ನವದೆಹಲಿ: ವಿದೇಶಿ ಪ್ರವಾಸ ಕೈಗೊಳ್ಳುವ ಯೋಚನೆಯಲ್ಲಿರುವ ನಾಗರಿಕರಿಗೆ ಕೇಂದ್ರ ಸರ್ಕಾರ ಬೆಲೆ ಏರಿಕೆಯ ಶಾಕ್ ಕೊಟ್ಟಿದೆ. ಕೇಂದ್ರ ಸರ್ಕಾರ ಇಂದು (ಗುರುವಾರ) 14 ವರ್ಷಗಳಲ್ಲಿ ಮೊದಲ ಬಾರಿಗೆ ಪಾಸ್‌ಪೋರ್ಟ್ ಶುಲ್ಕವನ್ನ (Passport Fee)ಹೆಚ್ಚಿಸಿದೆ.
ಪ್ರಮಾಣಿತ ಅಂದ್ರೆ ಸಾಮಾನ್ಯ ಪಾಸ್‌ಪೋರ್ಟ್ ಪಡೆಯುವ ಶುಲ್ಕ 2,500 ರೂ.ಗಳಿಗೆ ಹಾಗೂ ತತ್ಕಾಲ್ ಯೋಜನೆ (Tatkaal Scheme) ಅಡಿಯಲ್ಲಿ ಪಾಸ್‌ಪೋರ್ಟ್ ಪಡೆಯುವ ಶುಲ್ಕವನ್ನು 5,000 ರೂ.ಗಳಿಗೆ ಹೆಚ್ಚಿಸಲಾಗಿದೆ. ಜುಲೈ 1 ರಿಂದ ಹೊಸ ದರ ಜಾರಿಯಾಗಲಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ. ಇದನ್ನೂ ಓದಿ: 2 ವರ್ಷಗಳ ನಂತರ ಬಾಂಗ್ಲಾ ಪ್ರಜೆಗಳಿಗೆ ಪ್ರವಾಸಿ ವೀಸಾ ಪುನಾರಂಭ – ಭಾರತ ನಿರ್ಧಾರ
ಹೊಸ ದರಗಳ ಅಡಿಯಲ್ಲಿ 18 ಅಥವಾ 18 ವರ್ಷಕ್ಕಿಂತ ಮೇಲ್ಪಟ್ಟ ವಯಸ್ಸಿನ ಅರ್ಜಿದಾರರಿಗೆ 36 ಪುಟಗಳ ಪಾಸ್‌ಪೋರ್ಟ್ ಶುಲ್ಕವನ್ನ 1,500 ರೂ.ನಿಂದ 2,500 ರೂ.ಗಳಿಗೆ ಹೆಚ್ಚಿಸಲಾಗಿದೆ. ತತ್ಕಾಲ್ ಶುಲ್ಕವನ್ನು 3,500 ರೂ.ಗಳಿಂದ 5,000 ರೂ.ಗಳಿಗೆ ಹೆಚ್ಚಿಸಲಾಗಿದೆ.

ಅದೇ ರೀತಿ, 60 ಪುಟಗಳ ಪಾಸ್‌ಪೋರ್ಟ್‌ನ ಶುಲ್ಕವನ್ನು ಸಾಮಾನ್ಯ ವರ್ಗದ ಅಡಿಯಲ್ಲಿ 2,000 ರೂ.ಗಳಿಂದ 3,500 ರೂ.ಗಳಿಗೆ ಮತ್ತು ತತ್ಕಾಲ್ ಅಡಿಯಲ್ಲಿ 6,000 ರೂ.ಗಳಿಗೆ ಹೆಚ್ಚಿಸಲಾಗಿದೆ. ಇದನ್ನೂ ಓದಿ: ಪ್ರಧಾನಿ ಮೋದಿ ಭೇಟಿಯಾದ ಅಮೆಜಾನ್ CEO – ಭಾರತದಲ್ಲಿ 4.53 ಲಕ್ಷ ಕೋಟಿ ಹೂಡಿಕೆ ಮಾಡೋದಾಗಿ ಘೋಷಣೆ
14 ವರ್ಷಗಳ ಬಳಿಕ ಶುಲ್ಕ ಏರಿಕೆ
2012 ರಲ್ಲಿ ಕೊನೆಯಬಾರಿಗೆ ಪಾಸ್‌ಪೋರ್ಟ್ ಶುಲ್ಕವನ್ನ ಹೆಚ್ಚಿಸಲಾಗಿತ್ತು, ಇದೀಗ 14 ವರ್ಷಗಳ ಬಳಿಕ ಕೇಂದ್ರ ಸರ್ಕಾರ ದರ ಏರಿಕೆ ಮಾಡಿದೆ. ಪಾಸ್‌ಪೋರ್ಟ್‌ಗಳ (ತಿದ್ದುಪಡಿ) ನಿಯಮ, 2026 ರ ಅನ್ವಯ ವಿದೇಶಾಂಗ ಸಚಿವಾಲಯ (MEA) ದರ ಏರಿಕೆ ಮಾಡಿ ಅಧಿಸೂಚನೆ ಹೊರಡಿಸಿದೆ. ಹೊಸ ದರವು ಜುಲೈ 1 ರಿಂದಲೇ ಜಾರಿಗೆ ಬರಲಿದೆ.
ಕಳೆದುಹೋದ ಪಾಸ್‌ಪೋರ್ಟ್‌ಗೂ ದುಪ್ಪಟ್ಟು ದರ
ಇದಲ್ಲದೇ ಕಳೆದುಹೋದ ಅಥವಾ ಹಾನಿಗೊಳಗಾದ ಪಾಸ್‌ಪೋರ್ಟ್ ಬದಲಿಸಲು (36 ಪುಟ) 5,000 ರೂ., ತತ್ಕಾಲ್‌ನಲ್ಲಿ 7,500 ರೂ. ಶುಲ್ಕ ಪಾವತಿಸಬೇಕಾಗುತ್ತದೆ. 60 ಪುಟಗಳ ಬದಲಿ ಪಾಸ್‌ಪೋರ್ಟ್‌ಗೆ ಸಾಮಾನ್ಯಕ್ಕೆ 6,000 ರೂ. ಹಾಗೂ ತತ್ಕಾಲ್‌ನಲ್ಲಿ 8,500 ರೂ. ಪಾವತಿಸಬೇಕಾಗುತ್ತದೆ.

ಅಪ್ರಾಪ್ತರಿಗೂ ದುಬಾರಿ ಶುಲ್ಕ
ಇನ್ನೂ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಅರ್ಜಿದಾರರಿಗೆ 36 ಪುಟಗಳ ಹೊಸ ಅಥವಾ ಮರು ಪಾಸ್‌ಪೋರ್ಟ್‌ಗೆ ಸಾಮಾನ್ಯ ಯೋಜನೆ ಅಡಿಯಲ್ಲಿ 1,750 ರೂ. ಹಾಗೂ ತತ್ಕಾಲ್ ಅಡಿಯಲ್ಲಿ 4,250 ರೂ. ಶುಲ್ಕವಾಗಲಿದೆ. ಜೊತೆಗೆ ಅಪ್ರಾಪ್ತ ವಯಸ್ಕರು ಕಳೆದುಹೋದ ಅಥವಾ ಹಾನಿಗೊಳಗಾದ ಪಾಸ್‌ಪೋರ್ಟ್ ಬದಲಾಯಿಸಲು ಸಾಮಾನ್ಯ ಯೋಜನೆ ಅಡಿ 4,250 ರೂ. ಹಾಗೂ ತತ್ಕಾಲ್ ಅಡಿಯಲ್ಲಿ 6,750 ರೂ. ನಿಗದಿಪಡಿಸಲಾಗಿದೆ.
ಪಾಸ್‌ಪೋರ್ಟ್ ಸಂಬಂಧಿತ ಸೇವೆಗಳಿಗೂ ಶುಲ್ಕ
1967 ರ ಪಾಸ್‌ಪೋರ್ಟ್ ಕಾಯ್ದೆಯ ಸೆಕ್ಷನ್ 24 ರ ಅಡಿಯಲ್ಲಿ ಜೂನ್ 20 ರಂದು ಹೊರಡಿಸಲಾದ ಅಧಿಸೂಚನೆಯು ಹಲವಾರು ಪ್ರಯಾಣ ದಾಖಲೆಗಳು ಮತ್ತು ಪಾಸ್‌ಪೋರ್ಟ್ ಸಂಬಂಧಿತ ಸೇವೆಗಳಿಗೆ ಶುಲ್ಕವನ್ನು ಪರಿಷ್ಕರಿಸುತ್ತದೆ.
ತುರ್ತು ಪ್ರಮಾಣ ಪತ್ರಗಳನ್ನು ಭಾರತದಲ್ಲಿ ಉಚಿತವಾಗಿ ನೀಡುವುದನ್ನು ಮುಂದುವರಿಸಿದ್ದರೂ, ವಿದೇಶದಲ್ಲಿರುವ ಅರ್ಜಿದಾರರಿಗೆ 15 ಅಮೆರಿಕನ್ ಡಾಲರ್ ಶುಲ್ಕ ವಿಧಿಸಲಾಗುತ್ತದೆ. ಗುರುತಿನ ಪ್ರಮಾಣಪತ್ರಕ್ಕೆ ಭಾರತದಲ್ಲಿ 1,000 ರೂ. ಮತ್ತು ವಿದೇಶದಲ್ಲಿ 50 ಡಾಲರ್ ಶುಲ್ಕವಿರುತ್ತದೆ.
ಪೊಲೀಸ್ ಕ್ಲಿಯರೆನ್ಸ್ ಪ್ರಮಾಣಪತ್ರಗಳು (Police Clearance Certificates- PCC), ಶರಣಾಗತಿ ಪ್ರಮಾಣಪತ್ರಗಳು, ವಿದೇಶಿ ಕಾರ್ಯಕ್ರಮದ ಪರಿಶೀಲನೆ ಮತ್ತು ಇತರ ವಿವಿಧ ಪಾಸ್‌ಪೋರ್ಟ್-ಸಂಬಂಧಿತ ಪ್ರಮಾಣಪತ್ರಗಳ ಶುಲ್ಕವನ್ನ ಭಾರತದಲ್ಲಿ 750 ರೂ. ಮತ್ತು ವಿದೇಶದಲ್ಲಿ 40 ಡಾಲರ್‌ಗಳಿಗೆ ನಿಗದಿಪಡಿಸಲಾಗಿದೆ.

