ಬೆಂಗಳೂರು: ಕಸ್ತೂರಿ ರಂಗನ್ ವರದಿ (Kasturirangan Report) ಜಾರಿಗೆ ಕೇಂದ್ರ ಹೊರಡಿಸಿರುವ 7ನೇ ಕರಡು ಅಧಿಸೂಚನೆ ವಿರೋಧಿಸಿ ರಾಜ್ಯ ಸರ್ಕಾರ ಹಲವು ನಿರ್ಣಯಗಳನ್ನು ಕೈಗೊಂಡಿದೆ.
ಸರ್ಕಾರದ ನಿರ್ಣಯಗಳೇನು?
* ಪರಿಸರ ಸೂಕ್ಷ್ಮ ವಲಯ ವ್ಯಾಪ್ತಿಯಲ್ಲಿ ಕೇವಲ ಅಧಿಸೂಚಿತ ಅರಣ್ಯ ಪ್ರದೇಶಗಳು, ಇತರೆ ಅರಣ್ಯ ಪ್ರದೇಶಗಳು ಮಾತ್ರ ಸೇರಿಸಬೇಕು. ಈಗಾಗಲೇ ಮಂಜೂರಾದ ಪ್ರದೇಶ ಹೊರತುಪಡಿಸಬೇಕು.
* ಕೃಷಿ ಭೂಮಿ, ತೋಟಗಾರಿಕೆ/ಪ್ಲಾಂಟೇಶನ್ ಪ್ರದೇಶಗಳು, ಜನವಸತಿ ಮತ್ತು ಸಾರ್ವಜನಿಕ ಚಟುವಟಿಕೆ ಪ್ರದೇಶಗಳನ್ನು ಸೇರಿಸಬಾರದು.
* ಬಗರ್ ಹುಕುಂ, ಅರಣ್ಯ ಹಕ್ಕು, ಡೀಮ್ಡ್ ಫಾರೆಸ್ಟ್, ಭೂ ಮಂಜೂರಾತಿ, ಮೇಲ್ಮನವಿ ಮತ್ತು ನ್ಯಾಯಾಂಗ ಪ್ರಕರಣಗಳನ್ನು ಪರಿಗಣಿಸಬೇಕು.
* ತಜ್ಞರ ಸಮಿತಿಯಿಂದ ಭೌತಿಕವಾಗಿ ಅರಣ್ಯಗಡಿ, ಜನವಸತಿ, ಪರಿಸರ ಸೂಕ್ಷ್ಮ ಪ್ರದೇಶಗಳನ್ನು, ಜನವಸತಿ ಕೃಷಿ ಚಟುವಟಿಕೆ ಪ್ರದೇಶಗಳನ್ನು ಸರ್ವೆ ನಂಬರ್ವಾರು ಅಳತೆ ಮಾಡಿ ಪ್ರತ್ಯೇಕವಾಗಿ ಗುರುತಿಸಬೇಕು.
* ಪರಿಸರ ಸೂಕ್ಷ್ಮ ವಲಯದಿಂದ ರೈತರ ಹಾಗೂ ಕಾರ್ಮಿಕರ ಪರ್ಯಾಯ ಜೀವನೋಪಾಯ ಮತ್ತು ಆರ್ಥಿಕ ನೆರವನ್ನು ನೀಡಲು ಸೂಕ್ತ ಮಾರ್ಗಸೂಚಿ ರೂಪಿಸಬೇಕು.
* ಸರ್ಕಾರವು ನಿವೃತ್ತ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಮಿತಿ ರಚಿಸಲು ತೀರ್ಮಾನಿಸಿದೆ.
* ಈ ಸಮಿತಿಯಲ್ಲಿ ಕಂದಾಯ ಅಧಿಕಾರಿಗಳು, ಅರಣ್ಯಾಧಿಕಾರಿಗಳು, ರೈತ ಸಮುದಾಯದ ಪ್ರತಿನಿಧಿಗಳು, ಕೈಗಾರಿಕಾ ಉದ್ಯಮಗಳ ಪ್ರತಿನಿಧಿಗಳು, ಅರಣ್ಯ ಮತ್ತು ‘ಪರಿಸರಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಪರಿಣತಿ ಹೊಂದಿರುವ ಶೈಕ್ಷಣಿಕ ಸಂಸ್ಥೆಗಳ ತಜ್ಞರು/ವಿಜ್ಞಾನಿಗಳು ಇರಲಿದ್ದಾರೆ.
* ಕಸ್ತೂರಿ ರಂಗನ್ ವರದಿಯ ನ್ಯೂನತೆಗಳನ್ನು ಸರಿಪಡಿಸಿ ಸೂಕ್ತ ಮಾರ್ಪಾಡುಗಳನ್ನು ಸೂಚಿಸಲು ಕ್ರಮ ಕೈಗೊಳ್ಳಲಾಗುವುದು.
* ಭೌತಿಕವಾಗಿ ಸರ್ವೆ ನಂಬರ್ವಾರು ಅಳತೆಯನ್ನು ರಾಜ್ಯ ಸರ್ಕಾರದಿಂದ ಮಾಡಲು ನಿರ್ಧರಿಸಲಾಗಿದೆ.
* ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸುವ ಸಲುವಾಗಿ, ರಾಜ್ಯ ಸರ್ಕಾರವು ಭಾರತ ಸರ್ಕಾರಕ್ಕೆ ಒಂದು ವರ್ಷದ ಕಾಲಾವಕಾಶ ನೀಡುವಂತೆ ಮನವಿ ಮಾಡಲಿದೆ.
* ಸದರಿ ಅವಧಿಯವರೆಗೆ ಕರ್ನಾಟಕ ರಾಜ್ಯಕ್ಕೆ ಸಂಬಂಧಿಸಿದ ಅಧಿಸೂಚನೆಯನ್ನು ಸರ್ಕಾರವು ಅಂತಿಮಗೊಳಿಸಬಾರದು.
* ರಾಜ್ಯ ಸರ್ಕಾರವು ತನ್ನ ವರದಿಯನ್ನು ಸಲ್ಲಿಸಿದ ನಂತರ, ಭಾರತ ಸರ್ಕಾರವು ರಾಜ್ಯ ಸರ್ಕಾರದೊಂದಿಗೆ ಈ ವಿಷಯದ ಕುರಿತು ವಿವರವಾದ ಚರ್ಚೆ ನಡೆಸಿ, ನಂತರವೇ ಈ ವಿಷಯದಲ್ಲಿ ಅಂತಿಮ ನಿರ್ಧಾರವನ್ನು ಕೈಗೊಳ್ಳಬೇಕು.
* ಮುಂದುವರೆದು, ರಾಜ್ಯ ಮಟ್ಟದ ಸಮಿತಿಗೆ ಸಹಾಯ ಗ್ರಾಮ ಪಂಚಾಯಿತಿ ಮಟ್ಟದಲ್ಲಿಯೂ ಜನಪ್ರತಿನಿಧಿಗಳನ್ನೊಳಗೊಂಡ ಸಮಿತಿಗಳನ್ನು ಸಹ ರಚಿಸಲು ಮಾಡಲು ನಿರ್ಧರಿಸಿದೆ.
ಸದ್ಯದಲ್ಲೇ ಕೇಂದ್ರಕ್ಕೆ ಸರ್ವಪಕ್ಷ ನಿಯೋಗ ಕೊಂಡೊಯ್ಯಲು ತೀರ್ಮಾನಿಸಲಾಗಿದೆ ಎಂದು ಸದನದಲ್ಲಿ ಸಿಎಂ ಡಿ.ಕೆ.ಶಿವಕುಮಾರ್ ಘೋಷಿಸಿದ್ದಾರೆ.

