ಕ್ರಿಕೆಟ್ ಜಗತ್ತನ್ನೇ ಬೆಚ್ಚಿಬೀಳಿಸಿದ್ದ ಆಸ್ಟ್ರೇಲಿಯಾದ(Australia) ಕುಖ್ಯಾತ ‘ಸ್ಯಾಂಡ್ಪೇಪರ್ ಗೇಟ್’ (Ball Tampering) ಹಗರಣಕ್ಕೆ 8 ವರ್ಷಗಳ ಬಳಿಕ ಮತ್ತೆ ಜೀವ ಬಂದಿದೆ. ಕೇವಲ ಮೂವರು ಆಟಗಾರರ ತಲೆಗೆ ಕಟ್ಟಲಾಗಿದ್ದ ಈ ಕಳ್ಳಾಟದ ಹಿಂದೆ ಇಡೀ ತಂಡ ಮತ್ತು ಬೌಲರ್ಗಳ ಕೈವಾಡವಿತ್ತು ಎಂಬ ಸ್ಫೋಟಕ ಸತ್ಯ ಈಗ ಹೊರಬಿದ್ದಿದೆ. ನಿವೃತ್ತ ಬ್ಯಾಟರ್ ಉಸ್ಮಾನ್ ಖವಾಜಾ ಅವರ ಆತ್ಮಚರಿತ್ರೆ ಹಾಗೂ ಕ್ಯಾಮರಾನ್ ಬ್ಯಾಂಕ್ರಾಫ್ಟ್(Cameron Bancroft) ಅವರ ಬಹಿರಂಗ ಹೇಳಿಕೆಗಳು ಆಸ್ಟ್ರೇಲಿಯಾ ಕ್ರಿಕೆಟ್ನಲ್ಲಿ ಹೊಸ ಬಿರುಗಾಳಿಯನ್ನೇ ಎಬ್ಬಿಸಿವೆ. ಅಷ್ಟಕ್ಕೂ 2018ರ ಕೇಪ್ ಟೌನ್ ಟೆಸ್ಟ್ನಲ್ಲಿ ನಡೆದಿದ್ದೇನು? ಈ ಹಗರಣ ಬೆಳಕಿಗೆ ಬಂದಿದ್ದು ಹೇಗೆ? ಯಾರಿಗೆಲ್ಲಾ ಶಿಕ್ಷೆಯಾಗಿತ್ತು? ಇಲ್ಲಿದೆ ಸಂಪೂರ್ಣ ವಿವರ.
ಉಸ್ಮಾನ್ ಖವಾಜಾ ಹೇಳಿದ್ದೇನು??
ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಉಸ್ಮಾನ್ ಖವಾಜಾ (Usman Khawaja) ನವೆಂಬರ್ನಲ್ಲಿ ಬಿಡುಗಡೆಯಾದ ತಮ್ಮ ಆತ್ಮಚರಿತ್ರೆ ‘ಸಬ್ರ್’ನಲ್ಲಿ (Sabr) 2018ರ ಸ್ಯಾಂಡ್ಪೇಪರ್ ಗೇಟ್ ವಿವಾದದ ಕುರಿತು ಸ್ಫೋಟಕ ಮಾಹಿತಿ ಹಂಚಿಕೊಂಡಿದ್ದಾರೆ. “ಕೇವಲ ಮೂವರು ಆಟಗಾರರಲ್ಲ, ಪ್ರವಾಸದಲ್ಲಿದ್ದ ಇಡೀ ಆಸ್ಟ್ರೇಲಿಯಾ ತಂಡಕ್ಕೆ ಈ ಬಾಲ್ ಟ್ಯಾಂಪರಿಂಗ್ ಯೋಜನೆಯ ಬಗ್ಗೆ ತಿಳಿದಿತ್ತು. ಕೇಪ್ ಟೌನ್ ಟೆಸ್ಟ್ಗೂ ಮೊದಲು ಪೋರ್ಟ್ ಎಲಿಜಬೆತ್ನಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲೂ ಚೆಂಡಿಗೆ ಸ್ಯಾಂಡ್ಪೇಪರ್ ಉಜ್ಜುವ ತಂತ್ರವನ್ನು ಬಳಸಲಾಗಿತ್ತು” ಎಂದು ಅವರು ಬರೆದಿದ್ದಾರೆ.
“ಇಡೀ ತಂಡದ ಒಪ್ಪಿಗೆಯಿಂದ ನಡೆದ ಕೃತ್ಯಕ್ಕೆ ಕೇವಲ ಸ್ಮಿತ್, ವಾರ್ನರ್ ಮತ್ತು ಬ್ಯಾಂಕ್ರಾಫ್ಟ್ ಅವರಿಗೆ ಮಾತ್ರ ದೀರ್ಘಕಾಲದ ನಿಷೇಧ ಶಿಕ್ಷೆ ವಿಧಿಸಲಾಯಿತು. ಅವರಿಗೆ ನೀಡಿದ ಶಿಕ್ಷೆ ಅತಿಯಾಯಿತು ಮತ್ತು ಅವರಿಗಾದ ಅನ್ಯಾಯಕ್ಕೆ ನ್ಯಾಯ ಸಿಗಬೇಕು. ಕೇಪ್ ಟೌನ್ ಪಂದ್ಯದ ವೇಳೆ ಚೆಂಡಿನ ಮೇಲೆ ಮಾಡುತ್ತಿದ್ದ ಪ್ರಯೋಗವನ್ನು ಇನ್ನಷ್ಟು ತೀವ್ರಗೊಳಿಸುವಂತೆ ಆಸ್ಟ್ರೇಲಿಯಾದ ತರಬೇತಿ ಸಿಬ್ಬಂದಿಯೊಬ್ಬರು ಬ್ಯಾಂಕ್ರಾಫ್ಟ್ ಅವರಿಗೆ ಪ್ರೋತ್ಸಾಹ ನೀಡಿದ್ದರು. ಘಟನೆ ನಡೆದ ಕೆಲವೇ ದಿನಗಳಲ್ಲಿ ಸತ್ಯವನ್ನು ಬಹಿರಂಗಪಡಿಸಲು ತಾವು ಮುಂದಾಗಿದ್ದಾಗ ಸ್ಟೀವ್ ಸ್ಮಿತ್ ತಡೆದಿದ್ದರು. ಆದರೆ ನಿವೃತ್ತಿಯ ನಂತರ ತಮ್ಮ ಪುಸ್ತಕದಲ್ಲಿ ಸಂಪೂರ್ಣ ಸತ್ಯವನ್ನು ಬರೆಯುವುದಾಗಿ ಬಾಲ್ಯದ ಗೆಳೆಯ ಡೇವಿಡ್ ವಾರ್ನರ್ ಅವರಿಗೆ 2020ರಲ್ಲಿ ಮಾತು ಕೊಟ್ಟಿದ್ದೆ. ಡ್ರೆಸ್ಸಿಂಗ್ ರೂಮ್ನಲ್ಲಿದ್ದ ಪ್ರತಿಯೊಬ್ಬರಿಗೂ ಈ ವಿಷಯ ತಿಳಿದಿದ್ದ ಕಾರಣ, ಇಡೀ ತಂಡ ಇದರ ಸಾಮೂಹಿಕ ಹೊಣೆ ಹೊರಬೇಕು” ಎಂದು ಖವಾಜಾ ಉಲ್ಲೇಖಿಸಿದ್ದಾರೆ.
ಬ್ಯಾಂಕ್ರಾಫ್ಟ್ ಹೇಳಿದ್ದೇನು?
‘ದಿ ವೆಸ್ಟ್ ಆಸ್ಟ್ರೇಲಿಯನ್’ ಪತ್ರಿಕೆಗಾಗಿ ಬರೆದಿರುವ 4,000 ಪದಗಳ ಸುದೀರ್ಘ ಲೇಖನದಲ್ಲಿ ಬ್ಯಾಂಕ್ರಾಫ್ಟ್, “ದಕ್ಷಿಣ ಆಫ್ರಿಕಾದಲ್ಲಿ ನಾನು ಚೆಂಡಿಗೆ ಸ್ಯಾಂಡ್ಪೇಪರ್ (Sandpaper) ಉಜ್ಜುತ್ತಿದ್ದ ವಿಷಯ ಕೇವಲ ಸ್ಟೀವ್ ಸ್ಮಿತ್, ಡೇವಿಡ್ ವಾರ್ನರ್ ಮತ್ತು ನನಗೆ ಮಾತ್ರ ತಿಳಿದಿರಲಿಲ್ಲ. ಅದು ಇಡೀ ತಂಡಕ್ಕೆ ತಿಳಿದಿತ್ತು” ಎಂದು ಬರೆದುಕೊಂಡಿದ್ದಾರೆ. 2018ರಲ್ಲಿ ಕ್ರಿಕೆಟ್ ಆಸ್ಟ್ರೇಲಿಯಾ ನಡೆಸಿದ ಪ್ರಾಥಮಿಕ ತನಿಖೆಯ ವೇಳೆ ತಾವು ಸಂಪೂರ್ಣ ಮತ್ತು ಸತ್ಯವಾದ ಮಾಹಿತಿಯನ್ನು ನೀಡಿರಲಿಲ್ಲ ಎಂದು ಬ್ಯಾಂಕ್ರಾಫ್ಟ್ ಒಪ್ಪಿಕೊಂಡಿದ್ದಾರೆ. ಸಹ ಆಟಗಾರರನ್ನು ರಕ್ಷಿಸುವ ಉದ್ದೇಶದಿಂದ ಪ್ರಮುಖ ವಿವರಗಳನ್ನು ಮುಚ್ಚಿಟ್ಟಿದ್ದಾಗಿ ಅವರು ಹೇಳಿದ್ದಾರೆ.
ಪಂದ್ಯದ ವೇಳೆ ವೇಗದ ಬೌಲರ್ಗಳೊಂದಿಗೆ ನಡೆದ ಸಂಭಾಷಣೆಯನ್ನು ನೆನಪಿಸಿಕೊಂಡಿರುವ ಅವರು, “ಚೆಂಡು ಸರಿಯಾಗಿ ರಿವರ್ಸ್ ಸ್ವಿಂಗ್ ಆಗುತ್ತಿದೆಯೇ ಎಂದು ನಾನು ವೇಗದ ಬೌಲರ್ಗಳಾದ ಪ್ಯಾಟ್ ಕಮಿನ್ಸ್, ಮಿಚೆಲ್ ಸ್ಟಾರ್ಕ್, ಜೋಶ್ ಹ್ಯಾಜಲ್ವುಡ್ ಮತ್ತು ಮಿಚೆಲ್ ಮಾರ್ಷ್ ಅವರೊಂದಿಗೆ ಮಾತನಾಡಿದ್ದೆ. ಚೆಂಡಿನ ಮೇಲೆ ನಾನು ಮಾಡುತ್ತಿದ್ದ ಕೆಲಸ ಫಲ ನೀಡುತ್ತಿದೆಯೇ ಎಂಬ ಬಗ್ಗೆ ಎಲ್ಲಾ ಬೌಲರ್ಗಳು ನನಗೆ ಪ್ರತಿಕ್ರಿಯೆ ನೀಡುತ್ತಿದ್ದರು. ‘ಚೆಂಡು ಇನ್ನೂ ಸ್ವಿಂಗ್ ಆಗುತ್ತಿಲ್ಲ, ಇನ್ನಷ್ಟು ಉಜ್ಜಬೇಕು’ ಎಂದು ಅವರು ಹೇಳುತ್ತಿದ್ದರು. ಅದರಂತೆ ನಾನು ಚೆಂಡಿಗೆ ಮತ್ತಷ್ಟು ಸ್ಯಾಂಡ್ಪೇಪರ್ ಬಳಸುತ್ತಿದ್ದೆ” ಎಂದು ಗಂಭೀರ ಆರೋಪ ಮಾಡಿದ್ದಾರೆ.
ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮಿನ್ಸ್ ಸುದ್ದಿಗೋಷ್ಠಿ ನಡೆಸಿ, ಸ್ಯಾಂಡ್ಪೇಪರ್ ಯೋಜನೆಯ ಬಗ್ಗೆ ತಮಗೆ ಏನೂ ತಿಳಿದಿರಲಿಲ್ಲ ಎಂದು ಹೇಳಿದ್ದರು ಹಾಗೂ ಖವಾಜಾ ಅವರ ಆತ್ಮಚರಿತ್ರೆಯ ಆರೋಪಗಳನ್ನು ಸಾರಾಸಗಟಾಗಿ ತಳ್ಳಿಹಾಕಿದ್ದರು. ಕಮಿನ್ಸ್ ಅವರ ಈ ಹೇಳಿಕೆಯಿಂದ ತಮಗೆ ದ್ರೋಹ ಬಗೆದಂತಾಗಿದೆ ಎಂದು ಬ್ಯಾಂಕ್ರಾಫ್ಟ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಘಟನೆಗಳ ನೈಜ ಸತ್ಯಾಂಶ ಕೊನೆಗೂ ಹೊರಬಂದಿರುವುದು ವೈಯಕ್ತಿಕವಾಗಿ ನನಗೆ ದೊಡ್ಡ ನಿರಾಳತೆ ತಂದಿದೆ. ಇಷ್ಟು ವರ್ಷ ನಾನು ಹೊತ್ತಿದ್ದ ಭಾರ ಇಳಿದಂತಾಗಿದೆ. ಆದರೆ ಪ್ಯಾಟ್ ಕಮಿನ್ಸ್ ಅವರ ಸುದ್ದಿಗೋಷ್ಠಿಯು ನಾನು ಈ ಲೇಖನ ಬರೆಯಲು ಮುಖ್ಯ ಕಾರಣವಾಯಿತು. ಅವರ ಮಾತುಗಳು ನನಗೆ ಕೋಪ, ದ್ರೋಹ ಮತ್ತು ಒಂಟಿತನದ ಭಾವನೆ ಮೂಡಿಸಿದವು. ಇಡೀ ಘಟನೆಯ ಹೊಣೆಯನ್ನು ತಮ್ಮ ಮೇಲೆ ಮಾತ್ರ ಹೊರಿಸಲಾಯಿತು. ಕೊನೆಗೆ ನಾನು ಇಡೀ ತಂಡದ ಪರವಾಗಿ ಬಲಿಪಶುವಾದೆ” ಎಂದು ಬ್ಯಾಂಕ್ರಾಫ್ಟ್ ತಮ್ಮ ಲೇಖನವನ್ನು ಮುಗಿಸಿದ್ದಾರೆ.

ಕಳ್ಳಾಟ ಬೆಳಕಿಗೆ ಬಂದಿದ್ದು ಹೇಗೆ?
ಮಾರ್ಚ್ 24, 2018ರಂದು ದಕ್ಷಿಣ ಆಫ್ರಿಕಾದ ಕೇಪ್ ಟೌನ್ನ ನ್ಯೂಲ್ಯಾಂಡ್ಸ್ ಕ್ರೀಡಾಂಗಣದಲ್ಲಿ ಮೂರನೇ ಟೆಸ್ಟ್ ಪಂದ್ಯ ನಡೆಯುತ್ತಿತ್ತು. ಪಂದ್ಯದ 3ನೇ ದಿನ ಆಸ್ಟ್ರೇಲಿಯಾ ಬೌಲರ್ಗಳು ಅಸಹಜ ರೀತಿಯಲ್ಲಿ ‘ರಿವರ್ಸ್ ಸ್ವಿಂಗ್’ ಮಾಡುತ್ತಿದ್ದರು. ಇದನ್ನು ಗಮನಿಸಿದ ಕ್ಯಾಮೆರಾಮನ್ಗಳು, ಮೈದಾನದಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಆಸ್ಟ್ರೇಲಿಯಾ ಆಟಗಾರರ ಮೇಲೆ ಹದ್ದಿನ ಕಣ್ಣಿಟ್ಟರು.
ಆಸ್ಟ್ರೇಲಿಯಾದ ಕಿರಿಯ ಆಟಗಾರ ಕ್ಯಾಮರಾನ್ ಬ್ಯಾಂಕ್ರಾಫ್ಟ್ ತಮ್ಮ ಜೇಬಿನಿಂದ ಹಳದಿ ಬಣ್ಣದ ಸಣ್ಣ ವಸ್ತುವನ್ನು ತೆಗೆದು ಚೆಂಡನ್ನು ಉಜ್ಜುತ್ತಿರುವುದು ಸೂಪರ್-ಸ್ಲೋ ಮೋಷನ್ ಕ್ಯಾಮೆರಾದಲ್ಲಿ ಸ್ಪಷ್ಟವಾಗಿ ಸೆರೆಯಾಗಿತ್ತು. ಈ ದೃಶ್ಯವನ್ನು ಮೈದಾನದ ದೊಡ್ಡ ಪರದೆಯ ಮೇಲೆ ಪ್ರಸಾರ ಮಾಡಲಾಯಿತು. ಇದನ್ನು ಗಮನಿಸಿದ ತಕ್ಷಣ ಆಸ್ಟ್ರೇಲಿಯಾ ಕೋಚ್ ಡ್ಯಾರೆನ್ ಲೆಹ್ಮನ್ ವಾಕಿ-ಟಾಕಿ ಮೂಲಕ ಮೈದಾನದಲ್ಲಿದ್ದ ಆಟಗಾರರಿಗೆ ಸಂದೇಶ ಕಳುಹಿಸಿದರು. ಅಂಪೈರ್ಗಳು ಬಂದು ವಿಚಾರಿಸುವಷ್ಟರಲ್ಲಿ ಬ್ಯಾಂಕ್ರಾಫ್ಟ್ ಆ ಹಳದಿ ಕಾಗದವನ್ನು ತಮ್ಮ ಪ್ಯಾಂಟ್ನ ಒಳಗೆ ಬಚ್ಚಿಟ್ಟು, ಜೇಬಿನಲ್ಲಿದ್ದ ಕಪ್ಪು ಬಣ್ಣದ ಕನ್ನಡಕದ ಬಟ್ಟೆಯನ್ನು ತೋರಿಸಿ ಅಂಪೈರ್ಗಳನ್ನು ನಂಬಿಸಲು ಪ್ರಯತ್ನಿಸಿದರು. ಆದರೆ ಅಷ್ಟರಲ್ಲಾಗಲೇ ಅವರ ಕಳ್ಳಾಟ ಇಡೀ ಜಗತ್ತಿಗೆ ಗೊತ್ತಾಗಿತ್ತು.
🚨SANDPAPER INCIDENT IS NOW COMING BACK SO LET’S REVISIT IT👀
Main Incident Video – Bancroft uses Sandpaper to tamper the ball and tries to hide it. Full Clip. https://t.co/4NNkUEmVsN
— Footvoski (@CRICBALLY) November 18, 2026
ತನಿಖೆಯ ಬಗ್ಗೆ ಅನುಮಾನ
ಬಾಲ್ ಟ್ಯಾಂಪರಿಂಗ್ ಪ್ರಕರಣದಲ್ಲಿ ಕ್ರಿಕೆಟ್ ಆಸ್ಟ್ರೇಲಿಯಾ ತನ್ನ ಸಮಗ್ರತಾ ಘಟಕದ ಮೂಲಕ ಕೇವಲ 48 ಗಂಟೆಗಳ ಒಳಗೆ ಅತ್ಯಂತ ತ್ವರಿತ ಮತ್ತು ಆಂತರಿಕ ತನಿಖೆ ನಡೆಸಿತು. ಆದರೆ, ಈ ತನಿಖೆಯನ್ನು ಅವಸರದಲ್ಲಿ ಮುಗಿಸಲಾಯಿತು ಮತ್ತು ವಿಷಯವನ್ನು ಮುಚ್ಚಿಹಾಕಲು ಪ್ರಯತ್ನಿಸಲಾಯಿತು ಎಂಬ ಟೀಕೆ ಕೇಳಿಬಂದಿದೆ. ಘಟನೆ ನಡೆದ ತಕ್ಷಣ ಕ್ರಿಕೆಟ್ ಆಸ್ಟ್ರೇಲಿಯಾದ ಸಮಗ್ರತಾ ಮುಖ್ಯಸ್ಥ (Head of Integrity) ಇಯಾನ್ ರಾಯ್ (Iain Roy) ಮತ್ತು ತಂಡದ ಕಾರ್ಯನಿರ್ವಾಹಕ ಅಧಿಕಾರಿ ಪ್ಯಾಟ್ ಹೊವಾರ್ಡ್ ದಕ್ಷಿಣ ಆಫ್ರಿಕಾಕ್ಕೆ ತೆರಳಿ ವಿಚಾರಣೆ ನಡೆಸಿದ್ದರು.
ಮಾರ್ಚ್ 28, 2018ರಂದು ಸಭೆ ಸೇರಿದ ಕ್ರಿಕೆಟ್ ಆಸ್ಟ್ರೇಲಿಯಾ ಮಂಡಳಿಯು, “ಈ ಸಂಚನ್ನು ರೂಪಿಸಿದ್ದು ಡೇವಿಡ್ ವಾರ್ನರ್, ಅದನ್ನು ಜಾರಿಗೊಳಿಸಿದ್ದು ಕ್ಯಾಮರಾನ್ ಬ್ಯಾಂಕ್ರಾಫ್ಟ್ ಮತ್ತು ಇದರ ಅರಿವಿದ್ದರೂ ತಡೆಯಲು ವಿಫಲರಾದವರು ನಾಯಕ ಸ್ಟೀವ್ ಸ್ಮಿತ್” ಎಂದು ತೀರ್ಮಾನಿಸಿತು. ಇವರನ್ನು ಹೊರತುಪಡಿಸಿ ತಂಡದ ಇತರ ಆಟಗಾರರು ಅಥವಾ ಕೋಚ್ ಡ್ಯಾರೆನ್ ಲೆಹ್ಮನ್ ಅವರಿಗೆ ಈ ಬಗ್ಗೆ ಯಾವುದೇ ಪೂರ್ವ ಮಾಹಿತಿ ಇರಲಿಲ್ಲ ಎಂದು ವರದಿ ನೀಡಿತು.

ತನಿಖೆಯನ್ನು ಕೇವಲ 48 ಗಂಟೆಗಳ ಅವಸರದಲ್ಲಿ ಮುಗಿಸಿ, ಇಡೀ ತಂಡವನ್ನು ರಕ್ಷಿಸಲು ಕೇವಲ ಮೂವರು ಆಟಗಾರರನ್ನು ಬಲಿಪಶು ಮಾಡಲಾಯಿತು. “ಬ್ಯಾಂಕ್ರಾಫ್ಟ್ ಪಕ್ಕದಲ್ಲೇ ಕುಳಿತಿದ್ದರೂ ತನಿಖಾಧಿಕಾರಿಗಳು ತಮ್ಮನ್ನು ವಿಚಾರಣೆಗೇ ಒಳಪಡಿಸಿರಲಿಲ್ಲ” ಎಂದು ಉಸ್ಮಾನ್ ಖವಾಜಾ ಆರೋಪಿಸಿದ್ದಾರೆ. ತನಿಖೆ ನಡೆಸುವ ನೆಪದಲ್ಲಿ ಪ್ರಕರಣವನ್ನು ಮುಚ್ಚಿಹಾಕಲು ಕ್ರಿಕೆಟ್ ಆಸ್ಟ್ರೇಲಿಯಾ ಪ್ರಯತ್ನಿಸಿತ್ತು ಎಂದು ವಾರ್ನರ್ ಟೀಕಿಸಿದ್ದಾರೆ. ಸ್ವತಃ ಬ್ಯಾಂಕ್ರಾಫ್ಟ್ ಕೂಡ, 2018ರ ಪ್ರಾಥಮಿಕ ತನಿಖೆಯ ವೇಳೆ ತಾವು ಸಂಪೂರ್ಣ ಸತ್ಯವನ್ನು ಹೇಳದೆ ಕೆಲವು ಪ್ರಮುಖ ಮಾಹಿತಿಗಳನ್ನು ಬಚ್ಚಿಟ್ಟಿದ್ದಾಗಿ ಒಪ್ಪಿಕೊಂಡಿದ್ದಾರೆ.
ಚೆಂಡಿನ ಸ್ಥಿತಿಯನ್ನು ಬದಲಾಯಿಸುವುದರಿಂದ ನೇರ ಲಾಭ ಪಡೆಯುವ ಬೌಲರ್ಗಳಾದ ಮಿಚೆಲ್ ಸ್ಟಾರ್ಕ್, ಜೋಶ್ ಹ್ಯಾಜಲ್ವುಡ್ ಮತ್ತು ನಾಥನ್ ಲಿಯಾನ್ ಅವರನ್ನು ತನಿಖಾಧಿಕಾರಿಗಳು ವಿಚಾರಣೆಗೇ ಒಳಪಡಿಸಿರಲಿಲ್ಲ ಎಂದು ಡೇವಿಡ್ ವಾರ್ನರ್ ಆರೋಪಿಸಿದ್ದಾರೆ. ವಿಚಾರಣೆಯನ್ನೇ ನಡೆಸದೆ ಅವರಿಗೆ ಏನೂ ತಿಳಿದಿರಲಿಲ್ಲ ಎಂದು ಮಂಡಳಿ ಹೇಗೆ ತೀರ್ಮಾನಿಸಿತು ಎಂಬುದು ದೊಡ್ಡ ಪ್ರಶ್ನೆಯಾಗಿದೆ.
ಘಟನೆಯ ನಂತರ ಆಸ್ಟ್ರೇಲಿಯಾ ಸರ್ಕಾರ ಮತ್ತು ಪ್ರಾಯೋಜಕರಿಂದ (Sponsors) ತೀವ್ರ ಒತ್ತಡ ಎದುರಾಗಿತ್ತು. ಇಡೀ ತಂಡಕ್ಕೆ ನಿಷೇಧ ಹೇರಿದರೆ ಮುಂದಿನ ಸರಣಿಗಳಿಗೆ ಮತ್ತು ಆರ್ಥಿಕ ಆದಾಯಕ್ಕೆ ದೊಡ್ಡ ಪೆಟ್ಟು ಬೀಳುತ್ತದೆ ಎಂಬ ಕಾರಣಕ್ಕೆ, ಕೇವಲ ಮೂವರ ಮೇಲೆ ತಪ್ಪು ಹೊರಿಸಿ ಪ್ರಕರಣವನ್ನು ಬೇಗನೆ ಮುಚ್ಚಿಹಾಕಲಾಯಿತು ಎಂಬ ಆರೋಪ ಕೇಳಿಬಂದಿದೆ. ಕೇಪ್ ಟೌನ್ಗೂ ಮುನ್ನ ಪೋರ್ಟ್ ಎಲಿಜಬೆತ್ ಟೆಸ್ಟ್ನಲ್ಲೂ ಸ್ಯಾಂಡ್ಪೇಪರ್ ಬಳಸಲಾಗಿತ್ತು ಎಂಬ ಗಂಭೀರ ಆರೋಪವಿದ್ದರೂ, ತನಿಖಾಧಿಕಾರಿಗಳು ಕೇವಲ ಕೇಪ್ ಟೌನ್ ಘಟನೆಗೆ ಮಾತ್ರ ತಮ್ಮ ತನಿಖೆಯನ್ನು ಸೀಮಿತಗೊಳಿಸಿದ್ದರು. ಈ ಎಲ್ಲ ಕಾರಣಗಳಿಂದಾಗಿ, ಆಗ ನಡೆದ ತನಿಖೆಯು ಸತ್ಯವನ್ನು ಹುಡುಕುವುದಕ್ಕಿಂತ ಹೆಚ್ಚಾಗಿ ಪ್ರಕರಣವನ್ನು ಮುಚ್ಚಿಹಾಕುವ (Damage control) ತಂತ್ರವಾಗಿತ್ತು ಎಂದು ವಾರ್ನರ್ ಹಾಗೂ ಮಾಜಿ ಆಟಗಾರರು ಟೀಕಿಸಿದ್ದಾರೆ.

ವಿರೋಧಿಸಿದ್ದ ಸ್ಮಿತ್
ಕೇಪ್ ಟೌನ್ ಟೆಸ್ಟ್ನ ಘಟನೆಯ ನಂತರ ಸುದ್ದಿಗೋಷ್ಠಿಯಲ್ಲಿ ಕಣ್ಣೀರು ಹಾಕಿದ್ದ ಸ್ಮಿತ್, “ನಾಯಕನಾಗಿ ನಾನು ಇದರ ಸಂಪೂರ್ಣ ಹೊಣೆ ಹೊರುತ್ತೇನೆ. ತಂಡದ ನಾಯಕತ್ವದ ಗುಂಪಿಗೆ ಈ ಯೋಜನೆಯ ಬಗ್ಗೆ ತಿಳಿದಿತ್ತು, ಆದರೆ ಕೋಚ್ಗಳಿಗೆ ಹಾಗೂ ಇತರ ಆಟಗಾರರಿಗೆ ಈ ಬಗ್ಗೆ ಮಾಹಿತಿ ಇರಲಿಲ್ಲ” ಎಂದು ಹೇಳಿದ್ದರು. ಆದರೆ ಕ್ಯಾಮರಾನ್ ಬ್ಯಾಂಕ್ರಾಫ್ಟ್, “ಪೋರ್ಟ್ ಎಲಿಜಬೆತ್ ಪಂದ್ಯದಲ್ಲಿ ಸ್ಯಾಂಡ್ಪೇಪರ್ ಬಳಸುವ ಚರ್ಚೆ ನಡೆದಾಗ ಸ್ಟೀವ್ ಸ್ಮಿತ್ ಅದನ್ನು ವಿರೋಧಿಸಿದ್ದರು. ‘ನನಗೆ ಇದರ ಬಗ್ಗೆ ಏನೂ ತಿಳಿಯುವುದು ಬೇಡ’ ಎಂದು ಹೇಳಿ ಅಲ್ಲಿಂದ ದೂರ ಸರಿದಿದ್ದರು” ಎಂದು ಲೇಖನದಲ್ಲಿ ಬರೆದಿದ್ದಾರೆ.
2018ರ ಘಟನೆ ನಡೆದ ತಕ್ಷಣ ತಾವು ಮಾಧ್ಯಮಗಳ ಮುಂದೆ ಇಡೀ ತಂಡದ ಪಾತ್ರವನ್ನು ಬಹಿರಂಗಪಡಿಸಲು ಮುಂದಾಗಿದ್ದಾಗ, ಸ್ಟೀವ್ ಸ್ಮಿತ್ ತಮ್ಮನ್ನು ತಡೆದಿದ್ದರು. “ನಾಯಕನಾಗಿ ನಾನೇ ಎಲ್ಲಾ ಹೊಣೆಯನ್ನು ಹೊರುತ್ತೇನೆ, ಬೇರೆಯವರಿಗೆ ತೊಂದರೆಯಾಗುವುದು ಬೇಡ” ಎಂದು ಸ್ಮಿತ್ ಹೇಳಿದ್ದಾಗಿ ಉಸ್ಮಾನ್ ಖವಾಜಾ ತಿಳಿಸಿದ್ದಾರೆ. ಉಳಿದ ಆಟಗಾರರು ಪರಸ್ಪರ ಆರೋಪ-ಪ್ರತ್ಯಾರೋಪಗಳಲ್ಲಿ ತೊಡಗಿದ್ದರೂ, ಸ್ಮಿತ್ ಯಾರ ಮೇಲೂ ಗೂಬೆ ಕೂರಿಸದೆ ಮೌನವಾಗಿರುವುದು ಅವರಿಗೆ ಸಾರ್ವಜನಿಕವಾಗಿ ಹೆಚ್ಚಿನ ಗೌರವ ತಂದುಕೊಟ್ಟಿದೆ.
ಯಾರಿಗೆ ಏನು ಶಿಕ್ಷೆ ವಿಧಿಸಲಾಗಿತ್ತು?
ಸ್ಟೀವ್ ಸ್ಮಿತ್: 2018ರಲ್ಲಿ ತಂಡದ ನಾಯಕರಾಗಿದ್ದ ಇವರಿಗೆ ಅಂತಾರಾಷ್ಟ್ರೀಯ ಮತ್ತು ದೇಶೀಯ ಕ್ರಿಕೆಟ್ನಿಂದ 12 ತಿಂಗಳ ನಿಷೇಧ ವಿಧಿಸಲಾಯಿತು. ಇದರೊಂದಿಗೆ 2 ವರ್ಷಗಳ ಕಾಲ ನಾಯಕತ್ವ ವಹಿಸದಂತೆ ನಿರ್ಬಂಧ ಹೇರಲಾಯಿತು ಹಾಗೂ ಐಸಿಸಿಯಿಂದ (ICC) 1 ಪಂದ್ಯದ ನಿಷೇಧಕ್ಕೂ ಒಳಗಾದರು.
ಡೇವಿಡ್ ವಾರ್ನರ್: ಉಪನಾಯಕರಾಗಿದ್ದ ಇವರಿಗೂ ಅಂತಾರಾಷ್ಟ್ರೀಯ ಮತ್ತು ದೇಶೀಯ ಕ್ರಿಕೆಟ್ನಿಂದ 12 ತಿಂಗಳ ನಿಷೇಧ ವಿಧಿಸಲಾಯಿತು. ಅಲ್ಲದೆ, ಭವಿಷ್ಯದಲ್ಲಿ ಯಾವುದೇ ತಂಡವನ್ನು ಮುನ್ನಡೆಸದಂತೆ ಆಜೀವ ನಾಯಕತ್ವ ನಿಷೇಧವನ್ನು ಹೇರಲಾಯಿತು.
ಕ್ಯಾಮರಾನ್ ಬ್ಯಾಂಕ್ರಾಫ್ಟ್: ಆರಂಭಿಕ ಆಟಗಾರರಾಗಿದ್ದ ಇವರಿಗೆ ಅಂತಾರಾಷ್ಟ್ರೀಯ ಮತ್ತು ದೇಶೀಯ ಕ್ರಿಕೆಟ್ನಿಂದ 9 ತಿಂಗಳ ನಿಷೇಧ ವಿಧಿಸಲಾಯಿತು. ಜೊತೆಗೆ ಐಸಿಸಿಯಿಂದ 3 ಡಿಮೆರಿಟ್ ಪಾಯಿಂಟ್ಗಳು ಹಾಗೂ ಪಂದ್ಯದ ಶುಲ್ಕದ ಶೇ. 75ರಷ್ಟು ದಂಡ ವಿಧಿಸಲಾಯಿತು.
ಡ್ಯಾರೆನ್ ಲೆಹ್ಮನ್: ಮುಖ್ಯ ಕೋಚ್ ಆಗಿದ್ದ ಇವರ ನೇರ ಪಾತ್ರ ತನಿಖೆಯಲ್ಲಿ ಸಾಬೀತಾಗದಿದ್ದರೂ, ನೈತಿಕ ಹೊಣೆ ಹೊತ್ತು ತಮ್ಮ ಮುಖ್ಯ ಕೋಚ್ ಸ್ಥಾನಕ್ಕೆ ರಾಜೀನಾಮೆ ನೀಡಿದರು.
ಸ್ವತಂತ್ರ ವೇದಿಕೆ ಸ್ಥಾಪನೆ
ಹಳೆಯ ತನಿಖೆಯನ್ನು ಮತ್ತೆ ಪುನರಾರಂಭಿಸುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಕ್ರಿಕೆಟ್ ಆಸ್ಟ್ರೇಲಿಯಾ, 2018ರ ಪ್ರವಾಸದಲ್ಲಿದ್ದ ಆಟಗಾರರು ಮತ್ತು ಸಿಬ್ಬಂದಿ ತಮ್ಮ ಬಳಿಯಿರುವ ಮಾಹಿತಿಯನ್ನು ಹಂಚಿಕೊಳ್ಳಲು ಈಗ ಹೊಸದಾಗಿ ಒಂದು ಸ್ವತಂತ್ರ ವೇದಿಕೆಯನ್ನು (Independent Forum) ಸ್ಥಾಪಿಸಿದೆ. ಇದರಲ್ಲಿ ಹೇಳಿಕೆ ನೀಡುವವರಿಗೆ ಯಾವುದೇ ಹೊಸ ಶಿಕ್ಷೆ ವಿಧಿಸುವುದಿಲ್ಲ ಎಂದು ಮಂಡಳಿ ತಿಳಿಸಿದೆ.

ಈ ಹಿಂದೆಯೂ ಆಸ್ಟ್ರೇಲಿಯಾ ಮಾಡಿತ್ತಾ?
2016ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಹೋಬಾರ್ಟ್ ಟೆಸ್ಟ್ನಲ್ಲಿ ಹೀನಾಯವಾಗಿ ಸೋತ ನಂತರ, ಡ್ರೆಸ್ಸಿಂಗ್ ರೂಮ್ಗೆ ಬಂದ ಕ್ರಿಕೆಟ್ ಆಸ್ಟ್ರೇಲಿಯಾದ ಉನ್ನತ ಅಧಿಕಾರಿಗಳು “ನಾವು ನಿಮಗೆ ಆಡಲು ಸಂಬಳ ನೀಡುತ್ತಿಲ್ಲ, ಗೆಲ್ಲಲು ನೀಡುತ್ತಿದ್ದೇವೆ” ಎಂದು ತಂಡವನ್ನು ತರಾಟೆಗೆ ತೆಗೆದುಕೊಂಡಿದ್ದರು. ಆ ನಂತರವೇ ‘ಚೆಂಡಿನ ನಿರ್ವಹಣೆ’ ಹೆಸರಿನಲ್ಲಿ ಚೆಂಡನ್ನು ವಿರೂಪಗೊಳಿಸುವ ತಂತ್ರವನ್ನು ವ್ಯವಸ್ಥಿತವಾಗಿ ಆರಂಭಿಸಲಾಯಿತು ಎಂದು ಡೇವಿಡ್ ವಾರ್ನರ್ ಅವರ ಮ್ಯಾನೇಜರ್ ಜೇಮ್ಸ್ ಎರ್ಸ್ಕಿನ್ (2022ರಲ್ಲಿ) ಮತ್ತು ಖವಾಜಾ (2026ರಲ್ಲಿ) ತಿಳಿಸಿದ್ದಾರೆ.
ಟೆಸ್ಟ್ ಆಗಲಿ ಏಕದಿನ ಪಂದ್ಯವಾಗಲಿ, ಮೊದಲು ಆಸ್ಟ್ರೇಲಿಯಾ ಬ್ಯಾಟಿಂಗ್ ಮಾಡಿದಾಗ ಆ ಪಿಚ್ ಬ್ಯಾಟರ್ಗಳಿಗೆ ಪೂರಕವಾಗಿರುತ್ತಿತ್ತು. ಆದರೆ ಎದುರಾಳಿ ತಂಡ ಬ್ಯಾಟಿಂಗ್ ಮಾಡಿದಾಗ ಅದು ಬೌಲಿಂಗ್ ಪಿಚ್ ಆಗಿ ಬದಲಾಗುತ್ತಿತ್ತು. 2017-18ರ ಆಶಸ್ ಸರಣಿಯ ವೇಳೆ ಪರ್ತ್ ಟೆಸ್ಟ್ನಲ್ಲಿ ಆಸ್ಟ್ರೇಲಿಯಾ ವೇಗಿಗಳು ಅನಿರೀಕ್ಷಿತವಾಗಿ ಪಡೆದ ‘ರಿವರ್ಸ್ ಸ್ವಿಂಗ್’ ಬಗ್ಗೆ ಇಂಗ್ಲೆಂಡ್ ಆಟಗಾರರು ಹಾಗೂ ಮಾಧ್ಯಮಗಳು ಆಗಲೇ ಅನುಮಾನ ವ್ಯಕ್ತಪಡಿಸಿದ್ದವು.
2018ಕ್ಕೂ ಮುನ್ನ ಕೇವಲ ಆಸ್ಟ್ರೇಲಿಯಾ ಮಾತ್ರವಲ್ಲದೆ ವಿಶ್ವದ ಎಲ್ಲಾ ತಂಡಗಳೂ ಒಂದಲ್ಲ ಒಂದು ರೀತಿಯಲ್ಲಿ ಚೆಂಡನ್ನು ವಿರೂಪಗೊಳಿಸಿ ರಿವರ್ಸ್ ಸ್ವಿಂಗ್ ಪಡೆಯುತ್ತಿದ್ದವು ಎಂದು ಆಸ್ಟ್ರೇಲಿಯಾದ ಮಾಜಿ ಕೋಚ್ ಜಸ್ಟಿನ್ ಲ್ಯಾಂಗರ್ ಇತ್ತೀಚೆಗೆ ಹೇಳಿಕೆ ನೀಡಿದ್ದಾರೆ.
ಕ್ರೀಡೆಯಲ್ಲಿ ಸೋಲು-ಗೆಲುವು ಸಹಜ, ಆದರೆ ಗೆಲುವಿಗಾಗಿ ಅಡ್ಡದಾರಿ ಹಿಡಿದಾಗ ಅದು ಇಡೀ ದೇಶದ ಕ್ರೀಡಾ ಪರಂಪರೆಗೆ ಕಳಂಕ ತರುತ್ತದೆ ಎಂಬುದಕ್ಕೆ 2018ರ ಸ್ಯಾಂಡ್ಪೇಪರ್ ಪ್ರಕರಣವೇ ದೊಡ್ಡ ಸಾಕ್ಷಿ. ಅಂದು ಕೇವಲ ಮೂವರು ಆಟಗಾರರ ಮೇಲೆ ಗೂಬೆ ಕೂರಿಸಿ ಕೈತೊಳೆದುಕೊಂಡಿದ್ದ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿಗೆ, ಈಗ ಸ್ವತಃ ತನ್ನದೇ ಆಟಗಾರರ ಹೇಳಿಕೆಗಳು ತಿರುಗುಬಾಣವಾಗಿವೆ. ಸತ್ಯವನ್ನು ಎಷ್ಟೇ ದಿನ ಮುಚ್ಚಿಟ್ಟರೂ ಒಂದಲ್ಲ ಒಂದು ದಿನ ಹೊರಬಂದೇ ತೀರುತ್ತದೆ ಎಂಬುದಕ್ಕೆ ಈ ಬೆಳವಣಿಗೆಯೇ ನಿದರ್ಶನ. ಈ ವಿವಾದ ಇನ್ನಾದರೂ ವಿಶ್ವ ಕ್ರಿಕೆಟ್ಗೆ ಒಂದು ಎಚ್ಚರಿಕೆಯ ಪಾಠವಾಗಿ ಉಳಿಯುವುದೇ ಎಂಬುದೇ ಸದ್ಯದ ಪ್ರಶ್ನೆ.

