ಕಾರವಾರ: ಅತಿಕ್ರಮಣ ಜಾಗದ ಮನೆಗಳನ್ನು ಇ-ಸ್ವತ್ತು 2.0 ತಂತ್ರಾಂಶದಿಂದ ಕೈಬಿಡುವ ರಾಜ್ಯ ಸರ್ಕಾರದ ನಿರ್ಧಾರ ಖಂಡಿಸಿ ಶಿರಸಿಯ ಇಸಳೂರಿನಲ್ಲಿ ಗ್ರಾಮ ಪಂಚಾಯಿತಿ ಮುಂದೆ ಬಿಜೆಪಿ ವತಿಯಿಂದ ನಮ್ಮ ಮನೆ ನಮ್ಮ ಹಕ್ಕು ಜನಾಗ್ರಹ ಆಂದೋಲನದ ಪ್ರತಿಭಟನೆ ನಡೆಯಿತು.
ಆಂದೋಲನದ ನೇತೃತ್ವ ವಹಿಸಿದ್ದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ (Vishweshwar Hegde Kageri), ಬಡವರ ಹಕ್ಕು ಕಸಿಯುವ ಈ ಜನವಿರೋಧಿ ಆದೇಶ ಹಿಂಪಡೆಯದಿದ್ದರೆ ವಿಧಾನಸೌಧ ಮುತ್ತಿಗೆ ಹಾಕುವುದಾಗಿ ಎಚ್ಚರಿಸಿದರು.
ಗ್ರಾಮೀಣ ಭಾಗದ ಬಡವರ ಮತ್ತು ಸಾಮಾನ್ಯ ಜನರ ಆಸ್ತಿ ಹಕ್ಕನ್ನು ಕಸಿದುಕೊಳ್ಳುವ ಸರ್ಕಾರದ ಧೋರಣೆ ಖಂಡನೀಯ. ಜನರ ಸ್ವಂತ ಮನೆ ಹಾಗೂ ನಿವೇಶನಗಳ ರಕ್ಷಣೆಗಾಗಿ ಬಿಜೆಪಿ ನಿರಂತರವಾಗಿ ಹೋರಾಟ ನಡೆಸಲಿದೆ. ಸಾರ್ವಜನಿಕರ ಹಕ್ಕುಗಳನ್ನು ದಮನ ಮಾಡಲು ಹೊರಟಿರುವ ಸರ್ಕಾರದ ಜನವಿರೋಧಿ ನೀತಿಗಳ ವಿರುದ್ಧ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ಎಚ್ಚರಿಸಿದರು.

