– ಆಕಾಶವಾಣಿ ಭವನದಲ್ಲಿ ಧರಣಿ ಕೂತಿದ್ದ ನಾಯಕರು
ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ (Gyanesh Kumar) ಅವರ ರಾಜೀನಾಮೆಗೆ ಆಗ್ರಹಿಸಿ ಧರಣಿ ನಡೆಸುತ್ತಿರುವ ರಾಹುಲ್ ಗಾಂಧಿ (Rahul Gandhi), ಪ್ರಿಯಾಂಕಾ ಗಾಂಧಿ (Priyanka Gandhi) ಸೇರಿದಂತೆ ಕಾಂಗ್ರೆಸ್ ನಾಯಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಸಂಸತ್ತಿನಿಂದ ಚುನಾವಣಾ ಆಯೋಗದ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ನಂತರ ಆಕಾಶವಾಣಿ ಭವನದಲ್ಲಿ ಇಂಡಿಯಾ ಒಕ್ಕೂಟದ ಸಂಸದರು ಧರಣಿ ಕೂತಿದ್ದರು. ದೆಹಲಿ ಪೊಲೀಸರು ಪ್ರತಿಭಟನಾಕಾರರ ವಿರುದ್ಧ ಕ್ರಮಕೈಗೊಂಡು ವಶಕ್ಕೆ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ: ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಬೀದಿಗಿಳಿದ INDIA ಸಂಸದರು
ಪ್ರತಿಭಟನಾಕಾರರು ಒಳಪ್ರವೇಶಿಸದಂತೆ ಪೊಲೀಸರು ಬ್ಯಾರಿಕೇಡ್ಗಳನ್ನು ಹಾಕಿದ್ದರು. ರಾಹುಲ್ ಗಾಂಧಿ ಬ್ಯಾರಿಕೇಡ್ ಮೇಲತ್ತಿ ರಾಷ್ಟ್ರಧ್ವಜ ಹಾರಿಸಿ ಪ್ರತಿಭಟನೆ ನಡೆಸಿದ್ದರು.
ಜ್ಞಾನೇಶ್ ಕುಮಾರ್ ಅವರು ಏಕಪಕ್ಷೀಯ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ. ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯಲ್ಲಿನ (SIR) ಕ್ರಮಬಾಹಿರತೆಗಳ ವಿರುದ್ಧ ‘ಇಂಡಿಯಾ’ (INDIA) ಮೈತ್ರಿಕೂಟವು ಪ್ರತಿಭಟನೆ ನಡೆಸುತ್ತಿದೆ ಎಂದು ಇಂಡಿಯಾ ಒಕ್ಕೂಟ ನಾಯಕರು ತಿಳಿಸಿದ್ದರು. ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಅಪಾರ ಸಂಖ್ಯೆಯಲ್ಲಿ ಸೇರಿದ್ದ ನಾಯಕರು ಮತ್ತು ಕಾರ್ಯಕರ್ತರು ಘೋಷಣೆಗಳನ್ನು ಕೂಗಿದರು. ಇದನ್ನೂ ಓದಿ: ಜ್ಞಾನೇಶ್ ಕುಮಾರ್ ರಾಜೀನಾಮೆಗೆ ವೋಟ್ ಬಚಾವ್, ದೇಶ ಬಚಾವ್ ಹೆಸರಿನಲ್ಲಿ ಹೋರಾಟ: ಬಿ.ಕೆ.ಹರಿಪ್ರಸಾದ್
ಗಾಂಧಿ ಮತ್ತು ಅವರ ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ವಶಕ್ಕೆ ಪಡೆದು ಪೊಲೀಸ್ ಬಸ್ನಲ್ಲಿ ಕರೆದೊಯ್ಯಲಾಯಿತು.

