಚಾಟಿ
ಪ್ರಶ್ನೆ ಪತ್ರಿಕೆ ಸೋರಿಕೆ ಬಳಿಕ ಇತ್ತೀಚಿನ ವಾರಗಳಲ್ಲಿ 11 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಳೆದ 48 ಗಂಟೆಗಳಲ್ಲಿ ಐದು ಸಾವುಗಳು ಸಂಭವಿಸಿವೆ. ಅನೇಕ ಪೋಷಕರು ತಮ್ಮ ಮಕ್ಕಳ ಶಿಕ್ಷಣದ ಕನಸುಗಳನ್ನು ನನಸಾಗಿಸಲು ಶೈಕ್ಷಣಿಕ ಸಾಲ ಪಡೆದಿದ್ದಾರೆ. ತಮ್ಮ ಇಡೀ ಜೀವನದ ಉಳಿತಾಯವನ್ನು ಖರ್ಚು ಮಾಡಿ ಮಕ್ಕಳನ್ನು ಕಳೆದುಕೊಂಡು ಈ ಕುಟುಂಬಗಳು ಸಂಪೂರ್ಣವಾಗಿ ನಿರ್ಗತಿಕರಾಗಿದ್ದಾರೆ. ಆದ್ದರಿಂದ, ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ಹಾನಿಗೊಳಗಾದ ಕುಟುಂಬಗಳಿಗೆ 1 ಕೋಟಿ ರೂ. ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಕಾಕ್ರೊಚ್ ಜನತಾ ಪಕ್ಷವು ಕಳೆದ ಒಂದು ತಿಂಗಳಿನಿಂದ ಶಿಕ್ಷಣ ಸಚಿವರ ರಾಜೀನಾಮೆಗೆ ಒತ್ತಾಯಿಸುತ್ತಿದೆ. ಈ ಬಗ್ಗೆ ದೇಶಾದ್ಯಂತ ಪ್ರತಿಭಟನೆ ನಡೆಯುತ್ತಿದೆ. ಜೀವಹಾನಿ ಘಟನೆಗಳಿಗೆ ಸ್ವಲ್ಪ ಹೊಣೆಗಾರಿಕೆ ಬೇಕಾಗಿದೆ. ಶಿಕ್ಷಣ ಸಚಿವರನ್ನು ಅವರ ಹುದ್ದೆಯಿಂದ ತೆಗೆದುಹಾಕುವಂತೆ ನಾವು ನಿಮ್ಮನ್ನು ಗೌರವದಿಂದ ವಿನಂತಿಸುತ್ತೇವೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಇದನ್ನೂ ಓದಿ: ನೀಟ್‌ಗಾಗಿ ಟೆಲಿಗ್ರಾಂ ನಿಷೇಧ – ಕೇಂದ್ರದ ನಿರ್ಧಾರ ಎತ್ತಿ ಹಿಡಿದ ಹೈಕೋರ್ಟ್
