ಚಾಮರಾಜನಗರ: ಕಾವೇರಿ ವನ್ಯಜೀವಿ ಧಾಮದಲ್ಲಿ ಇತ್ತೀಚೆಗೆ ನಡೆದ ಶೂಟೌಟ್ ಘಟನೆಯ ಬೆನ್ನಲ್ಲೇ ಅರಣ್ಯ ಇಲಾಖೆ (Forest Department) ವಿರುದ್ಧದ ಆಕ್ರೋಶ ತೀವ್ರಗೊಂಡಿದ್ದು, ದುಷ್ಕರ್ಮಿಗಳು ಸ್ಫೋಟಕಗಳನ್ನು ಬಳಸಿ ಅರಣ್ಯ ಇಲಾಖೆಯ ಕಳ್ಳಬೇಟೆ ತಡೆ ಶಿಬಿರಗಳನ್ನು (Anti-Poaching Camps – APC) ಧ್ವಂಸಗೊಳಿಸಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.
ಕೊತ್ತನೂರು ವಲಯ ವ್ಯಾಪ್ತಿಯ ಮಿಂಚಿನಾರೆಹಳ್ಳ ಕಳ್ಳಬೇಟೆ ತಡೆ ಶಿಬಿರದ ಮೇಲೆ ಕಿಡಿಗೇಡಿಗಳು ಡೈನಾಮೈಟ್ ಹಾಗೂ ಜಿಲೆಟಿನ್ ಕಡ್ಡಿಗಳನ್ನು ಬಳಸಿ ಭೀಕರ ಸ್ಫೋಟ ನಡೆಸಿದ್ದಾರೆ. ಸ್ಫೋಟದ ತೀವ್ರತೆಗೆ ಶಿಬಿರದ ಕಟ್ಟಡದ ಗೋಡೆಗಳು ಶಿಥಿಲಗೊಂಡು ಧರೆಗುರುಳಿದ್ದು, ಒಳಭಾಗದಲ್ಲಿದ್ದ ಎಲ್ಲಾ ಪರಿಕರ ಹಾಗೂ ವಸ್ತುಗಳು ಸುಟ್ಟು ಕರಕಲಾಗಿವೆ. ತಮಿಳುನಾಡಿನಿಂದ ಕಾವೇರಿ ನದಿ ದಾಟಿ ಬಂದಿರುವ ದುಷ್ಕರ್ಮಿಗಳ ಗುಂಪು ಈ ದುಷ್ಕೃತ್ಯ ಎಸಗಿರಬಹುದು ಎಂದು ಬಲವಾಗಿ ಶಂಕಿಸಲಾಗಿದೆ.
ಇದಕ್ಕೂ ಮುನ್ನ ಎರಡು ದಿನಗಳ ಹಿಂದಷ್ಟೇ ಕಾವೇರಿ ವನ್ಯಧಾಮದ ಹೊಳೆ ಮುರುದಟ್ಟಿ ಶಿಬಿರದ ಮೇಲೂ ಕಿಡಿಗೇಡಿಗಳು ಜಿಲೆಟಿನ್ ಸ್ಫೋಟಿಸಿದ್ದರು ಎಂದು ಎಸಿಎಫ್ ಮರಿಸ್ವಾಮಿ ಅವರು ಮಾಹಿತಿ ನೀಡಿದ್ದಾರೆ. ಕಳ್ಳಬೇಟೆ ತಡೆ ಶಿಬಿರಗಳು ಹಾಗೂ ಅರಣ್ಯ ಸಿಬ್ಬಂದಿಯನ್ನೇ ಗುರಿಯಾಗಿಸಿಕೊಂಡು ನಿರಂತರವಾಗಿ ಈ ರೀತಿಯ ದಾಳಿಗಳು ನಡೆಯುತ್ತಿರುವುದರಿಂದ ಕಾವೇರಿ ವನ್ಯಧಾಮ ಪ್ರದೇಶದಲ್ಲಿ ತೀವ್ರ ಆತಂಕದ ವಾತಾವರಣ ನಿರ್ಮಾಣವಾಗಿದೆ.

ಎಲ್ಲಿಲ್ಲಿ ದಾಳಿ?
ಕೊತ್ತನೂರು ವಲಯ
ಮಿಂಚಿನಾರೆಹಳ್ಳಿ ಎ.ಪಿ. ಕ್ಯಾಂಪ್ (ಸ್ಫೋಟದಿಂದ ಧ್ವಂಸ)
ಭೀಮೇಶ್ವರಿ ಎ.ಪಿ. ಕ್ಯಾಂಪ್
ಹನೂರು ವಲಯ:
ಒಳ್ಳೆಮರದ ಹಟ್ಟಿ ಎ.ಪಿ. ಕ್ಯಾಂಪ್ (ಸ್ಫೋಟದ ಕೃತ್ಯ)
ಬೂದಿಕೆರೆ ಎ.ಪಿ. ಕ್ಯಾಂಪ್ (ಸ್ಫೋಟದ ಕೃತ್ಯ)
ಬಂಡಹಳ್ಳಿ ಎ.ಪಿ. ಕ್ಯಾಂಪ್
ಕಲಿದೊಡ್ಡಿ ಎ.ಪಿ. ಕ್ಯಾಂಪ್
ಘಟನೆಯ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಹಾಗೂ ಪೊಲೀಸ್ ಪಡೆ ಜಂಟಿ ಕಾರ್ಯಾಚರಣೆ ಆರಂಭಿಸಿದ್ದು, ಗಡಿ ಭಾಗ ಹಾಗೂ ನದಿ ಪಾತ್ರದಲ್ಲಿ ಬಿಗಿ ಭದ್ರತೆ ಮತ್ತು ತೀವ್ರ ಶೋಧ ಕಾರ್ಯ ಕೈಗೊಳ್ಳಲಾಗಿದೆ.

