ರಾಯಚೂರು: ಸಿಎಜಿ ವರದಿಯಲ್ಲಿ 60 ಕೋಟಿ ರೂ, ಬ್ಯಾಂಕ್ ಖಾತೆ ಇಲ್ಲದವರಿಗೆ ಹಣ ಜಮೆಯಾದ ವಿಚಾರ ಸತ್ಯಕ್ಕೆ ದೂರವಾಗಿದ್ದು ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ರಾಜ್ಯಾಧ್ಯಕ್ಷ ಹೆಚ್.ಎಂ ರೇವಣ್ಣ (HM Revanna) ಹೇಳಿದ್ದಾರೆ.
ರಾಯಚೂರಿನಲ್ಲಿ ಮಾತನಾಡಿದ ಅವರು, ಮೃತಪಟ್ಟೋರಿಗೆ ಹಣ ಹೋಗೋದು ಮಾತ್ರ ಸರಿಯಾಗಿ ಹೇಳಿದ್ದಾರೆ. ಇದರ ಹೊರತಾಗಿ ಒಂದೇ ಖಾತೆಯಲ್ಲಿ 20 ಜನ ಪಡೆದಿದ್ದಾರೆ ಅನ್ನೋದಿದೆ, ಅದರ ಮಾಹಿತಿ ಪಡೆಯುತ್ತೇನೆ. ಪಂಚ ಗ್ಯಾರಂಟಿ ಆರಂಭಿಕ ಹಂತದಲ್ಲಿ ಯಾರಿಗೂ ಕಷ್ಟ ಆಗದಂತೆ ಆನ್‌ಲೈನ್ ಅರ್ಜಿ ಮಾಡಿದ್ವಿ. ಆನ್‌ಲೈನ್ ರೆಜಿಸ್ಟ್ರೇಶನ್, ಆನ್ಲೈನ್ ಡಿಪಾಸಿಟ್, ಆನ್‌ಲೈನ್ ಎಂಟ್ರಿ ಮಾಡಲಾಯ್ತು. ಎಲ್ಲಾ ಆನ್‌ಲೈನ್ ಇದ್ದಿರೋದ್ರಿಂದ ನ್ಯೂನ್ಯತೆ ಆಗಿರೋದು ಕಂಡುಬಂದಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಶನಿವಾರ ಶಾಲಾ ಸಮಯ ಬದಲಿಸಿದ ಶಿಕ್ಷಣ ಇಲಾಖೆ
ಗೃಹಲಕ್ಷ್ಮಿ ಪರಿಷ್ಕರಣೆ ಮಾಡಿದಾಗ 2.80 ಲಕ್ಷ ಮಂದಿ ಮೃತಪಟ್ಟಿದ್ದಾರೆ ಎನ್ನುವುದು ಗೊತ್ತಾಗಿದೆ. 115 ಕೋಟಿ ರೂ. ಮೃತಪಟ್ಟೋರಿಗೆ ಜಮೆ ಆಗಿತ್ತು. ಈಗಾಗಲೇ 15 ಕೋಟಿ ರೂ. ವಾಪಸ್ ಪಡೆದಿದ್ದೇವೆ. ಬಾಕಿ 100 ಕೋಟಿ ರೂ.ಗಾಗಿ ಬ್ಯಾಂಕ್ ಜೊತೆ ಚರ್ಚೆ ನಡೆದಿದೆ. ಗೃಹ ಜ್ಯೋತಿಯಲ್ಲಿ 200 ಯುನಿಟ್ ಹೇಳಿದ್ವಿ. ಅಂಗಡಿ, ಮಷಿನ್‌ಗಳಿಗೆ ಉಪಯೋಗಿಸುವ ಮಾಹಿತಿ ಬಂದಿದೆ. ಅನ್ನಭಾಗ್ಯದಲ್ಲಿ ಕಾರ್ಟ್‌ಗಳನ್ನ ಹೆಚ್ಚಿಗೆ ಮಾಡಿಕೊಂಡಿರೋದು ಗೊತ್ತಾಗಿದೆ. ಅದನ್ನು ಪರಿಶೀಲನೆ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಗ್ಯಾರಂಟಿ ಯೋಜನೆಗಳ ಹಣ ಪೋಲಾಗ್ತಿರೋ ಬಗ್ಗೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಗ್ಯಾರಂಟಿ ಯೋಜನೆಗಳ ಸಮಿತಿ ಕತ್ತೆಕಾಯ್ತಿದೆಯಾ ಎಂದಿರೋ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಆ ಪದಗಳೆಲ್ಲಾ ಅವರಿಗೆ ಅನ್ವಯಿಸೋದು, ಇಂತಹ ಕಾರ್ಯಕ್ರಮ ಅವರು ಮಾಡಿದ್ರಾ. ಮಾಡಿದ್ರೆ ಕತ್ತೆ ಕಾಯ್ತಿದ್ರೋ, ನಾಯಿ ಕಾಯ್ತಿದ್ರೋ ಅವರೇ ಹೇಳಬೇಕು. ಗ್ಯಾರಂಟಿ ನಾವೇ ಕಂಡುಹಿಡಿದಿದ್ದು, ಪರಿಷ್ಕರಣೆ ಮಾಡಲಾಗ್ತಿದೆ. ವ್ಯತ್ಯಾಸ ಆಗಿದೆ ಸರಿಪಡಿಸ್ತಿದ್ದೇವೆ, ಅವರು ಬರೀ ಹೇಳೋದೆ ಆಯ್ತು. ಗ್ಯಾರಂಟಿ ಆಗಲ್ಲ ಅಂದಿರೋರಿಗೆ ಮುಖಕ್ಕೆ ಹೊಡೆದಂಗೆ ಈಗ ಆಗಿಲ್ವಾ ಎಂದಿದ್ದಾರೆ. ಇದನ್ನೂ ಓದಿ: ಗೃಹಲಕ್ಷ್ಮಿ ಯೋಜನೆಯಲ್ಲಿ ಯಾವುದೇ ಗೋಲ್‌ಮಾಲ್ ಆಗಿಲ್ಲ – ಮಹಿಳಾ ಮತ್ತು ಮಕ್ಕಳಾಭಿವೃದ್ಧಿ ಇಲಾಖೆ ಸ್ಪಷ್ಟನೆ
