ಭೋಪಾಲ್: ನಿವೃತ್ತ ನ್ಯಾಯಾಧೀಶೆ ಸೊಸೆ, (Twisha Death case)ಮಾಡೆಲ್ ಹಾಗೂ ಮಾಜಿ ಮಿಸ್ ಪುಣೆ ತ್ವಿಶಾ ಶರ್ಮಾ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಸಲ್ಲಿಸಿರುವ ಚಾರ್ಜ್‌ಶೀಟ್‌ನಲ್ಲಿರುವ ಹಲವು ವಿವರಗಳು ಪ್ರಕರಣದ ಮತ್ತೊಂದು ಮುಖವನ್ನು ತೆರೆದಿಟ್ಟಿವೆ. ಸಾವಿಗೂ ಕೆಲವೇ ನಿಮಿಷಗಳ ಮುನ್ನ ತ್ವಿಶಾ ತನ್ನ ಅತ್ತಿಗೆಗೆ ‘ನನ್ನನ್ನು ಈಗ ನೆಮ್ಮದಿಯಿಂದ ಸಾಯಲು ಬಿಡಿ’ ಎಂದು ಮೆಸೇಜ್ ಕಳುಹಿಸಿದ್ದಳು ಎಂದು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ.
ಈ ಮೆಸೇಜ್ ಕಳುಹಿಸಿದ ಕೆಲವೇ ನಿಮಿಷಗಳ ಬಳಿಕ ತ್ವಿಶಾ ತಂದೆಗೆ ಕರೆ ಮಾಡಿ, ಪತಿ ಸಮರ್ಥ್ ಸಿಂಗ್ ಕ್ರೂರವಾಗಿ ವರ್ತಿಸುತ್ತಿದ್ದಾನೆ. ನನಗೆ ಭಯವಾಗುತ್ತಿದೆ, ನನನ್ನು ಇಲ್ಲಿಂದ ಕರೆದುಕೊಂಡು ಹೋಗಿ ಎಂದು ಅಳುತ್ತಾ ಮನವಿ ಮಾಡಿದ್ದಾಳೆ.
ತ್ವಿಶಾ ಶರ್ಮಾ ಸಾವಿನ ಪ್ರಕರಣದಲ್ಲಿ ಸಿಬಿಐ 636 ಪುಟಗಳ ಚಾರ್ಜ್‌ಶೀಟ್ ಸಲ್ಲಿಸಿದೆ. ತ್ವಿಶಾಳನ್ನು ಪತಿ ಸಮರ್ಥ್ ಸಿಂಗ್ ಹಾಗೂ ಅತ್ತೆ ಗಿರಿಬಾಲಾ ಸಿಂಗ್ ನಿರಂತರ ಮಾನಸಿಕ ಹಿಂಸೆಗೆ ಒಳಪಡಿಸಿ ಆತ್ಮಹತ್ಯೆಗೆ ಪ್ರಚೋದಿಸಿದ್ದಾರೆ ಎಂಬುದು ಸಿಬಿಐ ಆರೋಪ.
ಚಾರ್ಜ್‌ಶೀಟ್‌ನಲ್ಲಿ ಏನಿದೆ?
ತ್ವಿಶಾ ಮತ್ತು ಸಮರ್ಥ್ 2025ರ ಡಿಸೆಂಬರ್ 9ರಂದು ಮದುವೆಯಾಗಿದ್ದರು. ಮದುವೆಯ ಬಳಿಕ ತ್ವಿಶಾಗೆ ಮಾನಸಿಕ ಕಿರುಕುಳ ನೀಡಲಾಗುತ್ತಿತ್ತು, ಅವಹೇಳನಕಾರಿ ಮಾತುಗಳನ್ನು ಆಡಲಾಗುತ್ತಿತ್ತು ಹಾಗೂ ಆಕೆಯ ವೈಯಕ್ತಿಕ ವಿಚಾರಗಳನ್ನೇ ಮುಂದಿಟ್ಟುಕೊಂಡು ಪತಿ ಕಿರುಕುಳ ನೀಡುತ್ತಿದ್ದರು ಎಂದು ಸಿಬಿಐ ಆರೋಪಿಸಿದೆ.

ಇದರ ಜೊತೆಗೆ ಹಣದ ವಿಚಾರವೂ ದಾಂಪತ್ಯದಲ್ಲಿ ವಿವಾದಕ್ಕೆ ಕಾರಣವಾಗಿತ್ತು ಎನ್ನಲಾಗಿದೆ. ತ್ವಿಶಾ ಷೇರುಗಳಲ್ಲಿ ಸುಮಾರು 20 ಲಕ್ಷ ರೂ. ಹೂಡಿಕೆ ಮಾಡಿದ್ದಳು. ಈ ಹಣವನ್ನು ಜಂಟಿ ಬ್ಯಾಂಕ್ ಖಾತೆಗೆ ವರ್ಗಾಯಿಸುವಂತೆ ಸಮರ್ಥ್ ಮತ್ತು ಗಿರಿಬಾಲಾ ಒತ್ತಡ ಹಾಕಿದ್ದರು. ಆದರೆ, ಆ ಹಣ ತನ್ನ ತಂದೆಗೆ ಸೇರಿದ್ದು ಎಂದು ಹೇಳಿ ತ್ವಿಶಾ ಅದಕ್ಕೆ ನಿರಾಕರಿಸಿದ್ದಳು.
ಏಪ್ರಿಲ್‌ನಲ್ಲಿ ತ್ವಿಶಾ ಗರ್ಭಿಣಿಯಾಗಿರುವುದು ಗೊತ್ತಾಗಿತ್ತು. ಈ ಗರ್ಭಧಾರಣೆಯನ್ನು ಮುಂದುವರಿಸುವ ಬಗ್ಗೆ ಆಕೆಗೆ ಗೊಂದಲವಿತ್ತು. ಈ ವಿಚಾರದಲ್ಲೂ ಕುಟುಂಬದಲ್ಲಿ ಮನಸ್ತಾಪ ಉಂಟಾಗಿತ್ತು. ಮೇ 6ರಂದು ಗರ್ಭಧಾರಣೆ ಅಂತ್ಯಗೊಳಿಸಲು ಔಷಧದ ಮೊದಲ ಡೋಸ್ ತೆಗೆದುಕೊಂಡಿದ್ದಳು.
ಮೇ 7 ಮತ್ತು 8ರಂದು ಔಷಧ ಮುಂದುವರಿಸಿದ ಬಳಿಕ ತ್ವಿಶಾಗೆ ರಕ್ತಸ್ರಾವವಾಗಿತ್ತು. ಇದೇ ವಿಚಾರದಲ್ಲಿ ಅತ್ತೆಯೊಂದಿಗೆ ಮತ್ತಷ್ಟು ಮನಸ್ತಾಪ ಉಂಟಾಗಿತ್ತು. ಬಳಿಕ ತ್ವಿಶಾ ತನ್ನ ತಾಯಿಗೆ ತಾನು ತುಂಬಾ ಒತ್ತಡದಲ್ಲಿದ್ದೇನೆ ಮತ್ತು ಮನೆಯಲ್ಲಿ ಉಸಿರುಗಟ್ಟಿದಂತಾಗುತ್ತಿದೆ ಎಂದು ಕರೆ ಮೂಲಕ ಅಳುತ್ತಾ ಹೇಳಿದ್ದಳು. ಇದನ್ನೂ ಓದಿ: ನಲಪಾಡ್ ಆರತಕ್ಷತೆಯಲ್ಲಿ `ಕಾಂತಾ’ ಹಾಡು ಹಾಡಿದ ಕಿಚ್ಚ – ವೀಡಿಯೋ ವೈರಲ್
ಇದರ ಬೆನ್ನಲ್ಲೇ ತ್ವಿಶಾ ಭೋಪಾಲ್‌ನಿಂದ ಹೊರಟು ತನ್ನ ಕುಟುಂಬದವರ ಬಳಿ ಹೋಗಲು ನಿರ್ಧರಿಸಿದ್ದಳು. ರೈಲು ಟಿಕೆಟ್ ಬುಕ್ ಮಾಡಲು ತಂದೆಯಿಂದ ಹಣ ಪಡೆದು ಟಿಕೆಟ್ ಕೂಡ ಮಾಡಿಸಿಕೊಂಡಿದ್ದಳು. ಮದುವೆಯನ್ನು ಉಳಿಸಿಕೊಳ್ಳಲು ಪ್ರಯತ್ನಿಸಿದ್ದೇನೆ ಆದರೆ, ಪರಿಸ್ಥಿತಿ ಸುಧಾರಿಸಿಲ್ಲ ಎಂದು ಅತ್ತಿಗೆಗೆ ಹೇಳಿದ್ದಳು.

ರಾತ್ರಿ 9:36ಕ್ಕೆ ತ್ವಿಶಾ ತನ್ನ ಅತ್ತಿಗೆಗೆ ʼನನ್ನನ್ನು ಈಗ ನೆಮ್ಮದಿಯಿಂದ ಸಾಯಲು ಬಿಡಿʼ ಎಂದು ತನ್ನ ಮೆಸೇಜ್ ಕಳುಹಿಸಿದ್ದಳು. ಸುಮಾರು 9:40ಕ್ಕೆ ಸಿಸಿಟಿವಿಯಲ್ಲಿ ತ್ವಿಶಾ ಒಬ್ಬಳೇ ಟೆರೆಸ್ ಕಡೆಗೆ ಹೋಗುತ್ತಿರುವುದು ಸಿಸಿಟಿವಿ ದೃಶ್ಯಗಳಲ್ಲಿ ಕಂಡುಬಂದಿದೆ.
ರಾತ್ರಿ 10:05ರ ಸುಮಾರಿಗೆ ತ್ವಿಶಾ ತಾಯಿಗೆ ಪದೇಪದೇ ಕರೆ ಮಾಡಲು ಪ್ರಯತ್ನಿಸಿದ್ದಾಳೆ. ಅದಾದ ಕೆಲವೇ ಕ್ಷಣಗಳ ನಂತರ ತ್ವಿಶಾ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಸುಮಾರು 10:16ಕ್ಕೆ ಗಿರಿಬಾಲಾ ತ್ವಿಶಾಳನ್ನು ಹುಡುಕಲು ತೆರಳಿದ್ದು, 10:23ರ ವೇಳೆಗೆ ಗಿರಿಬಾಲಾ ಮತ್ತು ಸಮರ್ಥ್ ಟೆರೇಸ್ ಕಡೆಗೆ ಹೋಗುತ್ತಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ.
ನಂತರ ತ್ವಿಶಾಳನ್ನು ಕೆಳಗೆ ಕರೆತಂದು ಭೋಪಾಲ್ ಏಮ್ಸ್‌ಗೆ ಕರೆದೊಯ್ಯಲಾಯಿತು. ರಾತ್ರಿ ಸುಮಾರು 10:55ಕ್ಕೆ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದರು. ಎರಡನೇ ಮರಣೋತ್ತರ ಪರೀಕ್ಷೆಯಲ್ಲೂ ಸಾವಿಗೆ ನೇಣು ಬಿಗಿದ ಪರಿಣಾಮ ಉಸಿರುಗಟ್ಟುವಿಕೆಯೇ ಕಾರಣ ಮತ್ತು ಸಾವಿನ ವಿಧಾನ ಆತ್ಮಹತ್ಯೆ ಎಂದು ಹೇಳಲಾಗಿದೆ. ದೈಹಿಕ ಹಲ್ಲೆಯನ್ನು ಸೂಚಿಸುವ ಯಾವುದೇ ಮಹತ್ವದ ಗಾಯ ಪತ್ತೆಯಾಗಿಲ್ಲ ಎಂದು ವೈದ್ಯಕೀಯ ಮಂಡಳಿ ದಾಖಲಿಸಿದೆ. ಇದನ್ನೂ ಓದಿ: ಟಗರು ಪಲ್ಯ ನಾಯಕ ನಾಗಭೂಷಣ್ ಹೊಸ ಸಿನಿಮಾ ಘೋಷಣೆ
ಸಿಬಿಐ ಪ್ರಕಾರ, ತ್ವಿಶಾಳ ಸಾವಿಗೆ ನೇರ ದೈಹಿಕ ಹಲ್ಲೆ ಕಾರಣವಾಗಿಲ್ಲ. ಬದಲಿಗೆ ನಿರಂತರ ಮಾನಸಿಕ ಕ್ರೌರ್ಯದಿಂದ ಆಕೆ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿಗೆ ತಲುಪಿದ್ದರು ಎಂಬುದು ತನಿಖಾ ಸಂಸ್ಥೆಯ ಆರೋಪ. ಆದರೆ, ಪ್ರಕರಣ ಇನ್ನೂ ಸಂಪೂರ್ಣವಾಗಿ ಮುಗಿದಿಲ್ಲ. ತ್ವಿಶಾ ಅವರ ಐಫೋನ್‌ನ ವಿಧಿವಿಜ್ಞಾನ ಪರೀಕ್ಷೆ, ಮನೆಯ DVR ಪರಿಶೀಲನೆ ಹಾಗೂ ಆರೋಪಿಗಳ ಧ್ವನಿ ಮಾದರಿಗಳ ಪರೀಕ್ಷೆಯ ವರದಿಗಾಗಿ ಸಿಬಿಐ ಕಾಯುತ್ತಿದೆ. ಜೊತೆಗೆ ವರದಕ್ಷಿಣೆ ಬೇಡಿಕೆ ಮತ್ತು ವರದಕ್ಷಿಣೆ ಸಾವಿನ ಆರೋಪಗಳ ಕುರಿತ ತನಿಖೆಯನ್ನೂ ಮುಂದುವರಿಸಲು ಅನುಮತಿ ಕೇಳಲಾಗಿದೆ.

