ನವದೆಹಲಿ: NEET-UG 2026 ಮರುಪರೀಕ್ಷೆ ಹಿನ್ನೆಲೆ ಟೆಲಿಗ್ರಾಂನ್ನು (Telegram) ತಾತ್ಕಾಲಿಕವಾಗಿ ನಿರ್ಬಂಧಿಸಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ದೆಹಲಿ ಹೈಕೋರ್ಟ್ (Delhi High Court) ಎತ್ತಿಹಿಡಿದಿದೆ.
ಕೇಂದ್ರ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಟೆಲಿಗ್ರಾಂ ಹೈಕೋರ್ಟ್ ಮೆಟ್ಟಿಲೇರಿತ್ತು. ಈ ಅರ್ಜಿಯನ್ನು ನ್ಯಾಯಮೂರ್ತಿ ತೇಜಸ್ ಕರಿಯಾ ಅವರಿದ್ದ ಏಕ ಸದಸ್ಯ ಪೀಠ ಜೂ.18 ರಂದು ವಿಚಾರಣೆ ನಡೆಸಿತ್ತು. ಇದೀಗ ಈ ಅರ್ಜಿಯನ್ನು ವಜಾಗೊಳಿಸಿ, ಕೇಂದ್ರ ಸರ್ಕಾರದ ನಿರ್ಧಾರವನ್ನು ನ್ಯಾಯಾಲಯ ಎತ್ತಿಹಿಡಿದಿದೆ. ಇದನ್ನೂ ಓದಿ: NEET Paper Leak| ಟೆಲಿಗ್ರಾಮ್ ಮೇಲೆ ಕ್ರಮ – ವಾಟ್ಸಪ್ ಮೇಲೆ ನಿಷೇಧ ಯಾಕಿಲ್ಲ?
ಸರ್ಕಾರದ ಕ್ರಮ ಕನಿಷ್ಠ ನಿರ್ಬಂಧವಾಗಿದೆ. ಇದರಿಂದ ಆದೇಶ ಅಸಮಾನವಾಗಿದೆ ಎನ್ನಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಜೂನ್ 21 ರಂದು ನಡೆಯಲಿರುವ ನೀಟ್ ಮರು ಪರೀಕ್ಷೆಗೆ (NEET Re-Exam) ಮುನ್ನ ಪ್ರಶ್ನೆ ಪತ್ರಿಕೆ ಸೋರಿಕೆಯನ್ನು ತಡೆಗಟ್ಟಲು ಜೂನ್ 22 ರವರೆಗೆ ಭಾರತದಲ್ಲಿ ಟೆಲಿಗ್ರಾಂ (Telegram) ಆ್ಯಪ್ ಅನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ.
ಟೆಲಿಗ್ರಾಂ ತಾತ್ಕಾಲಿಕ ನಿಷೇಧಕ್ಕೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಶಿಫಾರಸು ಮಾಡಿತ್ತು. ಅಲ್ಲದೇ ಜೂನ್ 30 ರವರೆಗೆ ಈ ಹಿಂದೆ ಪೋಸ್ಟ್ ಮಾಡಿದ ಸಂದೇಶಗಳಿಗೆ ಎಡಿಟ್ ಮಾಡುವ ಸೌಲಭ್ಯವನ್ನು ನಿಷ್ಕ್ರಿಯಗೊಳಿಸಲು ವೇದಿಕೆಗೆ ಸೂಚಿಸಲಾಗಿದೆ.
ಮೇ 3 ರಂದು ನಡೆಸಲಾದ NEET-UG ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗಿದ್ದವು. ಇದಾದ ಬಳಿಕ ಆ ಪರೀಕ್ಷೆಯನ್ನು ರದ್ದುಗೊಳಿಸಲಾಗಿತ್ತು. ಅಲ್ಲದೇ ಮರು ಪರೀಕ್ಷೆಯನ್ನು ನಿಗದಿಪಡಿಸಲಾಗಿತ್ತು. ಇನ್ನೂ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣವನ್ನು ಕೇಂದ್ರ ತನಿಖಾ ದಳ (CBI) ತನಿಖೆ ನಡೆಸುತ್ತಿದೆ. ಇದನ್ನೂ ಓದಿ: NEET UG ಪ್ರಶ್ನೆಪತ್ರಿಕೆ ಸೋರಿಕೆ – ಎನ್‌ಟಿಎಗೆ ಸುಪ್ರೀಂಕೋರ್ಟ್ ತರಾಟೆ
