ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ರಚನೆಯಾಗಿರುವ ಹಿನ್ನೆಲೆಯಲ್ಲಿ, ನಗರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ, ಅಪರಾಧ ನಿಯಂತ್ರಣ, ಸಂಚಾರ ನಿರ್ವಹಣೆ ಹಾಗೂ ಸಾರ್ವಜನಿಕ ಸುರಕ್ಷತೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ನಿರ್ವಹಿಸಲು ಬೆಂಗಳೂರು ನಗರ ಪೊಲೀಸ್ ಆಯುಕ್ತಾಲಯವನ್ನು ಸಮಗ್ರವಾಗಿ ಪುನರ್ಸಂಘಟಿಸಲು ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.
ಇಂದು ವಿಧಾನಸೌಧದಲ್ಲಿ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು, ಬೆಂಗಳೂರಿನಲ್ಲಿ ಐದು ಪ್ರತ್ಯೇಕ ಕಮಿಷನರೇಟ್ಗಳ ರಚನೆ ಆಗಲಿದೆ. ಇದಕ್ಕೆ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ ಎಂದರು. ಇದನ್ನೂ ಓದಿ: ಯಾವುದೇ ರಾಜಕೀಯ ಪಕ್ಷ ನಮ್ಮ ಭೇಟಿಗೆ ಮನವಿ ಮಾಡಿಲ್ಲ: ಚುನಾವಣಾ ಆಯೋಗ ಸ್ಪಷ್ಟನೆ
ಸದ್ಯ ಚಾಲ್ತಿಯಲ್ಲಿರುವ ಬೆಂಗಳೂರು ನಗರ ಪೊಲೀಸ್ ಆಯುಕ್ತಾಲಯವನ್ನು ಮುಖ್ಯ ಪೊಲೀಸ್ ಆಯುಕ್ತರ ಒಟ್ಟಾರೆ ಮೇಲ್ವಿಚಾರಣೆಯಡಿಯಲ್ಲಿ ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ ಮತ್ತು ಕೇಂದ್ರ ಎಂಬ ಐದು ಪ್ರತ್ಯೇಕ ಪೊಲೀಸ್ ಆಯುಕ್ತಾಲಯಗಳಾಗಿ ವಿಭಜಿಸಿ ಪುನರ್ ರಚಿಸಲಾಗುವುದು ಎಂದು ತಿಳಿಸಿದರು.
1,022 ಹೊಸ ಹುದ್ದೆ ಸೃಷ್ಟಿ:
ಪ್ರಸ್ತುತ ಪೊಲೀಸ್ ಆಯುಕ್ತರ ಹುದ್ದೆಯನ್ನು `ಮುಖ್ಯ ಪೊಲೀಸ್ ಆಯುಕ್ತರು’ ಎಂದು ಉನ್ನತೀಕರಿಸಲಾಗುವುದು. ಜಂಟಿ ಅಥವಾ ಅಪರ ಪೊಲೀಸ್ ಆಯುಕ್ತರು(ಸಂಚಾರ) ಹುದ್ದೆಯನ್ನು `ಪೊಲೀಸ್ ಆಯುಕ್ತರು (ಸಂಚಾರ)’ ಎಂದು ಮರುಪದನಾಮೀಕರಿಸಲಾಗುವುದು. ಈ ಯೋಜನೆಗೆ ಅಗತ್ಯವಿರುವಂತೆ ಒಟ್ಟು 1,022 ಹೊಸ ಹುದ್ದೆಗಳನ್ನು ಸೃಷ್ಟಿಸಲು ಆರ್ಥಿಕ ಇಲಾಖೆಯು ಒಪ್ಪಿಗೆ ನೀಡಿದ್ದು, ಸಚಿವ ಸಂಪುಟ ಅನುಮೋದಿಸಿದೆ ಎಂದರು.
ಪ್ರಸ್ತಾವಿತ ಘಟಕಗಳಲ್ಲಿ ಅಪರಾಧ ಪ್ರಕರಣಗಳ ನಿರ್ವಹಣೆ, ಸಂಚಾರ ದಟ್ಟಣೆ ನಿಯಂತ್ರಣ ಹಾಗೂ ಸಾರ್ವಜನಿಕ ಭದ್ರತೆಗಾಗಿ ಒಟ್ಟು 6,550 ಹುದ್ದೆಗಳ ಅಗತ್ಯವಿದ್ದು, ಹೊಸ ಹುದ್ದೆಗಳ ಜೊತೆಗೆ ಪ್ರಸ್ತುತ ಚಾಲ್ತಿಯಲ್ಲಿರುವ ಹುದ್ದೆಗಳನ್ನು ಮರುನಿಯೋಜಿಸಿ ವ್ಯವಸ್ಥೆಯನ್ನು ಬಲಪಡಿಸಲಾಗುವುದು ಎಂದು ಸಚಿವರು ತಿಳಿಸಿದರು.
ಇನ್ನು ಸಂಚಾರ ನಿರ್ವಹಣೆಗೆ ಅನುಕೂಲವಾಗುವಂತೆ ಕೇಂದ್ರ ಸಂಚಾರ ವಿಭಾಗಕ್ಕೆ 2, ಪಶ್ಚಿಮ ಸಂಚಾರ ವಿಭಾಗಕ್ಕೆ 1, ಉತ್ತರ ಸಂಚಾರ ವಿಭಾಗಕ್ಕೆ 1 ಮತ್ತು ಪಶ್ಚಿಮ ಕಾನೂನು ಸುವ್ಯವಸ್ಥೆ ವಿಭಾಗಕ್ಕೆ 2ರಂತೆ ಒಟ್ಟು 6 ಹೊಸ ಎಸಿಪಿ (ಂಅP) ಹುದ್ದೆಗಳನ್ನು ಸೃಷ್ಟಿಸಲಾಗುವುದು. ಪ್ರತಿಯೊಂದು ಎಸಿಪಿ ಕಚೇರಿಗೆ ತಲಾ 5 ಕಾರ್ಯಕಾರಿ ಹುದ್ದೆಗಳನ್ನು ಹೊಸದಾಗಿ ನೀಡಲಾಗುವುದು ಎಂದರು. ಆಡಳಿತಾತ್ಮಕ ವೆಚ್ಚವನ್ನು ಸರಳೀಕರಿಸಲು, ಪ್ರಸ್ತುತ ಇರುವ ಸಿಎಆರ್ ಘಟಕಗಳಿಂದಲೇ ಹುದ್ದೆಗಳನ್ನು ಮರುನಿಯೋಜಿಸಿ ಪೂರ್ವ ವಿಭಾಗಕ್ಕಾಗಿ ಹೊಸ ಸಿಎಆರ್ ಘಟಕವನ್ನು ರಚಿಸಲಾಗುವುದು ಎಂದು ಹೇಳಿದರು.
ನ್ಯಾಯಾಂಗ ಡಿಜಿಟಲೀಕರಣಕ್ಕೆ ರೂ.704 ಕೋಟಿ:
ಕರ್ನಾಟಕದ ನ್ಯಾಯಾಂಗ ವ್ಯವಸ್ಥೆಯ ಡಿಜಿಟಲೀಕರಣ ಮತ್ತು ಡಿಜಿಟಲ್ ರೂಪಾಂತರವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ರೂ.704 ಕೋಟಿ ವೆಚ್ಚದ ಯೋಜನೆಗೆ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಇಂದು ನಡೆದ ಸಚಿವ ಸಂಪುಟ ಅನುಮೋದನೆ ನೀಡಿದೆ. ಕರ್ನಾಟಕ ರಾಜ್ಯ ದತ್ತಾಂಶ ಕೇಂದ್ರದ (ಕೆಎಸ್ಡಿಸಿ) ಮೂಲಕ ನ್ಯಾಯಾಂಗಕ್ಕಾಗಿ ದತ್ತಾಂಶ ಕೇಂದ್ರ ಹಾಗೂ ವಿಪತ್ತು ಮರುಸ್ಥಾಪನಾ ಕೇಂದ್ರ ಸ್ಥಾಪಿಸುವುದು ಸೇರಿದಂತೆ ವಿವಿಧ ಡಿಜಿಟಲೀಕರಣ ಮತ್ತು ಡಿಜಿಟಲ್ ರೂಪಾಂತರ ಕಾಮಗಾರಿಗಳನ್ನು ಕೈಗೊಳ್ಳಲು ಸಂಪುಟ ಒಪ್ಪಿಗೆ ನೀಡಿದೆ.
ಸ್ವಯಂ ಸೇವಕರಿಗೆ `ಎಮರ್ಜೆನ್ಸಿ ರೆಸ್ಪಾಂಡರ್ ಕಿಟ್’:
ರಾಜ್ಯದಲ್ಲಿ ನೈಸರ್ಗಿಕ ವಿಕೋಪಗಳು ಮತ್ತು ತುರ್ತು ಪರಿಸ್ಥಿತಿಗಳನ್ನು ಪರಿಣಾಮಕಾರಿಯಾಗಿ ಎದುರಿಸುವ ನಿಟ್ಟಿನಲ್ಲಿ ಕೇಂದ್ರ ಪುರಸ್ಕೃತ `ಯುವ ಆಪದ್ ಮಿತ್ರ’ ಯೋಜನೆಯಡಿ ಆಯ್ಕೆಯಾದ ಸ್ವಯಂಸೇವಕರಿಗೆ ರಕ್ಷಣಾ ಸಾಮಗ್ರಿಗಳನ್ನೊಳಗೊಂಡ `ಎಮರ್ಜೆನ್ಸಿ ರೆಸ್ಪಾಂಡರ್ ಕಿಟ್’ (Emergency Responder Kit) ಖರೀದಿಸಲು ಸಚಿವ ಸಂಪುಟ ಸಭೆಯು ಆಡಳಿತಾತ್ಮಕ ಅನುಮೋದನೆ ನೀಡಿದೆ.
ಈ ಯೋಜನೆಯಡಿ ರಾಜ್ಯದ 11 ಜಿಲ್ಲೆಗಳಾದ ಬಾಗಲಕೋಟೆ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಬೆಂಗಳೂರು ನಗರ, ಕಲಬುರಗಿ, ಕೊಡಗು, ರಾಯಚೂರು, ಶಿವಮೊಗ್ಗ, ಉಡುಪಿ, ಉತ್ತರ ಕನ್ನಡ ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ ಸ್ಕೌಟ್ಸ್ ಮತ್ತು ಎನ್ಎಸ್ಎಸ್ ಹಾಗೂ `ಮೇರಾ ಯುವ ಭಾರತ್’ ಏಜೆನ್ಸಿಗಳ ಮೂಲಕ ಒಟ್ಟು 10,350 ಸ್ವಯಂಸೇವಕರಿಗೆ ತರಬೇತಿ ನೀಡಲಾಗುತ್ತದೆ. ತರಬೇತಿ ಪಡೆದ ಪ್ರತಿಯೊಬ್ಬ ಸ್ವಯಂಸೇವಕರಿಗೆ ತಲಾ 10,000 ರೂ. ವೆಚ್ಚದಲ್ಲಿ ರಕ್ಷಣಾ ಉಪಕರಣಗಳನ್ನೊಳಗೊಂಡ `ಎಮರ್ಜೆನ್ಸಿ ರೆಸ್ಪಾಂಡರ್ ಕಿಟ್’ ಒದಗಿಸಲಾಗುತ್ತದೆ. ಇದರ ಒಟ್ಟು ಅನುದಾನ ವೆಚ್ಚ 10.35 ಕೋಟಿಗಳಾಗಿರುತ್ತದೆ.
ಕ್ರಿಮಿನಲ್ ಕಾನೂನು ತಿದ್ದುಪಡಿ ಕಾಯ್ದೆ-2022 ವಿಧೇಯಕ ಹಿಂಪಡೆಯಲು ನಿರ್ಧಾರ:
`ದಿ ಕ್ರಿಮಿನಲ್ ಲಾ ಅಮೆಂಡ್ಮೆಂಟ್ ಆರ್ಡಿನೆನ್ಸ್, 1944 (ಕರ್ನಾಟಕ ತಿದ್ದುಪಡಿ) ವಿಧೇಯಕ, 2022′ ಅನ್ನು ಹಿಂಪಡೆಯಲು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಇಂದು ನಡೆದ ರಾಜ್ಯ ಸಚಿವ ಸಂಪುಟ ಸಭೆಯು ಅನುಮೋದನೆ ನೀಡಿದೆ. ಕರ್ನಾಟಕ ವಿಧಾನಮಂಡಲದ ಉಭಯ ಸದನಗಳಿಂದ ಅಂಗೀಕಾರಗೊAಡಿದ್ದ ಈ ವಿಧೇಯಕವನ್ನು ಗೌರವಾನ್ವಿತ ರಾಜ್ಯಪಾಲರು ರಾಷ್ಟ್ರಪತಿಗಳ ಅಂಕಿತಕ್ಕಾಗಿ ಕಾಯ್ದಿರಿಸಿದ್ದರು. ಅದರಂತೆ ವಿಧೇಯಕವನ್ನು ಕೇಂದ್ರ ಸರ್ಕಾರದ ಗೃಹ ಸಚಿವಾಲಯಕ್ಕೆ ರವಾನಿಸಲಾಗಿತ್ತು.
ಕೇಂದ್ರದ ಹೊಸ ಕಾನೂನಿನಲ್ಲಿ (ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ, 2023) ಈಗಾಗಲೇ ಈ ಎಲ್ಲಾ ವಿಸ್ತೃತ ಅವಕಾಶಗಳಿರುವುದರಿಂದ, ಕೇಂದ್ರ ಸರ್ಕಾರ ಮತ್ತು ರಾಷ್ಟ್ರಪತಿಗಳ ಅಂಕಿತಕ್ಕಾಗಿ ಬಾಕಿ ಇರುವ `ಕ್ರಿಮಿನಲ್ ಕಾನೂನು ತಿದ್ದುಪಡಿ ವಿಧೇಯಕ, 2022′ ಅನ್ನು ಮುಂದುವರಿಸುವ ಅಗತ್ಯವಿಲ್ಲವೆಂದು ಪರಿಗಣಿಸಿ, ಅದನ್ನು ಅಧಿಕೃತವಾಗಿ ಹಿಂಪಡೆಯಲು ಸಚಿವ ಸಂಪುಟ ಸಭೆಯಲ್ಲಿ ಆಡಳಿತಾತ್ಮಕ ತೀರ್ಮಾನ ಕೈಗೊಳ್ಳಲಾಗಿದೆ.
ಮಿಶ್ರತಳಿ ಹಸು-ಸುಧಾರಿತ ಎಮ್ಮೆ ಖರೀದಿಗೆ ಪ್ರೋತ್ಸಾಹಧನ:
ಉತ್ತರ ಕರ್ನಾಟಕ ಭಾಗದಲ್ಲಿ ಗ್ರಾಮೀಣ ಮಹಿಳೆಯರ ಆರ್ಥಿಕ ಸಬಲೀಕರಣ ಹಾಗೂ ಹೈನುಗಾರಿಕೆಗೆ ಉತ್ತೇಜನ ನೀಡುವ ಉದ್ದೇಶದಿಂದ, ಬೆಳಗಾವಿ ಮತ್ತು ಕಲಬುರಗಿ ವಿಭಾಗಗಳ 9,600 ಅರ್ಹ ಮಹಿಳಾ ಫಲಾನುಭವಿಗಳಿಗೆ ಶೇ.25ರಷ್ಟು ಸಹಾಯಧನದಲ್ಲಿ (ಸಬ್ಸಿಡಿ) ಮಿಶ್ರತಳಿ ಹಸು ಅಥವಾ ಸುಧಾರಿತ ಎಮ್ಮೆ ಖರೀದಿಸಲು ಪ್ರೋತ್ಸಾಹಧನ ನೀಡುವ ಯೋಜನೆಗೆ ಸಚಿವ ಸಂಪುಟ ಸಭೆ ಆಡಳಿತಾತ್ಮಕ ಅನುಮೋದನೆ ನೀಡಿದೆ.
ಯೋಜನೆಯ ಒಟ್ಟು ವೆಚ್ಚ 18.00 ಕೋಟಿ ರೂ.ಗಳಾಗಿದ್ದು, ಬೆಳಗಾವಿ ವಿಭಾಗದ 4,800 ಫಲಾನುಭವಿಗಳಿಗೆ 9.00 ಕೋಟಿ ರೂ. ಹಾಗೂ ಕಲಬುರಗಿ ವಿಭಾಗದ 4,800 ಫಲಾನುಭವಿಗಳಿಗೆ 9.00 ಕೋಟಿ ರೂ. ಅನುದಾನವನ್ನು ಸಮಾನವಾಗಿ ಹಂಚಿಕೆ ಮಾಡಲಾಗಿದೆ. ಪ್ರತಿಯೊಬ್ಬ ಅರ್ಹ ಮಹಿಳಾ ಫಲಾನುಭವಿಗೆ ತಲಾ 18,750 ರೂ.ಗಳಂತೆ ಶೇ.25ರಷ್ಟು ಸರ್ಕಾರಿ ಸಹಾಯಧನ ಸಿಗಲಿದೆ.
ಇತರೆ ಪ್ರಮುಖ ತೀರ್ಮಾನಗಳು:
– KIADB ವತಿಯಿಂದ ಸುವರ್ಣ ಕರ್ನಾಟಕ ಅಭಿವೃದ್ಧಿ ಕಾರಿಡಾರ್ ಯೋಜನೆಗಾಗಿ ಸ್ವಾಧೀನಪಡಿಸಿಕೊಂಡ ಜಮೀನುಗಳ ಪೈಕಿ ಶಿವಮೊಗ್ಗ ಜಿಲ್ಲೆ ಮತ್ತು ತಾಲ್ಲೂಕು, ಸಿದ್ಧಿಪುರ ಮತ್ತು ದೇವಕಾತಿಕೊಪ್ಪ ಗ್ರಾಮಗಳ 362.21 ಎಕರೆ ಜಮೀನುಗಳನ್ನು ಭೂಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡಲು ಒಪ್ಪಿಗೆ.
– KIADB ವತಿಯಿಂದ ಹಾರೋಹಳ್ಳಿ 3ನೇ ಹಂತದ ಕೈಗಾರಿಕಾ ಪ್ರದೇಶಕ್ಕಾಗಿ ಭೂಸ್ವಾಧೀನ ಪಡಿಸಿಕೊಂಡ ಜಮೀನುಗಳ ಪೈಕಿ ಬೆಂಗಳೂರು ದಕ್ಷಿಣ ಜಿಲ್ಲೆ ಹಾರೋಹಳ್ಳಿ ತಾಲ್ಲೂಕು, ಹಾರೋಹಳ್ಳಿ ಹೋಬಳಿ, ಚೀಲೂರು ಗ್ರಾಮದ ಸರ್ವೆ 2.192/1, 192/2 5, 192/30 01-39 ಎಕರೆ-ಗುಂಟೆ ಜಮೀನನ್ನು ಭೂಸ್ವಾಧೀನ ಪ್ರಕ್ರಿಯಿಂದ ಕೈಬಿಡಲು ಒಪ್ಪಿಗೆ.
– ಅಫ್ಜಲಪುರ ತಾಲೂಕಿನಲ್ಲಿ 3791.33 ಲಕ್ಷ ರೂ. ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಅನುಮೋದನೆ.
– ರಾಜ್ಯದ ನ್ಯಾಯಬೆಲೆ ಅಂಗಡಿಗಳಲ್ಲಿ e-PoS, ಎಲೆಕ್ಟ್ರಾನಿಕ್ ತೂಕದ ಯಂತ್ರ ಮತ್ತು ಐರಿಸ್ ಸ್ಕ್ಯಾನರ್ ಯಂತ್ರಗಳನ್ನು ವಾರ್ಷಿಕ ಅಂದಾಜು ರೂ.44.37 ಕೋಟಿಗಳ ಮೊತ್ತದಲ್ಲಿ ಬಾಡಿಗೆ ಆಧಾರದ ಮೇಲೆ ಅಳವಡಿಸಲು ಒಪ್ಪಿಗೆ. ಸಂಪೂರ್ಣ ಕೇಂದ್ರ ಸರ್ಕಾರದ ಅನುದಾನ.
– ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ 400 ಮೊಫಸಿಲ್ ಬಸ್ಸುಗಳು, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ 200 ಮೊಫಸಿಲ್ ಬಸ್ಸುಗಳು ಹಾಗೂ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ 200 ಸಿಟಿ ಬಸ್ಸುಗಳನ್ನು ಒಳಗೊಂಡAತೆ ಒಟ್ಟು 800 ಹೊಸ ಬಿ.ಎಸ್-6 ಸಿಟಿ ಪೂರ್ಣ ನಿರ್ಮಿತ ಮೊಫಸಿಲ್/ಬಸ್ಸುಗಳನ್ನು ಒಟ್ಟು ರೂ. 304 ಕೋಟಿಗಳ ಅಂದಾಜು ಮೊತ್ತದಲ್ಲಿ ಖರೀದಿಸಲು ಆಡಳಿತಾತ್ಮಕ ಅನುಮೋದನೆ
-ಗ್ರೇಟರ್ ಬೆಂಗಳೂರು ಪ್ರಾಧಿಕಾರ ಮತ್ತು ಬೆಂಗಳೂರಿನ 5 ನಗರಪಾಲಿಕೆಗಳ ಸೇವೆಗಳನ್ನು ತಲುಪಿಸಲು ಐದು ಸಂಯೋಜಿತ ಎಂಡ್-ಟು-ಎಂಡ್ ನಾಗರಿಕ ಸೌಲಭ್ಯ ಮತ್ತು ಸೇವಾ ವಿತರಣಾ ಕೇಂದ್ರಗಳನ್ನು ಗ್ಯಾರಂಟಿ ಸೇವಾ ಕೇಂದ್ರಗಳನ್ನು (GBA-GSKs) PPP DEOM ಆಧಾರದ ಮೇಲೆ ಸ್ಥಾಪಿಸಲು ಅನುಮೋದನೆ ನೀಡಲಾಗಿದೆ. ಇದನ್ನೂ ಓದಿ: ಜನವರಿ ಮೊದಲ ವಾರದಲ್ಲಿ ಜಿ.ಪಂಚಾಯತ್, ತಾ.ಪಂಚಾಯತ್ ಚುನಾವಣೆಗೆ ಸಿದ್ಧತೆ

