ನವದೆಹಲಿ: ಮಾದಕ ವಸ್ತುಗಳ ನಿಯಂತ್ರಣ ಕಾಯ್ದೆಯಡಿ ದಾಖಲಿಸಿದ ಪ್ರಕರಣಗಳಲ್ಲಿ ಆರೋಪಿಯಾಗಿರುವ ವಿದೇಶಿ ಪ್ರಜೆಗಳಿಗೆ ಜಾಮೀನು ನೀಡುವ ಸಂದರ್ಭದಲ್ಲಿ ಮತ್ತಷ್ಟು ಕಟ್ಟುನಿಟ್ಟಿನ ಪರಿಶೀಲನೆ ನಡೆಸುವಂತೆ ಸುಪ್ರೀಂ ಕೋರ್ಟ್ (Supreme Court) ಸೂಚಿಸಿದೆ. ಈ ಸಂಬಂಧ 13 ನಿರ್ದೇಶನಗಳನ್ನು ನೀಡಿದೆ.
ನ್ಯಾಯಮೂರ್ತಿಗಳಾದ ಸಂಜಯ್ ಕರೋಲ್ ಮತ್ತು ಅಗಸ್ಟಿನ್ ಜಾರ್ಜ್ ಮಸಿಹ್ ಅವರ ಪೀಠ ಈ ನಿರ್ದೇಶನಗಳನ್ನು ನೀಡಿದೆ. ವಿದೇಶಿ ಆರೋಪಿಗಳಿಗೆ ಜಾಮೀನು ನೀಡುವ ಮೊದಲು ಆರೋಪಿ ಹಾಗೂ ಜಾಮೀನುದಾರರ ಹಿನ್ನೆಲೆ, ವಿಳಾಸ, ಆಸ್ತಿ ಮತ್ತು ಹಣಕಾಸು ವಿವರಗಳನ್ನು ಸಮರ್ಪಕವಾಗಿ ಪರಿಶೀಲಿಸಬೇಕು ಎಂದು ಕೋರ್ಟ್ ಸ್ಪಷ್ಟಪಡಿಸಿದೆ. ಇದನ್ನೂ ಓದಿ:ಮರ ಣದಂಡನೆ: ಗಲ್ಲು ಶಿಕ್ಷೆ ಬದಲು ನೋವುರಹಿತ ಪರ್ಯಾಯ ವಿಧಾನಕ್ಕೆ ಸುಪ್ರೀಂ ಕೋರ್ಟ್ ನಕಾರ
ಸುಪ್ರೀಂಕೋರ್ಟ್ 13 ನಿರ್ದೇಶನಗಳು:
- ವಿದೇಶಿ ಆರೋಪಿಯ ಪಾಸ್‌ಪೋರ್ಟ್‌ನ್ನು ವಿಚಾರಣಾ ನ್ಯಾಯಾಲಯಕ್ಕೆ ಒಪ್ಪಿಸಬೇಕು.
- ವಿದೇಶ ಪ್ರಯಾಣಕ್ಕೆ ನ್ಯಾಯಾಲಯದ ಪೂರ್ವಾನುಮತಿ ಕಡ್ಡಾಯ.
- ಜಾಮೀನಿನ ಮೇಲೆ ಬಿಡುಗಡೆಯಾದ ಒಂದು ವಾರದೊಳಗೆ Foreigners Regional Registration Office (FRRO) ನಲ್ಲಿ ನೋಂದಣಿ ಮಾಡಿಕೊಳ್ಳಬೇಕು.
- ಈ ಬಗ್ಗೆ ತನಿಖಾಧಿಕಾರಿ ಹಾಗೂ ನ್ಯಾಯಾಲಯಕ್ಕೆ ಲಿಖಿತವಾಗಿ ಮಾಹಿತಿ ನೀಡಬೇಕು ಎಂದು ಕೋರ್ಟ್ ಹೇಳಿದೆ. ಜಾಮೀನಿಗೆ ಸಾಮಾನ್ಯವಾಗಿ ಇಬ್ಬರು ಜಾಮೀನುದಾರರು ಕಡ್ಡಾಯ. ಇಬ್ಬರನ್ನು ಒದಗಿಸಲು ಸಾಧ್ಯವಾಗದಿದ್ದರೆ ಕಾರಣವನ್ನು ದಾಖಲಿಸಿ ನ್ಯಾಯಾಲಯ ವಿನಾಯಿತಿ ನೀಡಬಹುದು.
- ಜಾಮೀನುದಾರರ ಪರಿಶೀಲನೆಯನ್ನು ಮೂರು ದಿನಗಳೊಳಗೆ ಪೂರ್ಣಗೊಳಿಸಬೇಕು. ಪರಿಶೀಲನಾ ವರದಿ ಬಂದ ಬಳಿಕವೇ ಆರೋಪಿಯನ್ನು ಬಿಡುಗಡೆ ಮಾಡಬೇಕು.
- ಆರೋಪಿಯ ಭಾರತದಲ್ಲಿನ ವಾಸಸ್ಥಳ ಮತ್ತು ಸಂಪರ್ಕ ವಿವರಗಳನ್ನು ಜಾಮೀನು ಆದೇಶದ ಮೂರು ದಿನಗಳೊಳಗೆ ಮತ್ತೊಮ್ಮೆ ಸ್ಥಳ ಪರಿಶೀಲನೆ ಮೂಲಕ ಖಚಿತಪಡಿಸಿಕೊಳ್ಳಬೇಕು ಎಂದು ನ್ಯಾಯಲಯ ಆದೇಶಿಸಿದೆ.
- ಭಾರತದಲ್ಲಿನ ಆದಾಯ ಅಥವಾ ಹಣದ ಮೂಲ ಹಾಗೂ ಇಲ್ಲಿರುವ ಬ್ಯಾಂಕ್ ಖಾತೆಗಳ ವಿವರಗಳನ್ನು ಒಳಗೊಂಡ ಅಫಿಡವಿಟ್ ಸಲ್ಲಿಸಬೇಕು.
- ಆರೋಪಿಯ ವಿರುದ್ಧದ ಪ್ರಕರಣದ ಕುರಿತು ತನಿಖಾಧಿಕಾರಿ ಸಂಬಂಧಪಟ್ಟ ರಾಯಭಾರ ಕಚೇರಿಗೆ ಅಧಿಕೃತವಾಗಿ ಮಾಹಿತಿ ನೀಡಬೇಕು.
- ವಿದೇಶಿ ಪ್ರಜೆಗಳಿಗೆ ಸಂಬಂಧಿಸಿದ NDPS ಪ್ರಕರಣಗಳಲ್ಲಿ ಆರೋಪಿಗಳು ಮತ್ತು ಜಾಮೀನುದಾರರ ವಿವರಗಳನ್ನು ಒಳಗೊಂಡ ಕೇಂದ್ರೀಕೃತ ಡೇಟಾಬೇಸ್ ರೂಪಿಸಬೇಕು. ಜಾಮೀನುದಾರ ನಕಲಿ ಎಂದು ನಂತರ ಪತ್ತೆಯಾದರೆ, ಪರಿಶೀಲನೆಯಲ್ಲಿ ಭಾಗಿಯಾದ ಪೊಲೀಸ್, ನ್ಯಾಯಾಲಯದ ಸಿಬ್ಬಂದಿ ಅಥವಾ ಕಂದಾಯ ಅಧಿಕಾರಿಗಳ ವಿರುದ್ಧ ಇಲಾಖಾ ವಿಚಾರಣೆ ನಡೆಸಬೇಕು.
- ವಿದೇಶಿ ಆರೋಪಿಗೆ ಜಾಮೀನುದಾರರಾಗುವ ವ್ಯಕ್ತಿಯ ಆಸ್ತಿಯ ಮೇಲೆ ಬಾಂಡ್ ಮೊತ್ತಕ್ಕೆ ಸಮನಾದ ಲಿಯನ್ ದಾಖಲಿಸಬೇಕು.
- ಜಾಮೀನು ಷರತ್ತು ಉಲ್ಲಂಘನೆಯಾದರೆ ನ್ಯಾಯಾಲಯ ಆ ಮೊತ್ತವನ್ನು ವಸೂಲಿ ಮಾಡಬಹುದು.
- ಆಸ್ತಿ ಮತ್ತು ಹಣಕಾಸು ದಾಖಲೆಗಳ ತ್ವರಿತ ಪರಿಶೀಲನೆಗಾಗಿ ಹೈಕೋರ್ಟ್‌ಗಳ ಐಟಿ ಸಮಿತಿಗಳು ಡಿಜಿಟಲ್ ಪೋರ್ಟಲ್‌ಗಳನ್ನು ರೂಪಿಸಬೇಕು.
- ಕರ್ನಾಟಕ ಹೈಕೋರ್ಟ್‌ನಲ್ಲಿ ಈಗಾಗಲೇ ಅಳವಡಿಸಿರುವ ಮಾದರಿಯನ್ನು ಪರಿಗಣಿಸಬಹುದು. BNSS Form 47 ನಂತರ ಹೊಸ Form 47A ಸೇರಿಸಿ, ಸುಪ್ರೀಂ ಕೋರ್ಟ್ ರೂಪಿಸಿರುವ ಜಾಮೀನುದಾರರ ಹೊಣೆಗಾರಿಕೆಯ ಮಾದರಿಯನ್ನು ಅಳವಡಿಸಬೇಕು.
ನಕಲಿ ಜಾಮೀನುದಾರರಿಂದ ಪ್ರಕರಣ ತಿರುವು
ಈ ಪ್ರಕರಣವು ಮುಂಬೈ ವಿಮಾನ ನಿಲ್ದಾಣದಲ್ಲಿ ಸುಮಾರು 5 ಕೆ.ಜಿ. ಹೆರಾಯಿನ್ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದೆ. ವಿದೇಶಿ ಪ್ರಜೆ ಚಿಡಿಬೆರೆ ಕಿಂಗ್ಸ್ಲಿ ನವ್ಚಾರಾ ಅವರಿಗೆ ಬಾಂಬೆ ಹೈಕೋರ್ಟ್ ಜಾಮೀನು ನೀಡಿತ್ತು. ಬಳಿಕ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿತ್ತು. ಸುಪ್ರೀಂ ಕೋರ್ಟ್ ಜಾಮೀನು ಆದೇಶಕ್ಕೆ ತಡೆ ನೀಡಿ ಆರೋಪಿಯನ್ನು ಬಂಧಿಸುವಂತೆ ಸೂಚಿಸಿತ್ತು. ಆದರೆ ಲುಕ್‌ಔಟ್ ಸರ್ಕ್ಯುಲರ್ ಹೊರಡಿಸಿದ್ದರೂ ಆರೋಪಿಯನ್ನು ಪತ್ತೆಹಚ್ಚಲು ಸಾಧ್ಯವಾಗಲಿಲ್ಲ.
ನಂತರ ಸುಪ್ರೀಂಕೋರ್ಟ್ ನಿರ್ದೇಶನದಂತೆ ನಡೆದ ಪರಿಶೀಲನೆಯಲ್ಲಿ ಆರೋಪಿಯ ಪರವಾಗಿ ಸಲ್ಲಿಸಲಾಗಿದ್ದ ಜಾಮೀನುದಾರರೇ ಅಸ್ತಿತ್ವದಲ್ಲಿಲ್ಲ ಎಂಬುದು ಪತ್ತೆಯಾಯಿತು. ಇದರಿಂದ ಸಾಮಾನ್ಯ ಮೇಲ್ಮನವಿ ಪ್ರಕರಣವಾಗಿದ್ದ ವಿಚಾರ ಮತ್ತಷ್ಟು ಗಂಭೀರ ಸ್ವರೂಪ ಪಡೆದುಕೊಂಡಿತು. ಜಾಮೀನು ವ್ಯವಸ್ಥೆಯಲ್ಲಿನ ಇಂತಹ ಲೋಪಗಳು ನ್ಯಾಯ ವಿತರಣಾ ವ್ಯವಸ್ಥೆಯ ಮೇಲಿನ ನಂಬಿಕೆಗೆ ಧಕ್ಕೆ ತರುತ್ತವೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿತು.ಇದನ್ನೂ ಓದಿ: ನನ್ನನ್ನು ನೆಮ್ಮದಿಯಿಂದ ಸಾಯಲು ಬಿಡಿ; ತ್ವಿಶಾ ಸಾಯುವ 90 ನಿಮಿಷಗಳಿಗೂ ಮುನ್ನ ಆಗಿದ್ದೇನು?

