ನವದೆಹಲಿ: ದೆಹಲಿಯಲ್ಲಿ ನಡೆದ ಸಂಸತ್ ಚಲೋ(Sansad Chalo) ಪ್ರತಿಭಟನೆಯ ವೇಳೆ ವಿದ್ಯಾರ್ಥಿಗಳ ಮೇಲೆ ಪೊಲೀಸರು ನಡೆಸಿದ್ದಾರೆನ್ನಲಾದ ದೌರ್ಜನ್ಯದ ಆರೋಪಗಳ ತನಿಖೆಗೆ ನಿವೃತ್ತ ನ್ಯಾಯಾಧೀಶರು, ಮಾಜಿ ಡಿಜಿಪಿ, ಸಿಬಿಐ ಮಾಜಿ ನಿರ್ದೇಶಕರು ಸೇರಿದಂತೆ ಪ್ರಮುಖರನ್ನು ಒಳಗೊಂಡ ಉನ್ನತಾಧಿಕಾರ ಸಮಿತಿಯನ್ನು ರಚಿಸುವುದಾಗಿ ಸುಪ್ರೀಂ ಕೋರ್ಟ್ (Suprme Court) ತಿಳಿಸಿದೆ.
ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿಗಳಾದ ಜಾಯ್‌ಮಾಲ್ಯ ಬಾಗ್ಚಿ ಮತ್ತು ವಿ. ಮೋಹನಾ ಅವರನ್ನೊಳಗೊಂಡ ಪೀಠವು ಈ ಕುರಿತು ಮಾಹಿತಿ ನೀಡಿದ್ದು, ಸಮಿತಿಗೆ ಸೇರಿಸಬೇಕಾದ ಇತರೆ ಸದಸ್ಯರ ಬಗ್ಗೆ ವಿವಿಧ ಪಕ್ಷಗಳಿಂದ ಸಲಹೆಗಳನ್ನು ಸ್ವೀಕರಿಸಿದ ನಂತರ ಬುಧವಾರ ಅಧಿಕೃತ ಆದೇಶ ಹೊರಡಿಸಲಾಗುವುದು ಎಂದು ಹೇಳಿದೆ.
ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಸತ್ ಚಲೋ ಮೆರವಣಿಗೆ ವೇಳೆ ನಡೆದ ಹಿಂಸಾಚಾರದ ವಿಡಿಯೋ ತುಣುಕುಗಳು ಮತ್ತು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆಗಾಗಿ ಈ ಉನ್ನತಾಧಿಕಾರ ಸಮಿತಿಗೆ ಹಸ್ತಾಂತರಿಸುವಂತೆ ನಿರ್ದೇಶನ ನೀಡುವುದಾಗಿ ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ಜೊತೆಗೆ ಪ್ರತಿಭಟನಾ ಮೆರವಣಿಗೆಯ ಸಂದರ್ಭದಲ್ಲಿ ಮಹಿಳಾ ಪ್ರತಿಭಟನಾಕಾರರ ಮೇಲೆ ನಡೆದಿದೆ ಎನ್ನಲಾದ ದೌರ್ಜನ್ಯ ಮತ್ತು ಅವರ ದೂರುಗಳ ಬಗ್ಗೆಯೂ ಈ ಸಮಿತಿಯು ಪರಿಶೀಲನೆ ನಡೆಸಲಿದೆ. ಇದನ್ನೂ ಓದಿ: ವಿದೇಶಿ ಆರೋಪಿಗಳಿಗೆ ಜಾಮೀನು: ಸುಪ್ರೀಂಕೋರ್ಟ್‌ನಿಂದ 13 ಕಠಿಣ ನಿರ್ದೇಶನ
ವಿದ್ಯಾರ್ಥಿ ಪ್ರತಿಭಟನಾಕಾರರ ವಿರುದ್ಧ ದಾಖಲಾಗಿರುವ ಹಾಗೂ ರದ್ದುಗೊಳಿಸಬಹುದಾದ ಎಫ್‌ಐಆರ್‌ಗಳ ವಿವರಗಳನ್ನು ಸಲ್ಲಿಸುವಂತೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರಿಗೆ ನ್ಯಾಯಪೀಠ ಸೂಚಿಸಿದೆ. ಸಂವಿಧಾನದ 142ನೇ ವಿಧಿಯಡಿಯಲ್ಲಿನ ತನ್ನ ವಿಶೇಷ ಅಧಿಕಾರವನ್ನು ಬಳಸಿ ಪ್ರಕರಣಗಳನ್ನು ರದ್ದುಗೊಳಿಸುವ ಸುಳಿವನ್ನು ನ್ಯಾಯಾಲಯ ನೀಡಿದೆ.
ವಿದ್ಯಾರ್ಥಿಗಳು ಕ್ಷಮೆಯಾಚಿಸದೆ ಪ್ರಕರಣಗಳನ್ನು ರದ್ದುಗೊಳಿಸಬಾರದು ಎಂದು ವಾದಿಸಿದ ವಕೀಲರೊಬ್ಬರಿಗೆ ಉತ್ತರಿಸಿದ ಪೀಠ, “ಇದು ವಿದ್ಯಾರ್ಥಿಗಳ ಭವಿಷ್ಯ ಮತ್ತು ಜೀವನಕ್ಕೆ ಸಂಬಂಧಿಸಿದ ವಿಚಾರ. ಸಂವಿಧಾನದ 19ನೇ ವಿಧಿಯ ಅಡಿಯಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಭಟನೆ ಮಾಡುವ ಹಕ್ಕಿದೆ,” ಎಂದು ಖಡಕ್ ಆಗಿ ಹೇಳಿದೆ.
ಜುಲೈ 20ರ ಪ್ರತಿಭಟನೆಯಲ್ಲಿ ಈ ಹಿಂದೆ ಗಂಭೀರ ಅಪರಾಧಗಳಲ್ಲಿ ಭಾಗಿಯಾಗಿದ್ದ ಸುಮಾರು 2,800 ಕ್ಕೂ ಹೆಚ್ಚು ಸಮಾಜಘಾತುಕ ಶಕ್ತಿಗಳು ಹಿಂಸಾಚಾರಕ್ಕೆ ಕಾರಣವೆಂದು ಪೊಲೀಸರು ಗುರುತಿಸಿದ್ದಾರೆ ಎಂದು ಸಾಲಿಸಿಟರ್ ಜನರಲ್ ಮೆಹ್ತಾ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸುಪ್ರೀಂ ಕೋರ್ಟ್, ಗಂಭೀರ ಅಪರಾಧ ಹಿನ್ನೆಲೆ ಇಲ್ಲದ ವಿದ್ಯಾರ್ಥಿಗಳ ಮೇಲಿನ ಎಫ್‌ಐಆರ್‌ಗಳನ್ನು ಕಾನೂನು ಪ್ರಕಾರ ಕೈಬಿಡಬಹುದು ಅಥವಾ ಮುಕ್ತಾಯಗೊಳಿಸಬಹುದು ಎಂದು ಸ್ಪಷ್ಟಪಡಿಸಿದೆ.
ಕೇವಲ ಪ್ರತಿಭಟನೆ ನಡೆದಿದೆ ಎಂಬ ಕಾರಣಕ್ಕೆ ಪೊಲೀಸರ ಅತಿಯಾದ ಬಲಪ್ರಯೋಗ ಅಥವಾ ಲಾಠಿ ಚಾರ್ಜ್ ಅನ್ನು ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ. ಶಾಂತಿಯುತ ಪ್ರತಿಭಟನೆ ಸಾಂವಿಧಾನಿಕ ಹಕ್ಕು ಎಂದು ನ್ಯಾಯಾಲಯ ಪುನರುಚ್ಚರಿಸಿದೆ.

