ಬೆಂಗಳೂರು: ಗೃಹಲಕ್ಷ್ಮಿ ಯೋಜನೆಯಲ್ಲಿ ಮಹಾಲೋಪವಾಗಿದೆ ಅಂತ ಸಿಎಜಿ ವರದಿ ಹೇಳಿದ ಬೆನ್ನಲ್ಲೇ ಮಹಿಳಾ ಮತ್ತು ಮಕ್ಕಳಾಭಿವೃದ್ಧಿ ಇಲಾಖೆ (Department of Women and Child Development) ಯಾವುದೇ ಗೋಲ್‌ಮಾಲ್ ಆಗಿಲ್ಲ ಎಂದು ಡೇಟಾ ಸಮೇತ ಸ್ಪಷ್ಟನೆ ನೀಡಿದೆ.
ಗೃಹಲಕ್ಷ್ಮಿ ಯೋಜನೆಯ (Gruhalakshmi Scheme) ಒಟ್ಟು 2,88,376 ಫಲಾನುಭವಿಗಳು ಸಾವನ್ನಪ್ಪಿದ್ದಾರೆ. ಆ ಪೈಕಿ 1,03,922 ಮೃತ ಫಲಾನುಭವಿಗಳ ಕುಟುಂಬದಲ್ಲಿ ಯಜಮಾನಿಯ ಹೆಸರು ಬದಲಾವಣೆ ಆಗಿ, ಮರು ನೋಂದಣಿ ಮಾಡಿಕೊಂಡಿದ್ದಾರೆ. ಇನ್ನೂ 1,08,755 ಮೃತ ಫಲಾನುಭವಿಗಳ ಮರಣದ ವಿವರ ಸಕಾಲಕ್ಕೆ ಲಭ್ಯವಾಗಿಲ್ಲ. ಹೀಗಾಗಿ ಇಲ್ಲಿ ಯಾವುದೇ ತಾಂತ್ರಿಕ ದೋಷವಾಗಿಲ್ಲ. ಆಧಾರ್ ಬೇಸ್ಡ್ ಪೇಮೆಂಟ್ ಸಿಸ್ಟಮ್‌ನಲ್ಲಿ ಬ್ಯಾಂಕ್ ಖಾತೆ ವಿವರ ಲಭ್ಯವಾಗುತ್ತದೆ. ಮೃತ ಫಲಾನುಭವಿಗಳ ಅಕೌಂಟ್‌ಗೆ 115 ಕೋಟಿ ರೂ. ಪಾವತಿಯಾಗಿದ್ದು, ಈ ಪೈಕಿ 15.24 ಕೋಟಿ ರೂ. ರಿಕವರಿ ಮಾಡಿದ್ದೇವೆ. ಉಳಿದ ಹಣವನ್ನು ರಿಕವರಿ ಮಾಡಿಕೊಳ್ಳಲಾಗುತ್ತಿದೆ ಅಂತ ಹೇಳಿದೆ. ಇದನ್ನೂ ಓದಿ: ಜು.1 ರಿಂದ ಪಾಸ್‌ಪೋರ್ಟ್ ದರ ದುಬಾರಿ – ತತ್ಕಾಲ್ ಪಾಸ್‌ಪೋರ್ಟ್ ಶುಲ್ಕ 5,000 ರೂ.ಗೆ ಏರಿಕೆ; ಇಲ್ಲಿದೆ ಪೂರ್ಣ ಮಾಹಿತಿ
ಫಲಾನುಭವಿಗಳು ಖಾತೆ ಹೊಂದಿರುವ ಬ್ಯಾಂಕ್‌ನ ತಾಂತ್ರಿಕ ದೋಷದಿಂದ ತಪ್ಪಾದ ಬ್ಯಾಂಕ್ ಖಾತೆ ವಿವರ ಕಡತದಲ್ಲಿ ಹಂಚಿಕೆಯಾಗಿರಬಹುದು. ಜಂಟಿ ಬ್ಯಾಂಕ್ ಖಾತೆಯಿದ್ದಲ್ಲಿ ಒಂದೇ ಬ್ಯಾಂಕ್ ಖಾತೆಗೆ ಒಂದಕ್ಕಿಂತ ಹೆಚ್ಚು ಫಲಾನುಭವಿಗಳ ಸರ್ಕಾರಿ ಸೌಲಭ್ಯ ಜಮೆಯಾಗಿರಬಹುದು. ಜಂಟಿ ಖಾತೆ ಇರುವಂತಹ ಫಲಾನುಭವಿಗಳ ಅತ್ತೆ-ಸೊಸೆ, ಅಮ್ಮ-ಮಗಳ ಬ್ಯಾಂಕ್ ಖಾತೆಗೆ ದುಡ್ಡು ಪಾವತಿಯಾಗಿದೆ. ಬೇರೆ ಬೇರೆ ಪಡಿತರ ಚೀಟಿ ಹೊಂದಿದ್ದು ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಾಗಿರೋದ್ರಿಂದ ಎರಡೂ ಫಲಾನುಭವಿಗಳ ಮೊತ್ತ ಒಂದೇ ಖಾತೆಗೆ ಪಾವತಿ ಆಗಿರಬಹುದು ಅಂತ ಇಲಾಖೆ ಹೇಳಿದೆ.
