ಢಾಕಾ/ನವದೆಹಲಿ: ಭಾರತ ಮತ್ತು ಬಾಂಗ್ಲಾದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧ ಹಾಗೂ ಜನರ ನಡುವಿನ ಸಂಪರ್ಕ ಮತ್ತಷ್ಟು ವೃದ್ಧಿಸುವ ನಿಟ್ಟಿನಲ್ಲಿ ಭಾರತ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಕಳೆದ 2 ವರ್ಷಗಳಿಂದ ಸ್ಥಗಿತಗೊಂಡಿದ್ದ ಪ್ರವಾಸಿ ವೀಸಾಗಳನ್ನ (Tourist Visa) ಪುನರಾರಂಭಿಸಲು ಭಾರತ ನಿರ್ಧರಿಸಿದೆ.
ಇದೇ ಜೂನ್ 28 ರಿಂದ ಬಾಂಗ್ಲಾದೇಶದ ನಾಗರಿಕರಿಗೆ (Bangladeshi Travellers) ಪ್ರವಾಸಿ ವೀಸಾ ವಿತರಣೆ ಪುನರಾರಂಭಿಸುವುದಾಗಿ ಭಾರತ ಪ್ರಕಟಿಸಿದೆ. ಇದನ್ನೂ ಓದಿ: ವೆನೆಜುವೆಲಾದಲ್ಲಿ ಪ್ರಬಲ ಅವಳಿ ಭೂಕಂಪ – 164 ಮಂದಿ ಸಾವು, 970 ಕ್ಕೂ ಹೆಚ್ಚು ಮಂದಿಗೆ ಗಾಯ
2024ರಲ್ಲಿ ಬಾಂಗ್ಲಾದೇಶದಲ್ಲಿ ನಡೆದ ರಾಜಕೀಯ ದಂಗೆ ಹಾಗೂ ಭಾರತೀಯ ರಾಯಭಾರ ಕಚೇರಿಗಳ ಮೇಲಿನ ದಾಳಿಯ ಬಳಿಕ, ಸುರಕ್ಷತೆಯ ದೃಷ್ಟಿಯಿಂದ ಕಳೆದ ಸುಮಾರು 2 ವರ್ಷಗಳಿಂದ ಪ್ರವಾಸಿ ವೀಸಾ ಸೇವೆಗಳನ್ನ ಸ್ಥಗಿತಗೊಳಿಸಲಾಗಿತ್ತು. ಢಾಕಾದ ಜಮುನಾ ಪ್ಯೂಚರ್ ಪಾರ್ಕ್‌ನಲ್ಲಿರುವ ಭಾರತೀಯ ವೀಸಾ ಅರ್ಜಿ ಕೇಂದ್ರಕ್ಕೆ (IVAC) ಗುರುವಾರ ಭೇಟಿ ನೀಡಿದ ಭಾರತದ ನೂತನ ಹೈಕಮಿಷನರ್ ದಿನೇಶ್ ತ್ರಿವೇದಿ (Dinesh Trivedi) ಅವರು ಈ ನಿರ್ಧಾರ ಪ್ರಕಟಿಸಿದ್ದಾರೆ.

ಬಾಂಗ್ಲಾದೇಶದ ನಾಗರಿಕರಿಗೆ ಜೂನ್ 28ರ ಭಾನುವಾರದಿಂದ ಸಾಮಾನ್ಯ ಪ್ರವಾಸಿ ವೀಸಾ ಸೇವೆಗಳು ಲಭ್ಯವಾಗಲಿವೆ. ಇದನ್ನು ಘೋಷಿಸಲು ನನಗೆ ಅತ್ಯಂತ ಸಂತೋಷವಾಗುತ್ತಿದೆ. ಇದು ಉಭಯ ಸಾರ್ವಭೌಮ ರಾಷ್ಟ್ರಗಳ ನಡುವಿನ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸಲಿದೆ. ಇದರೊಂದಿಗೆ ತುರ್ತು ವೀಸಾ ಹಾಗೂ ವೈದ್ಯಕೀಯ ವೀಸಾಗಳ ಸೇವೆಯನ್ನೂ ಮುಂದುವರಿಸುತ್ತೇವೆ ಎಂದು ಅವರು ತಿಳಿಸಿದ್ದಾರೆ.
ಬಾಂಗ್ಲಾದೇಶದಲ್ಲಿವೆ 5 ವೀಸಾ ಕೇಂದ್ರಗಳು
ಬಾಂಗ್ಲಾದೇಶದಾದ್ಯಂತ ಢಾಕಾ, ರಾಜ್‌ಶಾಹಿ, ಚಿತ್ತಗಾಂಗ್, ಸಿಲ್ಹೆಟ್ ಮತ್ತು ಖುಲ್ನಾದಲ್ಲಿ ಭಾರತ 5 ವೀಸಾ ಕೇಂದ್ರಗಳನ್ನ ಒಳಗೊಂಡಿದೆ. ಭವಿಷ್ಯದಲ್ಲಿ ಇದನ್ನು ಮತ್ತಷ್ಟು ವಿಸ್ತರಿಸಲಾಗುವುದು ಎಂದು ಸಹ ತ್ರಿವೇದಿ ಹೇಳಿದ್ದಾರೆ. ಇದನ್ನೂ ಓದಿ: ವೆನೆಜುವೆಲಾ ಭೂಕಂಪಕ್ಕೆ ಪ್ರಧಾನಿ ದಿಗ್ಭ್ರಮೆ – ಭಾರತದಿಂದ ಅಗತ್ಯ ನೆರವು ನೀಡೋದಾಗಿ ಮೋದಿ ಘೋಷಣೆ
ಪ್ರವಾಸಿ ವೀಸಾ ಸೇವೆ ಸ್ಥಗಿತಗೊಳಿಸಿದ್ದು ಏಕೆ?
2024 ರಲ್ಲಿ ರಾಜಕೀಯ ದಂಗೆ ಹಾಗೂ ಬಾಂಗ್ಲಾದೇಶದಲ್ಲಿನ ಭಾರತೀಯ ಸಂಸ್ಥೆಗಳ ಮೇಲಿನ ದಾಳಿಯಿಂದಾಗಿ ವೀಸಾ ಕೇಂದ್ರಗಳನ್ನ ಸ್ಥಗಿತಗೊಳಿಸಲಾಗಿತ್ತು. 2024 ರ ಆಗಸ್ಟ್ 5 ರಂದು ಇಂದಿರಾ ಗಾಂಧಿ ಸಾಂಸ್ಕೃತಿಕ ಕೇಂದ್ರವನ್ನೂ ಧ್ವಂಸಗೊಳಿಸಿ, ಬೆಂಕಿ ಹಚ್ಚಲಾಗಿತ್ತು. ಬಾಂಗ್ಲಾದೇಶದಾದ್ಯಂತ 5 ಭಾರತೀಯ ವೀಸಾ ಅರ್ಜಿ ಕೇಂದ್ರಗಳ ಮೇಲೂ ದಾಳಿ ನಡೆದಿತ್ತು. ಭದ್ರತಾ ದೃಷ್ಟಿಯಿಂದ ಅಲ್ಲಿನ ವೀಸಾ ಕೇಂದ್ರಗಳನ್ನ ಸ್ಥಗಿತಗೊಳಿಸಲಾಗಿತ್ತು.
