– 600 ರೂ. ಔಷಧಿಗೆ 6,000 ರೂ. ಬೆಲೆ ನಿಗದಿ
ರಾಮನಗರ: ಜಿಲ್ಲೆಯ ಬೆಂಗಳೂರು ದಕ್ಷಿಣ (Bengaluru South) ತಾಲೂಕಿನ ಸಿ.ಕೆ.ತಾಂಡ್ಯ ಬಳಿಯ ಫಾರ್ಮ್‌ಹೌಸ್ ಒಂದರಲ್ಲಿ ಯಾವುದೇ ಪರವಾನಗಿ ಇಲ್ಲದೇ ನಡೆಯುತ್ತಿದ್ದ ನಕಲಿ ಔಷಧಿಗಳ (Fake Medicine) ಮರುಪ್ಯಾಕಿಂಗ್ ದಂಧೆ ಬೆಳಕಿಗೆ ಬಂದಿದ್ದು, ಅಧಿಕಾರಿಗಳು 5 ಕೋಟಿ ರೂ. ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.
ಬೆಂಗಳೂರಿನಲ್ಲಿ ಆಹಾರ ಸುರಕ್ಷತೆ ಮತ್ತು ಔಷಧಿ ಆಡಳಿತ ಇಲಾಖೆ ಅತಿದೊಡ್ಡ ಕಾರ್ಯಾಚರಣೆ ನಡೆಸಿದ್ದು, 30ಕ್ಕೂ ಹೆಚ್ಚು ಅಧಿಕಾರಿಗಳು ಜಂಟಿ ದಾಳಿ ನಡೆಸಿದ್ದಾರೆ. ಪ್ರಶಾಂತ್ ಎಂಬ ವ್ಯಕ್ತಿ ಸ್ಥಳೀಯರಿಂದ ಫಾರ್ಮ್‌ಹೌಸ್ ಅನ್ನು ಲೀಸ್‌ಗೆ ಪಡೆದು, ಕಳೆದ ಒಂದು ವರ್ಷದಿಂದ ಈ ನಕಲಿ ದಂಧೆಯಲ್ಲಿ ತೊಡಗಿದ್ದ. ತೆಲಂಗಾಣ ಮತ್ತು ಹಿಮಾಚಲ ಪ್ರದೇಶ ಮೂಲದಿಂದ ಕಡಿಮೆ ಮೌಲ್ಯದ ಔಷಧಿಗಳನ್ನು ಆಮದು ಮಾಡಿಕೊಳ್ಳುತ್ತಿದ್ದ ಆರೋಪಿ, ಹಲವು ಬಹುರಾಷ್ಟ್ರೀಯ ಕಂಪನಿಗಳ ಲೇಬಲ್‌ಗಳನ್ನು ಬಳಸಿ ಮರುಪ್ಯಾಕಿಂಗ್ ಮಾಡುತ್ತಿದ್ದ. ಇದನ್ನೂ ಓದಿ: ದೆಹಲಿಯಲ್ಲಿ ವಿದ್ಯಾರ್ಥಿಗಳ ಮೇಲೆ ಲಾಠಿಚಾರ್ಚ್ – ಸುಪ್ರೀಂ ಸಮಿತಿಯಿಂದ ತನಿಖೆ
ಕೇವಲ 600 ರೂ. ಮೌಲ್ಯದ ಔಷಧಿಗೆ ಮರುಪ್ಯಾಕಿಂಗ್ ಮಾಡಿದ ಬಳಿಕ 6,000 ರೂ. ಬೆಲೆಯ ಔಷಧಿಯ ಲೇಬಲ್ ಅಂಟಿಸಿ ಮಾರಾಟ ಮಾಡುತ್ತಿದ್ದ. ಸ್ಥಳೀಯ ಬೀಟ್ ಪೊಲೀಸರ ಮಾಹಿತಿ ಮೇರೆಗೆ ಆರೋಗ್ಯ ಇಲಾಖೆ ಆಯುಕ್ತ ಶ್ರೀನಿವಾಸ್ ಹಾಗೂ ರಾಮನಗರ ಎಸ್ಪಿ ಶ್ರೀನಿವಾಸ್ ಗೌಡ ಅವರ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದೆ.
ದಾಳಿ ವೇಳೆ ಸುಮಾರು 5 ಕೋಟಿ ರೂ. ಮೌಲ್ಯದ ನಕಲಿ ಔಷಧಿಗಳು, ಲೇಬಲ್‌ಗಳು, ಅವಧಿ ಮುಗಿದ ಔಷಧಿಗಳು, ಖಾಲಿ ಬಾಟಲ್‌ಗಳು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಆಹಾರ ಸುರಕ್ಷತಾ ಅಧಿಕಾರಿಗಳಿಂದ ತನಿಖೆ ಮುಂದುವರಿದಿದೆ ಎಂದು ರಾಮನಗರ ಎಸ್ಪಿ ಶ್ರೀನಿವಾಸ್ ಗೌಡ ಅವರು ಮಾಹಿತಿ ನೀಡಿದ್ದಾರೆ.ಇದನ್ನೂ ಓದಿ: ಅನುಪಮಾ ಬ್ರೇಕಪ್ ಸತ್ಯ ಬಿಚ್ಚಿಟ್ಟ ಬೆನ್ನಲ್ಲೇ ಎಕ್ಸ್-ಬಾಯ್‌ಫ್ರೆಂಡ್ ಹೇಳಿದ್ದೇನು?

