ಬೆಂಗಳೂರು: ಬಿಡದಿ ಟೌನ್‌ಶಿಪ್ ಯೋಜನೆ (Bidadi Township Project) ಸಂಪೂರ್ಣವಾಗಿ ಹಣ ಮಾಡುವ ಯೋಚನೆಯಾಗಿದೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ (H.D. Kumaraswamy) ಆರೋಪಿಸಿದರು.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಬಿಡದಿ ಟೌನ್‌ಶಿಪ್ ನಾಡಿನ ಹಿತಾಸಕ್ತಿಗಿಂತ ಲ್ಯಾಂಡ್ ಗ್ರ‍್ಯಾಬರ್ಸ್ ಹಾಗೂ ರಿಯಲ್ ಎಸ್ಟೇಟ್‌ಗಾಗಿ ಇಟ್ಟಿರುವ ಕಾರ್ಯಕ್ರಮವಾಗಿದೆ. ಬೆಂಗಳೂರು ಅಭಿವೃದ್ಧಿಯ ದೃಷ್ಟಿಯಿಂದ ಇದು ಉಪಯೋಗವಾಗುವುದಿಲ್ಲ. ಇದು ಕುಮಾರಸ್ವಾಮಿ ಅವರ ಕೂಸು ಎಂದು ಮುಖ್ಯಮಂತ್ರಿ ಹೇಳುತ್ತಿದ್ದಾರೆ. 2006 ಎಲ್ಲಿ, 2026 ಎಲ್ಲಿ. 20 ವರ್ಷಗಳಲ್ಲಿ ಎಷ್ಟು ಅಭಿವೃದ್ಧಿಯಾಗಿದೆ. ಯಾವುದೇ ಯೋಜನೆ ಕೈಗೊಳ್ಳುವ ಮೊದಲು ರೈತರ ಪರಿಸ್ಥಿತಿಯ ಬಗ್ಗೆಯೂ ಯೋಚನೆ ಮಾಡಬೇಕು ಎಂದು ಹೇಳಿದರು.
ಬೆಂಗಳೂರು ಸುತ್ತಮುತ್ತ ಅರ್ಕಾವತಿ ಬಡಾವಣೆಗೆ 3 ಸಾವಿರ ಎಕರೆ ಭೂಮಿಯನ್ನು ಅಧಿಸೂಚನೆ ಮಾಡಲಾಗಿತ್ತು. ಬಳಿಕ ಅದರಲ್ಲಿ 1 ಸಾವಿರ ಎಕರೆ ಭೂಮಿಯನ್ನು ಕೈಬಿಡಲಾಗಿತ್ತು. ಇವೆಲ್ಲವೂ ಕಣ್ಣಮುಂದೆಯೇ ನಡೆದಿವೆ ಎಂದು ತಿಳಿಸಿದರು.
ನರೇಂದ್ರ ಮೋದಿಯವರೇ ಮಾಡಿ ಎಂದಿದ್ದಾರೆ ಎಂದು ಹೇಳುತ್ತಾರೆ. ಆದರೆ, ನರೇಂದ್ರ ಮೋದಿಯವರು ಮಾಡಿದ್ದು ಎಲ್ಲಿ? ಅದು ಭೂಕಂಪದಿಂದ ಸಂಪೂರ್ಣವಾಗಿ ನಾಶವಾಗಿದ್ದ ಪ್ರದೇಶ. ಅಂತಹ ಪ್ರದೇಶದಲ್ಲಿ ಮಾಡಿದರೆ ಪರವಾಗಿಲ್ಲ. ಆದರೆ ಇಲ್ಲಿ ತೋಟಗಳಿವೆ, ಹೈನುಗಾರಿಕೆ ನಡೆಯುವ ಭೂಮಿಯಿದೆ. ಈ ವಿಚಾರವನ್ನು ಮೋದಿಯವರಿಗೆ ಹೇಳಿದ್ದಾರಾ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಕಿಚ್ಚು ಹೆಚ್ಚಿಸಿದ ಬಿಡದಿ ಟೌನ್‌ಶಿಪ್ ಜಟಾಪಟಿ – ಜೂನ್ 22ರಂದು ಹೋರಾಟಕ್ಕೆ ರೈತರ ಸಿದ್ಧತೆ
ಅವರಿಬ್ಬರು ಒನ್ ಟು ಒನ್ ಮಾತನಾಡಿದ್ದಾರೆ. ಏನು ಮಾತನಾಡಿದ್ದಾರೆ ಎಂಬುದು ಯಾರಿಗೂ ಗೊತ್ತಿಲ್ಲ. ಅವರು ಮುಖ್ಯಮಂತ್ರಿ ಇದ್ದಾರೆ, ಏನು ಬೇಕಾದರೂ ಮಾಡುವ ಉದ್ಧಟತನ ಇದೆ. ಆದರೆ ರೈತರ ವಿಚಾರದಲ್ಲಿ ಗಮನ ಇರಬೇಕು ಎಂದು ಎಚ್ಚರಿಸಿದರು.
ಈ ವಿಷಯದಲ್ಲಿ ನಾನೇಕೆ ರಾಜಕೀಯ ಮಾಡಲಿ? ನಾನು ಆರು ಟೌನ್‌ಶಿಪ್‌ಗಳನ್ನು ಮಾಡಲು ಮುಂದಾದಾಗ ಇವರೇನು ಮಾಡಿದರು? ಹೆಚ್.ಕೆ.ಪಾಟೀಲ್ ಅಧ್ಯಕ್ಷತೆಯಲ್ಲಿ ಸಮಿತಿ ಮಾಡಿ, ಕುಮಾರಸ್ವಾಮಿ ದುಡ್ಡು ಹೊಡೆಯಲು ಈ ಯೋಜನೆ ಮಾಡಿದ್ದಾರೆ ಎಂದು ವಿರೋಧ ಮಾಡಿದ್ದರು. ಆಗ ಯಾಕೆ ಮಾಡಿದ್ದರು ಎಂದು ಪ್ರಶ್ನಿಸಿದರು.
ಕಾನೂನಿನಲ್ಲಿ ಏನು ಹೋರಾಟ ಮಾಡಬೇಕೋ ಮಾಡುತ್ತೇವೆ. ರೈತರಿಗೆ ನ್ಯಾಯ ಕೊಡಿಸಲಿದ್ದೇವೆ. ರೈತರ ಪರ ನಿಲ್ಲುವುದು ಜನಪ್ರತಿನಿಧಿಗಳ ಕರ್ತವ್ಯ. ಆ ಕೆಲಸವನ್ನು ನಾವು ಮಾಡುತ್ತೇವೆ ಎಂದು ಹೇಳುವ ಮೂಲಕ ಕುಮಾರಸ್ವಾಮಿ ರೈತರ ಪರ ಭರವಸೆಯ ಮಾತುಗಳನ್ನಾಡಿದರು. ಇದನ್ನೂ ಓದಿ: ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ – ನರಸಿಂಹ ಕೊಲೆ ಕೇಸ್ ಆರೋಪಿ ಕಾಲಿಗೆ ಗುಂಡೇಟು
