ಮೈಸೂರು ದಸರಾ (Mysuru Dasara) ಅಂದರೆ ಕಣ್ಮುಂದೆ ಬರುವುದು ರಾಜ ಗಾಂಭೀರ್ಯದಲ್ಲಿ ಹೆಜ್ಜೆ ಹಾಕುವ ಗಜಪಡೆ. ಅದರಲ್ಲೂ ಚಿನ್ನದ ಅಂಬಾರಿ ಹೊತ್ತು ಮೈಸೂರು ರಾಜಬೀದಿಯಲ್ಲಿ ಹೆಜ್ಜೆ ಹಾಕಿದ್ದ ಅಭಿಮನ್ಯುಗೆ ವಿಶೇಷ ಸ್ಥಾನ. ಆದರೆ, ವಯಸ್ಸಿನ ಕಾರಣಕ್ಕೆ ಈ ಬಾರಿ ಅಭಿಮನ್ಯು ದಸರಾ ಆನೆಗಳ ಪಟ್ಟಿಯಿಂದ ಹೊರಗುಳಿದಿದ್ದಾನೆ. ಸತತ ಆರು ಬಾರಿ ಚಿನ್ನದ ಅಂಬಾರಿ ಹೊತ್ತಿದ್ದ ಈ ಗಜರಾಜನಿಗೆ ಇದೀಗ ದಸರಾ ಕರ್ತವ್ಯದಿಂದ ನಿವೃತ್ತಿಯಂತಾಗಿದೆ.
ಮೈಸೂರು ದಸರಾ… ಗಜಪಡೆಯ ಗಾಂಭೀರ್ಯ… ಚಿನ್ನದ ಅಂಬಾರಿ… ಅಂಬಾರಿ ಹೊತ್ತ ಗಜರಾಜನ ರಾಜಗಾಂಭೀರ್ಯದ ಹೆಜ್ಜೆ… ಈ ದೃಶ್ಯಗಳಿಗೆ ತನ್ನದೇ ಆದ ಮೆರುಗು ನೀಡಿದ್ದ ಆನೆ ಅಭಿಮನ್ಯು. ಈ ವರ್ಷದ ದಸರಾದಿಂದ ಈ ದೃಶ್ಯ ನಮಗೆ ಕಾಣುವುದಿಲ್ಲ. ಕಾರಣ ಅಭಿಮನ್ಯ ವಯಸ್ಸಿನ ಕಾರಣಕ್ಕೆ ಕ್ಯಾಪ್ಟನ್ ಸ್ಥಾನದಿಂದ ನಿವೃತ್ತಿ ಪಡೆದಿದ್ದಾನೆ. ಇದನ್ನೂ ಓದಿ: ವೃತ್ತಿಪರ ಡಿಪ್ಲೋಮಾ: ಆಪ್ಷನ್ಸ್ ಎಂಟ್ರಿಗೆ ಆ.21 ಕೊನೆ ದಿನ – ಕೆಇಎ
ಕೂಂಬಿಂಗ್ ಸ್ಪೆಷಲಿಸ್ಟ್ ಎಂದೇ ಖ್ಯಾತಿ ಪಡೆದಿದ್ದ ಅಭಿಮನ್ಯು, ಕಾಡಾನೆಗಳನ್ನು ಸೆರೆಹಿಡಿಯುವ ಕಾರ್ಯಾಚರಣೆಗಳಲ್ಲೂ ತನ್ನ ಸಾಮರ್ಥ್ಯ ಮೆರೆದಿದ್ದ. ಅಪಾಯಕಾರಿ ಆನೆಗಳನ್ನು ನಿಯಂತ್ರಿಸುವಲ್ಲಿ ಪರಿಣತಿ ಪಡೆದಿದ್ದ ಈ ಗಜರಾಜ, ಅರಣ್ಯ ಇಲಾಖೆಯ ಹಲವು ಕಾರ್ಯಾಚರಣೆಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದ. ಹೀಗಾಗಿ ಇವನನ್ನು ಕಂಡರೆ ಅರಣ್ಯ ಅಧಿಕಾರಿಗಳಿಗೆ ಹೆಚ್ಚು ಪ್ರೀತಿ.
ದಸರಾ ಸಂದರ್ಭದಲ್ಲಿ ಮಾತ್ರವಲ್ಲ… ಮೈಸೂರು ಜನರ ಮನದಲ್ಲೂ ಅಭಿಮನ್ಯುಗೆ ವಿಶೇಷ ಸ್ಥಾನವಿದೆ. ಸತತ ಆರು ಬಾರಿ ಚಿನ್ನದ ಅಂಬಾರಿ ಹೊತ್ತು, ಮೈಸೂರಿನ ರಾಜಬೀದಿಯಲ್ಲಿ ರಾಜ ಗಾಂಭೀರ್ಯದಿಂದ ಹೆಜ್ಜೆ ಹಾಕಿದ್ದ ಅಭಿಮನ್ಯು, ಲಕ್ಷಾಂತರ ಜನರ ಕಣ್ಮನ ಸೆಳೆದಿದ್ದ. ಆದ್ರೆ ಕಾಲ ಯಾರನ್ನೂ ಕಾಯೋದಿಲ್ಲ… 60 ವರ್ಷ ವಯಸ್ಸಾಗಿರುವ ಹಿನ್ನೆಲೆ ಈ ಬಾರಿ ಅಭಿಮನ್ಯುವನ್ನು ದಸರಾ ಆನೆಗಳ ಪಟ್ಟಿಯಿಂದ ಕೈಬಿಡಲು ಅರಣ್ಯ ಇಲಾಖೆ ನಿರ್ಧರಿಸಿದೆ. ಇದರೊಂದಿಗೆ ಚಿನ್ನದ ಅಂಬಾರಿ ಹೊತ್ತಿದ್ದ ಅಭಿಮನ್ಯುವಿನ ದಸರಾ ಪಯಣಕ್ಕೆ ತೆರೆ ಬಿದ್ದಂತಾಗಿದೆ. ಇದನ್ನೂ ಓದಿ:ಸಿಕ್ಸ್ ಸಿಡಿಸಿ ದಾಖಲೆ ಬರೆದ ಪಂತ್ – ಸೋಲಿನತ್ತ ಶ್ರೀಲಂಕಾ
ಭೀಮ ಮತ್ತು ಹರ್ಷ ಆನೆಗಳನ್ನು ಮೀಸಲು ಆನೆಗಳನ್ನಾಗಿ ಕಾಯ್ದಿರಿಸಿರುವ ಅರಣ್ಯ ಇಲಾಖೆ, ಅಭಿಮನ್ಯು ಸ್ಥಾನವನ್ನು ಬಾಕಿ ಇಟ್ಟು ಉಳಿದ ಆನೆಗಳ ಪಟ್ಟಿ ಬಿಡುಗಡೆ ಮಾಡಿದೆ. ಮೊದಲ ಹಂತದಲ್ಲಿ ಧನಂಜಯ, ಮಹೇಂದ್ರ, ಏಕಲವ್ಯ, ಪ್ರಶಾಂತ, ಗೋಪಿ, ಶ್ರೀರಾಮ, ಸುಗ್ರೀವ, ಲಕ್ಷ್ಮೀ, ಕಾವೇರಿ ಆಗಮಿಸಲಿವೆ. ಎರಡನೇ ಹಂತದಲ್ಲಿ ರೂಪ, ಚೈತ್ರ ಶ್ರೀಕಂಠ ಆನೆಗಳ ಆಗಮನ ಆಗಲಿದೆ.
ಅಂಬಾರಿ ಇಲ್ಲ… ರಾಜಬೀದಿಯಲ್ಲಿ ಆ ಹೆಜ್ಜೆಗಳಿಲ್ಲ… ದಸರಾ ಮೆರವಣಿಗೆಯಲ್ಲಿ ಅಭಿಮನ್ಯುವಿನ ಗಾಂಭೀರ್ಯವೂ ಇಲ್ಲ… ಆದ್ರೆ, ಮೈಸೂರು ದಸರಾ ಇತಿಹಾಸದ ಪುಟಗಳಲ್ಲಿ ಅಭಿಮನ್ಯುವಿನ ಹೆಸರು ಮಾತ್ರ ಅಚ್ಚಳಿಯದೆ ಉಳಿಯಲಿದೆ. ಒಂದು ಕಾಲದಲ್ಲಿ ಚಿನ್ನದ ಅಂಬಾರಿಯ ಭಾರ ಹೊತ್ತಿದ್ದ ಗಜರಾಜ ಇಂದು ದಸರಾ ಕರ್ತವ್ಯದಿಂದ ದೂರ… ಆದರೂ ಮೈಸೂರು ಜನರ ನೆನಪಿನಲ್ಲಿ ಮಾತ್ರ… ಅಭಿಮನ್ಯು ಸದಾ ಅಂಬಾರಿ ಹೊತ್ತ ಗಜರಾಜನೇ. ಮೈಸೂರು ದಸರಾ ಇತಿಹಾಸದಲ್ಲಿ ರಾಜಗಾಂಭೀರ್ಯದಿಂದ ಹೆಜ್ಜೆ ಹಾಕಿದ ಈ ಗಜರಾಜನ ಕಥೆ…
ಇನ್ನು ನೆನಪು ಮಾತ್ರ.ಇದನ್ನೂ ಓದಿ: ‘ನಮ್ಮ ಮಧ್ಯೆ ಯಾವುದೇ ಮನಸ್ತಾಪ ಇಲ್ಲ’ – ದರ್ಶನ್ ಭೇಟಿ ಬಳಿಕ ಧನ್ವೀರ್ ಸ್ಪಷ್ಟನೆ

