ಹಾಸನ: ತಾಯಿ ಚೆನ್ನಮ್ಮ ಅವರ ನಿಧನದ ನೋವಿನಲ್ಲಿ ಮಾಜಿ ಸಚಿವ ಹೆಚ್.ಡಿ.ರೇವಣ್ಣ ( H D Revanna) ಕಣ್ಣೀರಿಡುತ್ತಲೇ ಅಂತ್ಯಕ್ರಿಯೆ ನಡೆಯುವ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಈ ವೇಳೆ ತಾಯಿಯನ್ನು ನೆನೆದು ಬಿಕ್ಕಿ ಬಿಕ್ಕಿ ಅತ್ತರು.
ತಾಯಿ ಬಗ್ಗೆ ಮಾತನಾಡುತ್ತಾ ಕಣ್ಣೀರಿಟ್ಟ ಅವರು, ನನ್ನ ದೇವತೆಯನ್ನೇ ಕಳೆದುಕೊಂಡೆ… ನನ್ನ ಮನೆಯೇ ಹೋಯಿತು ಎಂದು ದುಃಖ ವ್ಯಕ್ತಪಡಿಸಿದರು.
ನನಗಾಗಿ ಅವರು ಆ್ಯಸಿಡ್ ಹಾಕಿಸಿಕೊಂಡರು. 25 ವರ್ಷ ನೋವು ಅನುಭವಿಸಿದ್ದರು. ಆದರೂ ಯಾರಿಗೂ ಅನ್ಯಾಯ ಮಾಡಲಿಲ್ಲ. ಮನೆಗೆ ಬಂದವರನ್ನು ಬರಿಗೈಯಲ್ಲಿ ಕಳುಹಿಸುತ್ತಿರಲಿಲ್ಲ. ಊಟ ಮಾಡಿಸಿ, ಸೀರೆ, ಕುಂಕುಮ ಕೊಟ್ಟು ಕಳುಹಿಸುತ್ತಿದ್ದರು. ಓದುವ ಮಕ್ಕಳಿಗೆ ಊಟ ಹಾಕಿದ್ದಾರೆ. ನಿನ್ನೆ ಬೆಳಿಗ್ಗೆ ವೈದ್ಯರು 30 ಶೇಕಡಾ ಗುಣಮುಖರಾಗಿದ್ದಾರೆ ಎಂದಿದ್ದರು. ನಾನು ತಿರುಪತಿಗೆ ಹೋಗಿ ಬಂದು ಕೊನೆಯದಾಗಿ ಮಾತನಾಡಿಸಿದ್ದೆ. ಈಗ ಅವರನ್ನು ಕಳೆದುಕೊಂಡಿದ್ದೇನೆ ಎಂದು ಹೇಳುತ್ತಾ ಕಣ್ಣೀರಿಟ್ಟರು. ಇದನ್ನೂ ಓದಿ: ಚೆನ್ನಮ್ಮ ನಿಧನ – ಇಂದು, ನಾಳೆ ಹಾಸನ ಜಿಲ್ಲೆಯಾದ್ಯಂತ ಮದ್ಯ ಮಾರಾಟ ನಿಷೇಧ
ಶೃಂಗೇರಿ ಶ್ರೀಗಳು ಕೂಡ ಚೆನ್ನಮ್ಮ ಅವರನ್ನು ಅಪಾರವಾಗಿ ಗೌರವಿಸುತ್ತಿದ್ದರು ಎಂದು ನೆನಪಿಸಿಕೊಂಡ ರೇವಣ್ಣ, ಅವರು ಯಾರಿಗೂ ಕೆಡುಕು ಬಯಸಿದವರಲ್ಲ. ಎಲ್ಲರನ್ನೂ ಒಂದೇ ರೀತಿಯಲ್ಲಿ ನೋಡುತ್ತಿದ್ದರು. ಅಂತಹ ಮಹಾತಾಯಿಯನ್ನು ಕಳೆದುಕೊಂಡೆ ಎಂದು ಭಾವುಕರಾದರು.ಇದನ್ನೂ ಓದಿ: ನಾವು ದಾರಿ ತಪ್ಪಿದಾಗ ತಿದ್ದಿ ಸರಿದಾರಿಗೆ ತರುತ್ತಿದ್ದರು: ತಾಯಿ ನೆನೆದು ಕಣ್ಣೀರಿಟ್ಟ ಹೆಚ್‌ಡಿಕೆ
