ರಾಂಚಿ: ವಿದೇಶದಲ್ಲಿರುವ ಕೆಲ ಶಕ್ತಿಗಳು ಭಾರತದ (India) ಯುವ ಜನರನ್ನು ತಮ್ಮ ಕೈಗೊಂಬೆಯನ್ನಾಗಿ ಮಾಡಿಕೊಳ್ಳಬಹುದು ಎಂದು ಭಾವಿಸಿದ್ದಾರೆ. ಆದರೆ ಪ್ರಜ್ಞಾವಂತ ಭಾರತೀಯ ಯುವಕರು ಎಂದಿಗೂ ಇಂತಹ ಸೂತ್ರಗಳಿಗೆ ಬೊಂಬೆಯಾಗುವುದಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ (Nitin Nabin) ಅವರು ಕಾಕ್ರೋಚ್ ಜನತಾ ಪಾರ್ಟಿ ಸಂಸ್ಥಾಪಕ ಅಭಿಜೀತ್ ದೀಪ್ಕೆಗೆ (Abhijeet Dipke) ಪರೋಕ್ಷವಾಗಿ ಚಾಟಿ ಬೀಸಿದ್ದಾರೆ.
कुछ लोग विदेश में बैठकर भारत के युवाओं को भ्रमित करने का प्रयास कर रहे हैं, लेकिन भारत का युवा Positive Politics करेगा। pic.twitter.com/lbWV8IA7I7
— Nitin Nabin (@NitinNabin) June 6, 2026
ಜಾರ್ಖಂಡ್‌ನಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ವಿದೇಶದಲ್ಲಿ ಕುಳಿತುಕೊಂಡು ಭಾರತದ ಯುವ ಸಮೂಹವನ್ನ ನಿಯಂತ್ರಿಸಬಹುದು ಎಂದು ಕೆಲವರು ಭ್ರಮೆಯಲ್ಲಿದ್ದಾರೆ. ನಕಾರಾತ್ಮಕ ರಾಜಕೀಯಕ್ಕೆ ತಳ್ಳಲು ಪ್ರಯತ್ನಿಸುತ್ತಿದ್ದಾರೆ. ಆದರೆ ಭಾರತದ ಯುವಜನರು ದೇಶದ ಅಭಿವೃದ್ಧಿ ಮತ್ತು ರಚನಾತ್ಮಕ ಕೆಲಸಗಳತ್ತ ಗಮನ ಹರಿಸಬೇಕು. ಇಂದಿನ ಯುವಪೀಳಿಗೆ ದೇಶದ ಪ್ರಗತಿಗೆ ಮತ್ತು ಉಜ್ವಲ ಭವಿಷ್ಯ ರೂಪಿಸಿಕೊಳ್ಳುವ ಆಸಕ್ತಿ ಹೊಂದಿದೆ. ಆದರೆ ಕೆಲವು ಶಕ್ತಿಗಳು ಅವರನ್ನ ವ್ಯವಸ್ಥೆಯ ಅಥವಾ ಆಡಳಿತದ ವಿರೋಧಿಗಳನ್ನಾಗಿ ಮಾಡಲು ವ್ಯವಸ್ಥಿತ ಸಂಚು ರೂಪಿಸುತ್ತಿವೆ ಎಂದು ಆರೋಪಿಸಿದ್ದಾರೆ.
ದೇಶದ ಯುವ ಸಮೂಹವನ್ನ ನೆಗೆಟಿವ್ ಪಾಲಿಟಿಕ್ಸ್‌ನತ್ತ ತಳ್ಳಲು ಬಯಸುವವರಿಗೆ ನಾನು ಎಚ್ಚರಿಕೆ ನೀಡುತ್ತಿದ್ದೇನೆ. ಭಾರತದ ಯುವ ಪೀಳಿಗೆಯು ಯಾವಾಗಲೂ ಸಕಾರಾತ್ಮಕ ರಾಜಕಾರಣವನ್ನೇ ಆಯ್ಕೆ ಮಾಡುತ್ತದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಭಿನ್ನಾಭಿಪ್ರಾಯ ವ್ಯಕ್ತಪಡಿಸುವುದು ಅಥವಾ ಪ್ರತಿಭಟಿಸುವುದು ಪ್ರತಿಯೊಬ್ಬರ ಸಾಂವಿಧಾನಿಕ ಹಕ್ಕು. ಆದರೆ ಈ ಭಿನ್ನಾಭಿಪ್ರಾಯವು ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಚೌಕಟ್ಟಿನ ನಿಯಮಗಳ ವ್ಯಾಪ್ತಿಯಲ್ಲಿಯೇ ಇರಬೇಕು ಎಂದು ಸಲಹೆ ನೀಡಿದ್ದಾರೆ.

ಭಾರತದ ಯುವ ಪೀಳಿಗೆಯು ಹೊಸ ಆವಿಷ್ಕಾರ ಮತ್ತು ಸೃಜನಶೀಲತೆಗೆ ಹೆಸರುವಾಸಿಯಾಗಿದೆ. ಕಠಿಣ ಪರಿಶ್ರಮ ಹಾಗೂ ಸಮರ್ಪಣಾ ಭಾವದ ಫಲವಾಗಿ ಇಂದು ದೇಶದಲ್ಲಿ ಸುಮಾರು 2 ಲಕ್ಷ ಸ್ಟಾರ್ಟ್-ಅಪ್‌ಗಳು ತಲೆ ಎತ್ತಿವೆ ಮತ್ತು ಭಾರತವು ಜಾಗತಿಕ ಐಟಿ ಹಬ್ ಆಗುವತ್ತ ಹೆಜ್ಜೆ ಇಡುತ್ತಿದೆ ಎಂದು ಹೇಳಿದ್ದಾರೆ.
ನೆರೆಯ ರಾಷ್ಟ್ರಗಳಲ್ಲಿ ಇತ್ತೀಚಿಗೆ ನಡೆದ ರಾಜಕೀಯ ಅಸ್ಥಿರತೆ ಮತ್ತು ಅಲ್ಲಿನ ಆಡಳಿತ ವಿರೋಧಿ ಅಲೆಯನ್ನ ಉಲ್ಲೇಖಿಸಿ, ಬೇರೆ ರಾಷ್ಟ್ರಗಳಲ್ಲಿ ನಡೆದಂತಹ ಅರಾಜಕತೆಯ ಪ್ರಯತ್ನಗಳು ಭಾರತದ ಯುವಕರಲ್ಲಿ ಎಂದಿಗೂ ಪ್ರತಿಧ್ವಿನಿಸುವುದಿಲ್ಲ. ಆ ರೀತಿಯ ಆಡಳಿತ ವಿರೋಧಿ ಚಟುವಟಿಕೆಗಳು ಭಾರತದ ಯುವಕರಿಗೆ ಎಂದಿಗೂ ಮಾದರಿಯಾಗಲು ಸಾಧ್ಯವಿಲ್ಲ ಎಂದಿದ್ದಾರೆ.
