– ‘ಚಲೋ ಸಂಸದ್’ ಪ್ರತಿಭಟನೆ ಶಾಂತಿಯುತವಾಗಿರಲಿ ಎಂದು ಕರೆ
ನವದೆಹಲಿ: ಸಾಮಾಜಿಕ, ಪರಿಸರ ಹೋರಾಟಗಾರ ಸೋನಂ ವಾಂಗ್ಚುಕ್ (Sonam Wangchuk) ತಮ್ಮ ಉಪವಾಸ ಸತ್ಯಾಗ್ರಹವನ್ನ ಸೋಮವಾರ (ಜುಲೈ 20) ಅಂತ್ಯಗೊಳಿಸಲು ಸಿದ್ಧರಾಗಿದ್ದಾರೆ. ಆದರೆ, ಅದಕ್ಕೂ ಮುನ್ನ 2 ಪ್ರಮುಖ ಷರತ್ತುಗಳನ್ನ ಈಡೇರಿಸಬೇಕೆಂದು ಅವರ ಪತ್ನಿ ಗೀತಾಂಜಲಿ ಆಂಗ್ಮೋ ತಿಳಿಸಿದರು.
ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆಯುತ್ತಿರುವ ಪ್ರತಿಭಟನಾ ವೇದಿಕೆಯಲ್ಲಿ ಮಾತನಾಡಿದ ಗೀತಾಂಜಲಿ (Gitanjali Angmo), ಸಂಸತ್ತಿನ ಮಳೆಗಾಲದ ಅಧಿವೇಶನದಲ್ಲಿ ಶಿಕ್ಷಣ ಕ್ಷೇತ್ರದ ಜವಾಬ್ದಾರಿತನದ ಪ್ರಶ್ನೆಯನ್ನ ರಾಜಕೀಯ ಪಕ್ಷಗಳು ಪ್ರಸ್ತಾಪಿಸುವ ಭರವಸೆ ನೀಡಿದರೆ ಮಾತ್ರ ಸೋನಂ ವಾಂಗ್ಚುಕ್ ಉಪವಾಸ ಅಂತ್ಯಗೊಳಿಸಲಿದ್ದಾರೆ ಎಂದು ಹೇಳಿದರು.

ಸಫ್ದರ್‌ಜಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೋನಂ ವಾಂಗ್‌ಚುಕ್ ಅವರನ್ನು ವಿವಿಧ ರಾಜಕೀಯ ಪಕ್ಷಗಳ ನಾಯಕರು ಭೇಟಿ ಮಾಡಿ, ಶಿಕ್ಷಣದ ಜವಾಬ್ದಾರಿತನದ ವಿಷಯವನ್ನು ಸಂಸತ್ತಿನಲ್ಲಿ ಎತ್ತುವುದಾಗಿ ಭರವಸೆ ನೀಡಬೇಕು. ಈ ಷರತ್ತು ಈಡೇರಿದರೆ ಸೋಮವಾರವೇ ಉಪವಾಸ ಸತ್ಯಾಗ್ರಹ ಕೊನೆಗೊಳಿಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.

‘ಚಲೋ ಸಂಸದ್’ ಪ್ರತಿಭಟನೆ ಶಾಂತಿಯುತವಾಗಿರಲಿ
ಇನ್ನೂ ಸೋಮವಾರ ನಡೆಯಲಿರುವ ‘ಚಲೋ ಸಂಸದ್’ (Chalo Sansad) ಪ್ರತಿಭಟನೆ ಕುರಿತು ಮಾತನಾಡಿ, ಪ್ರತಿಭಟನೆ ಸಂಪೂರ್ಣ ಶಾಂತಿಯುತವಾಗಿರಬೇಕು ಎಂದು ಸೋನಂ ವಾಂಕ್ಚುಕ್ ಸಂದೇಶ ನೀಡಿದ್ದಾರೆ. ಅಲ್ಲದೇ ಎಲ್ಲರೂ ಜವಾಬ್ದಾರಿಯಿಂದ ವರ್ತಿಸುವಂತೆ ಹೇಳಿದ್ದಾರೆಂದು ತಿಳಿಸಿದರು.
ಈ ಪ್ರತಿಭಟನೆ ಸಂಸತ್ತಿನ ಮಳೆಗಾಲದ ಅಧಿವೇಶನ ಆರಂಭವಾಗುವ ದಿನವೇ ನಡೆಯಲಿದ್ದು, ಅಧಿವೇಶನ ಆಗಸ್ಟ್ 13 ರ ವರೆಗೆ ಮುಂದುವರಿಯಲಿದೆ.
